ಶಿಕ್ಷಣ ಸಂಸ್ಥೆ ಮತ್ತು ಸಮಾಜದ ನಡುವೆ ಅವಿನಾಭಾವ ಸಂಬಂಧವಿದೆ -ಡಾ.ವಿಜಯ್‌ಪೂಣಚ್ಚತಂಬಂಡ

ಹೊಸಪೇಟೆ: ಶಿಕ್ಷಣ ಸಂಸ್ಥೆ, ಸತ್ಪ್ರಜೆ ಮತ್ತು ಸಮಾಜ ಇವುಗಳ ಮಧ್ಯೆ ಒಂದು ಅವಿನಾಭಾವ ಸಂಬಂಧವಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಹೇಳಿದರು.
ನಗರದ ವಿಜಯನಗರ ಕಾಲೇಜಿನಲ್ಲಿ ಗುರುವಾರ ಸರ್ವಸಂಘಗಳ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಯ ಉದ್ದೇಶವನ್ನು ಅರ್ಥಮಾಡಿಕೊಂಡ ವಿದ್ಯಾರ್ಥಿಗಳು ಸಮಾಜದ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು.  ಇಂದು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮತ್ತು ರಾಜಕೀಯ ಹೊಣೆಗಾರಿಕೆ ಅವಶ್ಯವಾಗಿದೆ ಎಂದರು.  ಸ್ವಾತಂತ್ರ ಪೂರ್ವದ ನಮ್ಮ ಹಿರಿಯರು ದೇಶಾಭಿಮಾನ ಮತ್ತು ಕರ್ತವ್ಯ ಇವುಗಳನ್ನು ತಮ್ಮ ಮೇಲೆ ಆವಾಹಿಸಿಕೊಂಡ ಪರಿಣಾಮವಾಗಿ ಪ್ರೌಢಶಾಲಾ ಶಿಕ್ಷಣಕ್ಕಿಂತಲೂ ಹೆಚ್ಚು ಓದಲಾಗಲಿಲ್ಲ.  ದೇಶದ ಅಗತ್ಯವನ್ನು ಅರ್ಥಮಾಡಿಕೊಂಡು ವೈಯಕ್ತಿಕ ಬದುಕನ್ನು ಬದುಕಲಾಗಲಿಲ್ಲ. ಕೌಟುಂಬಿಕ ಸುಖದಿಂದ ವಂಚಿತರಾಗಿ ಜೈಲುಸೇರಬೇಕಾಯಿತು.  ಅವರಿಗೆ ದೇಶವನ್ನು ರೂಪಿಸುವ ರಾಷ್ಟ್ರೀಯ ನಾಯಕರು ಕಣ್ಣಮುಂದಿದ್ದರು.  ಆದರೆ ಇಂದು ದೇಶ ನಾಯಕತ್ವದ ಕೊರತೆಯಲ್ಲಿದೆ.  ವಿದ್ಯಾರ್ಥಿಗಳು ಸತ್ಪ್ರಜೆಗಳಾದರೆ ಯಾವ ದೇಶವು ಸಮಸ್ಯೆಯ ಸುಳಿಯಲ್ಲಿ ಸಿಕ್ಕುವುದಿಲ್ಲ.  ಬಹುಕ್ಷೇತ್ರೀಯವಾದ ಸಮಷ್ಟಿಪ್ರಜ್ಞೆ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಿದೆ.  ಪಠ್ಯಕೇಂದ್ರಿತ ಜ್ಞಾನವೇ ಅಂತಿಮವಲ್ಲ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿ ಆಡಳಿತ ಮಂಡಳಿಯ ಅಧ್ಯಕ್ಷ ಗುತ್ತಿಗನೂರ ವಿರೂಪಾಕ್ಷಗೌಡ ಮಾತನಾಡಿ,  ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಮೂಲಕ ತಮ್ಮಲ್ಲಿರುವ ಸಾಂಸ್ಕೃತಿಕ ಜ್ಞಾನವನ್ನು ಅಭಿವ್ಯಕ್ತಿ ಮಾಡುವುದರಿಂದ ಸಮಾಜದಲ್ಲಿ ವಿದ್ಯಾವಂತರೂ ಪ್ರತಿಭಾವಂತರೂ ಆಗಿ ಗೌರವ ಸಂಪಾದಿಸುತ್ತಾರೆ.  ಪಠ್ಯ ಶಿಕ್ಷಣದಂತೆ ಪಠ್ಯೇತರ ಶಿಕ್ಷಣವು ಸಮಾಜದ ಮತ್ತು ದೇಶದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ.  ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ವಿಸ್ತರಿಸಿಕೊಳ್ಳಬೇಕು ಎಂದರು.  ವಿವಿಧ ಸಾಂಸ್ಕೃತಿಕ ಸಂಘಟನೆಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.  ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಪ್ರೊ. ಎಸ್.ಎಸ್. ಪೋಲಿಸ್ ಪಾಟೀಲ್ ಮಾತನಾಡಿ, ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವುದರ ಮೂಲಕ ಅವರ ಸುಪ್ತ ಪ್ರತಿಭೆಗೆ ಪ್ರಕಾಶನ ನೀಡುವಂತಾಗುತ್ತದೆ.  ನಮ್ಮ ಕಾಲೇಜು ನಿರಂತರವಾಗಿ ಅಂತಹ ಪ್ರಯತ್ನವನ್ನು ಮಾಡುತ್ತಾಬಂದಿದೆ ಎಂದರು.  ಸಮಾರಂಭದಲ್ಲಿ ಆಡಳಿತ ಮಂಡಳಿಯ ಸದಸ್ಯ ಜಿ.ಲಿಂಗನಗೌಡ, ಜಿ. ಸತೀಶ ಮತ್ತು ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವಿಜಯ್ ಎಸ್ ಗುಳಲಕಾಯಿ ಮತ್ತು ವಿವಿಧ ಸಂಘಗಳ ಉಪಾಧ್ಯಕ್ಷರು ಹಾಜರಿದ್ದರು.   ಡಾ.ಎಸ್.ವೈ. ತಿಮ್ಮಾರೆಡ್ಡಿ ನಿರೂಪಿಸಿದರು. ಡಾ. ಉಮಾಪತಿ ಪತ್ತಾರ ಸ್ವಾಗತಿಸಿದರು. ಪ್ರೊ. ಪ್ರಕಾಶ ಕಟ್ಟಿಮನಿ ವಂದಿಸಿದರು.

Leave a Reply