ಬೆಂಗಳೂರಿನಲ್ಲಿ ಸದಾಶಿವ ಪಾಟೀಲರ ಬೇಂದ್ರೆ ಗಾಯನೋತ್ಸವ

ವರಕವಿ ಮಹಾನ್ ಚಿಂತಕ ಬೇಂದ್ರೆ ಸಾಹಿತ್ಯ ಸಾಧನೆಯ ಸವಿ ನೆನಪಿಗಾಗಿ, ರಾಷ್ಟ್ರಮಟ್ಟದಲ್ಲಿ ವರಕವಿ ಬೇಂದ್ರೆ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಸುರ್ವೆ ಕಲ್ಚರಲ್ ಅಕಾಡೆಮಿಯಿಂದ ಡಿಸೆಂಬರ್ ೧೧ ರಿಂದ ನಾಲ್ಕು ದಿನಗಳ ಕಾಲ ಬೆಂಗಳೂರು ನಗರದ ನಯನ ಹಾಗೂ ಸಂಸ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಲ್ಕು ದಿನಗಳ ಪ್ರತಿಭೋತ್ಸವದಲ್ಲಿ ಕೊಪ್ಪಳ ಜಿಲ್ಲೆಯ ಹಲವರಿಗೆ ಅವಕಾಶ ನೀಡಲಾಗಿದೆ. ದಿನಾಂಕ ೧೧ ರಂದು ನಯನ ರಂಗಮಂದಿರದಲ್ಲಿ ” ಬೇಂದ್ರೆ ಸಾಹಿತ್ಯದ ಹಲವು ಮುಖಗಳು” ಎಂಬ ವಿಚಾರ ಸಂಕಿರಣ ಮತ್ತು ಕರ್ನಾಟಕದ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಕವಿ ಡಾ. ಎಲ್. ಹನುಮಂತಯ್ಯನವರಿಗೆ ಅಭಿನಂದನೆ ಹಾಗೂ ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕೊಪ್ಪಳದ ಹೆಸರಾಂತ ಗಾಯಕ, ಸದಾಶಿವ ಪಾಟೀಲ್ ಹಾಗೂ ತಂಡದಿಂದ ಬೇಂದ್ರೆ ಗೀತೆಗಳ ಗಾಯನ ಕಾರ್ಯಕ್ರಮ  ನಡೆಯಲಿದೆ.
ನಾಲ್ಕು ದಿನಗಳ ಈ ಸಮ್ಮೇಳನಕ್ಕೆ, ಹಿರಿಯ ತಂತ್ರಜ್ಞ  ಹಾಗೂ ಸಾಮಾಜಿಕ ಹೋರಾಟಗಾರ ಎಂ. ಜಿ. ಸೋಮಶೇಖರ್ ಸಮ್ಮೇಳನಾಧ್ಯಕ್ಷರಾಗಿದ್ದು, ನಾಲ್ಕು ದಿನಗಳ ಕಾಲ ಅನೇಕ ಕವಿಗಳು ಬೇಂದ್ರೆ ಹಾಗೂ ವೈವಿದ್ಯಮಯ ಕವಿತೆ ವಾಚನ ಮಾಡಲಿದ್ದಾರೆ. ಅನೇಕ ಸಾಂಸ್ಕೃತಿಕ  ಕಾರ್ಯಕ್ರಮ ಜರುಗಲಿದ್ದು, ಸಮಾರಂಭದಲ್ಲಿ ಗೌರವ ಅಧ್ಯಕ್ಷ ಪಿ. ನಾಗರಾಜ್ ಹಾಗೂ ಸ್ಥಾಪಕ ಅಧ್ಯಕ್ಷ  ರಮೇಶ ಸುರ್ವೆ ಸೇರಿದಂತೆ, ಅನೇಕ ಗಣ್ಯರು ಉಪಸ್ಥಿತರಿರುತ್ತಾರೆ. ಸಮಾರಂಭವನ್ನು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಉದ್ಘಾಟಿಸಲಿದ್ದಾರೆ. 
ಗಾಯಕ ಸದಾಶಿವ ಪಾಟೀಲ ಮತ್ತು ಸಮಾಜ ಸೇವಕ ಎಂ. ಬಿ. ಅಳವಂಡಿಯವರಿಗೆ ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ, ಗಂಗಾವತಿಯ ಡಾ|| ಜಿ. ಶರಶ್ಚಂದ್ರ ರಾನಡೆಗೆ ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ, ಯಲಬುರ್ಗಾದ ನಾಗರಾಜ ನಡುವಲಕೇರಿಯವರಿಗೆ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅಲ್ಲದೇ ಅನೇಕರು ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply