ಹುತಾತ್ಮರ ಸ್ಮರಣಾರ್ಥ ಕೊಪ್ಪಳ ಜಿಲ್ಲಾಡಳಿತದಿಂದ ಮೌನಾಚರಣೆ.

ಕೊಪ್ಪಳ ಜ. ೩೦ (ಕ ವಾ) ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳ ಮೂಲಕ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ೦೨ ನಿಮಿಷಗಳ ಮೌನ ಆಚರಿಸಲಾಯಿತು.
     ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ಜ. ೩೦ ರ ದಿನವನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತವರ ಸ್ಮರಣೆ ಮಾಡುವ ದಿನವನ್ನಾಗಿ ಆಚರಿಸಲಾಗುತ್ತಿದೆ.  ಈ ಬಾರಿ ಸರ್ಕಾರದ ನಿರ್ದೇಶನದಂತೆ ಹುತಾತ್ಮರ ಸ್ಮರಣಾರ್ಥ ಶನಿವಾರದಂದು ಬೆಳಿಗ್ಗೆ ೧೧ ಗಂಟೆಗೆ ಎರಡು ನಿಮಿಷಗಳ ಮೌನವನ್ನು ಆಚರಿಸಿ, ಹುತಾತ್ಮರಿಗೆ ಗೌರವ ಸಲ್ಲಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಜಿ.ಎಲ್. ಅವರು ಹೇಳಿದರು.
     ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಹುತಾತ್ಮರ ಸ್ಮರಣಾರ್ಥ ಎರಡು ನಿಮಿಷಗಳ ಮೌನವನ್ನು ಆಚರಿಸಿದರು.  ಇದಕ್ಕೂ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಪ್ರಿಯವಾಗಿದ್ದ ‘ಸುಮಿರನ ಕರಲೆ ಮೇರೆ ಮನ್’, ‘ವೈಷ್ಣವೊ ಜನತೋ ತೇನೇ ಕಹಿಯೇ’ ಹಾಗೂ ‘ರಘುಪತಿ ರಾಘವ ರಾಜಾರಾಂ’ ಭಜನಾಪದಗಳನ್ನು ಅಂಬಿಕಾ ಭಾಗ್ಯನಗರ ಅವರು ಹಾಡಿದರು.  ಇವರಿಗೆ ರಾಮಚಂದ್ರಪ್ಪ ಉಪ್ಪಾರ್- ಹಾರ್‍ಮೋನಿಯಂ ಹಾಗೂ ಮಾರುತಿ ಬಿನ್ನಾಳ- ತಬಲಾ ಸಾಥ್ ನೀಡಿದರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್,
ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಐ.ಎಸ್.
ಶಿರಹಟ್ಟಿ, , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು
ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  ಎಲ್ಲ ಇಲಾಖೆಗಳ ಜಿಲ್ಲಾ
ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಮೌನಾಚರಣೆಯಲ್ಲಿ
ಪಾಲ್ಗೊಂಡರು.

Please follow and like us:
error