ಚಂದ್ರಲೇಖ ಚಿತ್ರ ವಿಮರ್ಶೆ

ಸಾಯೋ ಆಟದಲಿ ಗೆದ್ದವರು 

    ಪ್ರೀತಿಯಲ್ಲಿ ಸೋತ ಅವನಿಗೆ ಸಾಯೋ ಆಸೆ. ಸಾಯುವ ಆಟದ ಮೂಲಕವೇ ಅವನನ್ನು ಬದುಕಿಸುವ ಅವಳಿಗೆ, ಅವನನ್ನು ಪಡೆಯುವ ಒತ್ತಾಸೆ. ಸಾಯೋ ಆಟದಲ್ಲಿ ತಾನೂ ಇದ್ದಿನಿ ಎನ್ನುವ ಮತ್ತೊಬ್ಬನಿಗೆ, ಅವರಿಬ್ಬರನ್ನು ಒಂದು ಮಾಡುವ ಬೆಟ್ಟದಾಸೆ. ಆಕಸ್ಮಿಕವಾಗಿ ಸಿಗುವ ಮಗದೊಬ್ಬನಿಗೆ, ತಾನು ಸಾಯುವ ಮೂಲಕ ಪ್ರೀತಿಸಿದ ಹುಡುಗಿಯನ್ನು ಇಂಪ್ರೆಸ್ ಮಾಡುವ ಹುಚ್ಚಾಸೆ. ಇವರು ತಂಗಿರುವ ಬಂಗ್ಲೆಯಲ್ಲಿರುವ ಆ ಹೆಣ್ಣುದೆವ್ವಕ್ಕೆ, ಇವರನ್ನು ಹೇಗಾದರೂ ಸರಿ ಹೊರಗೆ ನೂಕುವಾಸೆ..
    ಈ ನಾಲ್ಕು ಕೆಟಗೆರಿಯ ಆಸೆಬುರಕರು ಸಾಯುವ ಆಟದಲ್ಲಿ ಬದುಕು ತೋರಿಸುವ ಮಾರ್ಗದರ್ಶಕರು. ಆದರೆ ಇವರನ್ನು ಬಂಗ್ಲೆಯಿಂದ ಓಡಿಸಬೇಕು, ಜೊತೆಗೆ ಹೆಣ್ಣಿನ ಜೊತೆ ಸರಸಕ್ಕೆ ಮುಂದಾಗುವ ಯಾರೇ ಆಗಿರಲಿ ಅವರನ್ನು ತಿನ್ನುವಂತೆ ಕಣ್ಣಲ್ಲೇ ಕೊಲ್ಲುವ ಆ ಹೆಣ್ಣು ದೆವ್ವ ಭೀತಿಯ ದಿಕ್ಸೂಚಿ. 
     ಪ್ರೀತಿಯನ್ನು ತಬ್ಬಿ ಮುದ್ದಾಡಬೇಕು ಎನ್ನುವಾಗ, ಹೆಣ್ಣಿಗೆ ಅವಮಾನವಾಗುವಂಥ ಘಟನೆಗಳು ನಡೆದಾಗ ಮಾತ್ರ ನಾಯಕಿಯ ಮೈ ಮೇಲೆ ಕಾಣಿಸಿಕೊಳ್ಳುವ ಚಂದ್ರಲೇಖ ಎನ್ನುವ ದೆವ್ವ, ನಾಯಕನನ್ನು ಹಾಗೂ ಸಾಯೋ ಆಟದ ಇತರ ಇಬ್ಬರನ್ನು ಆಗಾಗ ತದುಕುತ್ತ್ತಲೇ ಇರುತ್ತದೆ. ಕೊನೆಗೆ ನಾಯಕಿಯ ಮೈ ಮೇಲೆ ಬರುವ ದೆವ್ವದ ಆಸೆ ಈಡೇರಿದರೆ ತನ್ನಿಂತಾನೇ ಹೊರಟು ಹೋಗುತ್ತದೆ ಎಂಬುದು ಬಂಗ್ಲೆ ಕಾಯುವ ಅಜ್ಜನಿಂದ ಗೊತ್ತಾಗುವ ಹೊತ್ತಿಗೆ ಬಂಗ್ಲೆ ಮಾಲಕನ ಪ್ರವೇಶ. ಅವರು ಕಾಲಿಡುತ್ತಿದ್ದಂತೆ ಚಂದ್ರಲೇಖ, ಕೈ ಕುಯ್ದುಕೊಂಡು ಬಿದ್ದು ಒದ್ದಾಡುವ ನಾಯಕಿಯ ಮೂಲಕ ತನ್ನಾಸೆಯನ್ನು ನಾಯಕನಿಗೆ ಹೇಳುತ್ತಾಳೆ. ತನ್ನಾಸೆ ಈಡೇರಿದ ತಕ್ಷಣ ದೆವ್ವ ಮಾಯ!
     ಕಥೆ ಕೇಳಿದರೆ ತುಂಬಾ ಹಾರರ್ ಸಿನಿಮಾ ಇರಬೇಕು ಎನಿಸುವುದೇನೋ ನಿಜ. ಹೌದು ಚಂದ್ರಲೇಖ ಒಂದು ಭಯಾನಕ ಚಿತ್ರ. ಆದರೆ ಚಿತ್ರ ನೋಡುವಾಗ ಎಷ್ಟು ಸಲ ಬೆಚ್ಚಿ ಬೀಳುತ್ತೇವೆಯೋ ಅದರ ಎರಡು ಪಟ್ಟು ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ. ಸಾಮಾನ್ಯವಾಗಿ ದೆವ್ವದ ಸಿನಿಮಾಗಳಲ್ಲಿ ದೆವ್ವ, ಭೂತ, ಪಿಶಾಚಿಗಳ ಆಕೃತಿಗಳು ಬೆಚ್ಚಿ ಬೀಳಿಸಿದರೆ, ಚಂದ್ರಲೇಖದಲ್ಲಿರುವ ದೆವ್ವದ ಆಕಾರ ನೋಡಿದರೆ ಭಯ ಪಡುವುದು ಕೊಂಚ ಕಮ್ಮಿಯೇ. ನಿಜಕ್ಕೂ ಬೆಚ್ಚಿ ಬೀಳಿಸುವುದು ಹಿನ್ನೆಲೆಯ ಸದ್ದು.
     ಈ ಕ್ಷಣದ ಸೌಂಡಿಗೆ ಬೆಚ್ಚಿ ಬೀಳುವ ನೋಡುಗ, ಆ ಭಯದ ಸೀನ್‌ನಲ್ಲೂ ಮರುಕ್ಷಣವೇ ನಗೆಗಡಲಲ್ಲಿ ತೇಳುತ್ತಾನೆ. ಆದು ಸಾಧುಕೋಕಿಲ, ನಾಗಶೇಖರ್ ಕಾಮಿಡಿಯ ಟೈಂನಿಂದಾಗಿ ಭಯ ಹೋಗಿ ನಗು ಬರುತ್ತೆ. ಚಿರಂಜೀವಿ ಸರ್ಜಾ ಭಯದ ಸೀನ್‌ನಲ್ಲಿ, ಫೈಟಿಂಗ್‌ನಲ್ಲಿ ಮಿಂಚಿದ್ದಾರೆ. ಹೊಸಬಳಾದರೂ ಸಾನ್ವಿ ಇಷ್ಟವಾಗುತ್ತಾರೆ. ಚಿತ್ರದಲ್ಲಿ ಬರುವ ಬೆರಳೆಣಿಕೆಯ ಪಾತ್ರಗಳು ಎಲ್ಲೂ ತಾಳ ತಪ್ಪಿಲ್ಲ. ನಿರ್ದೇಶಕ ಓಂಪ್ರಕಾಶ್ ಫಸ್ಟ್ ಟೈಂ ಒಂದೇ ಸಿನಿಮಾವನ್ನು ರಿಮೇಕ್ ಮಾಡಿದ ಹೆಗ್ಗಳಿಕೆ ಗಳಿಸಿದ್ದಾರೆ, ಜೊತೆಗೆ ಈ ಚಿತ್ರದ ಮೂಲಕ ಮತ್ತೇ ಭರವಸೆ ಮೂಡಿಸಿದ್ದಾರೆ. ಎಂ.ಎಸ್.ರಮೇಶ ಅವರ ಮಾತುಗಳ ಜೋಡಣೆ ರುಚಿಗೆ ತಕ್ಕಷ್ಟು ಉಪ್ಪು ಎನ್ನುವಂತಿವೆ. 
ಜೆ.ಬಿ. ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಎರಡು ಹಾಡುಗಳು ಖುಷಿ ಕೊಡುತ್ತವೆ. ರವಿಕುಮಾರ ಕ್ಯಾಮರಾ ವರ್ಕ್ ಕೂಡಾ ಚೆನ್ನಾಗಿದೆ. ಲಕ್ಷ್ಮಣರೆಡ್ಡಿ ಎಚ್ಚರಿಕೆಯಿಂದ ಸಂಕಲನ ಮಾಡಿರುವ ಪರಿಣಾಮ ಚಿತ್ರ ಬೋರ್ ಎನಿಸದು. 
      ಪ್ರೀತಿಯಲಿ ಸೋತವರು ಬದುಕನ್ನು ಗೆಲ್ಲುತ್ತಾರೆ ಎಂದು ಹೇಳಬೇಕೆನ್ನುವಷ್ಟರಲ್ಲಿ ಹಾಜರಾಗುವ ದೆವ್ವದ ಕೀಟಲೆಗಳು ನೋಡುಗರನ್ನು ಮುಂದೆನಾಗುತ್ತೆ ನೋಡೋಣ ಎಂದು ಹಿಡಿದಿಟ್ಟುಕೊಳ್ಳುತ್ತವೆ. ಚಿತ್ರದ ಮೊದಲ ಸೀನ್ ಮಿಸ್ ಮಾಡಿಕೊಂಡರೆ ಖಂಡಿತ ಚಿತ್ರದ ಕೊನೆ ಅರ್ಥವಾಗುವುದಿಲ್ಲ. ಹೊಟ್ಟೆ ಬೀರಿಯುವಷ್ಟು ನಗು ಬಯಸುವವರು ಚಂದ್ರಲೇಖಳನ್ನು ಆರಂಭದಿಂದಲೇನೋಡಬೇಕು.       
-ಚಿತ್ರಪ್ರಿಯ ಸಂಭ್ರಮ್ 

Leave a Reply