‘ರಂಗ ದೀವಟಿಗೆಗಳು’ ರೇಡಿಯೋ ಸರಣಿ ರಾಜ್ಯ ಮಟ್ಟದಲ್ಲಿ ಪ್ರಸಾರ.

ಕೊಪ್ಪಳ ಜ. ೦೨ (ಕ ವಾ) ಕಲಬುರ್ಗಿ ಆಕಾಶವಾಣಿ ನಿರ್ಮಾಣದ ವೃತ್ತಿ ನಾಟಕ ಕಂಪನಿಗಳ ಕುರಿತಾದ ಕಾರ್ಯಕ್ರಮ ಸರಣಿ  ‘ರಂಗ ದೀವಟಿಗೆಗಳು’ ಇದೇ ಜನೆವರಿ ೫ ರಿಂದ, ಪ್ರತಿ ಮಂಗಳವಾರ ರಾತ್ರಿ ೯.೩೦ ರಿಂದ ೧೦.೦೦ ಗಂಟೆಯವರೆಗೆ ೧೩ಕಂತುಗಳಲ್ಲಿ ರಾಜ್ಯದ ಎಲ್ಲಾ ಆಕಾಶವಾಣಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರವಾಗಲಿದೆ.   
೨೦೧೫ನೇ ಸಾಲಿನ ರಾಜ್ಯ ಮಟ್ಟದ ಆಕಾಶವಾಣಿ ವಾರ್ಷಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಈ ಸರಣಿಯನ್ನು ಖ್ಯಾತ ರಂಗ ಕರ್ಮಿ ಹಾಗೂ ರಂಗ ಇತಿಹಾಸಕಾರರಾಗಿರುವ ಗವೀಶ ಹಿರೇಮಠ ಅವರು ರಚಿಸಿದ್ದು ಎಚ್.ಎನ್ ಅನೀಲಕುಮಾರ ಅವರು ನಿರ್ಮಾಣ ಮಾಡಿದ್ದಾರೆ.  ಮಧು ದೇಶಮುಖ ಅವರು ನಿರ್ಮಾಣದಲ್ಲಿ ನೆರವು ನೀಡಿದ್ದಾರೆ.
ಒಂದು ಕಾಲದಲ್ಲಿ ಮನರಂಜನೆಯ ಪ್ರಮುಖ ಮೂಲಗಳಾಗಿದ್ದು, ಜನ ಸಮೂಹವನ್ನು ಮೋಡಿ ಮಾಡುತ್ತಾ, ಸಾಮಾಜಿಕ ಮೌಲ್ಯಗಳ ದೀವಿಟಿಗೆಗಳನ್ನು ಹಿಡಿದು, ಆ ಬೆಳಕನ್ನು ಎಲ್ಲೆಡೆ ಪಸರಿಸುತ್ತ ತಿರುಗಾಡುವ ವಿಶ್ವವಿದ್ಯಾಲಯಗಳೆಂದೇ  ಪ್ರಸಿದ್ದವಾಗಿದ್ದ ಈ ಕಂಪನಿಗಳು, ಬದಲಾದ ಸಮಯ ಹಾಗೂ ಆಧುನಿಕ ಮನರಂಜನೆಯ ಸಾಧನಗಳ ಸ್ಪರ್ಧೆಯಿಂದಾಗಿ ಒಂದೊಂದಾಗಿ ನೇಪಥ್ಯಕ್ಕೆ ಸರಿದು ಈಗಂತೂ ಕೆಲವೇ ಕಂಪನಿಗಳು ಉಳಿದುಕೊಂಡಿವೆ.
ಅಂತಹ ಕೆಲವು ಕಂಪನಿಗಳ ಹೋರಾಟದ ಬದುಕಿನ ಪರಿಚಯ, ವೈಭವದ ದಿನಗಳು, ಏಳು ಬೀಳುಗಳು, ಕಂಪನಿ ಮಾಲಿಕರ, ಕಲಾವಿದರ ಬದುಕಿನ ಸುಖ ದುಃಖಗಳು, ಜೊತೆಗೆ ಜನಪ್ರಿಯ ನಾಟಕಗಳ ದೃಶ್ಯಗಳೊಂದಿಗೆ ಈ ಕಾರ್ಯಕ್ರಮ ಸರಣಿ ಮೂಡಿ ಬರಲಿದೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ಅವರು ತಿಳಿಸಿದ್ದಾರೆ.
Please follow and like us:
error