ಗವಿಮಠ ಜಾತ್ರೆಯಲ್ಲಿ ಕಾನೂನು ಅರಿವು ಲೋಕ ಅದಾಲತ್ ಬಗ್ಗೆ ಜಾಗೃತಿ.

ಕೊಪ್ಪಳ ಜ. ೨೮ (ಕ ವಾ) ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಆವರಣದಲ್ಲಿ ಲೋಕ ಅದಾಲತ್ ಹಾಗೂ ಕಾನೂನಿನ ಅರಿವು ಕುರಿತು ಸಾರ್ವಜನಿಕರಿಗೆ ಅರಿವು ಮ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಲ್ಲ ತಾಲೂಕು ಕಾನೂನು ಸೇವಾ ಸಮಿತಿಗಳಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪ್ರತಿ ಎರಡನೆ ಶನಿವಾರ ಮಾಸಿಕ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ತಿಳಿಸಿದ್ದಾರೆ.
     ಪ್ರಸಕ್ತ ವರ್ಷದ ಪ್ರತಿ ಎರಡನೆ ಶನಿವಾರದಂದು ಮಾಸಿಕ ಲೋಕ ಅದಾಲತ್ ಅನ್ನು ಆಯೋಜಿಸಲಾಗುತ್ತಿದೆ.  ೨೦೧೬ ರ ಫೆ. ೧೩ ರಂದು ಬ್ಯಾಂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳು,
ಮಾರ್ಚ್ ೧೨ ರಂದು ಸಿವಿಲ್ ಮತ್ತು ಕಂದಾಯ ಪ್ರಕರಣಗಳು, ಏಪ್ರಿಲ್ ೦೯ ರಂದು ಕಾರ್ಮಿಕ
ಮತ್ತು ಕೌಟುಂಬಿಕ ಪ್ರಕರಣಗಳು, ಮೇ ೧೪ / ಜೂನ್ ೧೧ ರಂದು ಮೋಟಾರು ವಾಹನ ಅಪಘಾತ
ಪ್ರಕರಣಗಳು, ಜುಲೈ ೦೯ ರಂದು ವಿದ್ಯುತ್, ನೀರು, ದೂರವಾಣಿ, ಸಾರ್ವಜನಿಕ ಹಿತಾಸಕ್ತಿ
ಪ್ರಕರಣಗಳು, ಆಗಸ್ಟ್ ೧೩ ರಂದು ಬ್ಯಾಂಕ್‌ಗೆ ಸಂಬಂಧಿಸಿದ ಪ್ರಕರಣಗಳು, ಸೆಪ್ಟಂಬರ್ ೧೦
ರಂದು ಕ್ರಿಮಿನಲ್ ಪ್ರಕರಣಗಳು, ಅಕ್ಟೋಬರ್ ೦೮ ರಂದು ಟ್ರಾಫಿಕ್, ಮುನಿಸಿಪಲ್
ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕ ಅದಾಲತ್ ಜರುಗಲಿದೆ.  ಗವಿಸಿದ್ದೇಶ್ವರ ಜಾತ್ರೆಗೆ
ಲಕ್ಷಾಂತರ ಜನರು ಸುಮಾರು ಹದಿನೈದು ದಿನಗಳ ಕಾಲ ಆಗಮಿಸಲಿದ್ದು, ಈ ಅವಕಾಶವನ್ನು
ಬಳಸಿಕೊಂಡು, ಕಾನೂನಿನ ಅರಿವು ಹಾಗೂ ಲೋಕ ಅದಾಲತ್ ಬಗ್ಗೆ ಹೆಚ್ಚಿನ ಜನರನ್ನು ತಲುಪುವಂತೆ
ಮಾಡುವ ನಿಟ್ಟಿನಲ್ಲಿ, ಕಾನೂನು ಸೇವಾ ಪ್ರಾಧಿಕಾರವು ಜಾತ್ರಾ ಆವರಣದಲ್ಲಿ ಮಳಿಗೆಯನ್ನು
ತೆರೆದಿದೆ.  ಈ ಮಳಿಗೆಯಲ್ಲಿ ಲೋಕ ಅದಾಲತ್‌ಗೆ ಸಂಬಂಧಿಸಿದ ವೇಳಾಪಟ್ಟಿ ಹಾಗೂ ಲೋಕ
ಅದಾಲತ್‌ನಿಂದ ಕಕ್ಷಿದಾರರಿಗೆ ಆಗುವ ಅನುಕೂಲಗಳ ಬಗ್ಗೆ ಬ್ಯಾನರ್
ಪ್ರದರ್ಶಿಸಲಾಗುತ್ತಿದೆ.  ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ‘ಜನ
ಸಾಮಾನ್ಯರಿಗೆ ಕಾನೂನಿನ ಮಾಹಿತಿ’ ಎನ್ನುವ ಪುಸ್ತಕ ಹಾಗೂ ಕಾನೂನಿಗೆ ಸಂಬಂಧಿತ
ಕರಪತ್ರಗಳು, ಮಡಿಕೆ ಪತ್ರಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ಲೋಕ
ಅದಾಲತ್‌ಗಳ ಮೂಲಕ ಸೌಹಾರ್ದಯುತವಾಗಿ ಪ್ರಕರಣವು ಇತ್ಯರ್ಥಗೊಳ್ಳುವುದರಿಂದ ಬಾಂಧವ್ಯವು
ಉಳಿದು ವಿವಾದವು ಇತ್ಯರ್ಥಗೊಳ್ಳಲಿದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ವಿಲೇವಾರಿಗಾಗಿ
ಇದೊಂದು ವಿಶೇಷ ಅವಕಾಶವಾಗಿದ್ದು, ಸಾರ್ವಜನಿಕರು  ಸದುಪಯೋಗಪಡಿಸಿಕೊಳ್ಳುವಂತೆ  ಜಿಲ್ಲಾ
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಶ್ರೇಣಿ ಸಿವಿಲ್
ನ್ಯಾಯಾಧೀಶರಾದ ಬಿ. ದಶರಥ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇದರ ಜೊತೆಗೆ ಕೈ ಜೋಡಿಸಿದ್ದು, ಮಕ್ಕಳ ಪೌಷ್ಠಿಕ ಆಹಾರ, ಗರ್ಭಿಣಿಯರು ಸೇವಿಸಬೇಕಾದ ಪೌಷ್ಠಿಕ ಆಹಾರಗಳ ಬಗ್ಗೆ ಮಳಿಗೆಯಲ್ಲಿ ಕರಪತ್ರಗಳು, ಮಡಿಕೆ ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಿದ್ದಾರೆ.  ಈ ಮೂಲಕ ಹೆಚ್ಚು ಜನರನ್ನು ಇಲಾಖೆ ತಲುಪಲು ಉತ್ತಮ ಸದಾವಕಾಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ತಿಳಿಸಿದ್ದಾರೆ.

Please follow and like us:
error