ವಕೀಲರ ಗೂಂಡಾಗಿರಿ ವಿರುದ್ಧ ಪತ್ರಕರ್ತರ ಪ್ರತಿಭಟನೆ:

  ಬೆಂಗಳೂರಿನ ಸಿಟಿ ನ್ಯಾಯಾಲಯದ ಆವರಣದಲ್ಲಿ ಗೂಂಡಾ ವಕೀಲರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಕೊಪ್ಪಳ ಜಿಲ್ಲೆಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. 
ಇಂದು ಕೊಪ್ಪಳ ನಗರದಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನಾ ರ‍್ಯಾಲಿ ನಡೆಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮಾನವ ಸರಪಳಿ ರಚಿಸಿ ಆಕ್ರೋಶವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗೂಂಡಾ ವಕೀಲರ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಯಿತು. ಕಪ್ಪು ಬಟ್ಟೆ ಧರಿಸಿ ನಗರದ ಬಸ್ ನಿಲ್ದಾಣದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಪತ್ರಕರ್ತರು, ಗೂಂಡಾ ವಕೀಲರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 
ಇದೇ ವೇಳೆ ನಗರದ ಅಶೋಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ಮಾಡಿದ ಪತ್ರಕರ್ತರು, ಗೂಂಡಾ ವಕೀಲರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಇದಾದ ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿದ ಪತ್ರಕರ್ತರು, ಕೆಲಕಾಲ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಗೂಂಡಾ ವಕೀಲರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಸುಣಗಾರ, ಉಪಾಧ್ಯಕ್ಷ ಜಿ.ಎಸ್.ಗೋನಾಳ, ಪ್ರಧಾನ ಕಾರ್ಯದರ್ಶಿ ಎಂ.ಸಾಧಿಕ ಅಲಿ, ಖಜಾಂಚಿ ಹನುಮಂತಪ್ಪ ಹಳ್ಳಿಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಎಚ್.ಎಸ್.ಹರೀಶ್, ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ತಾಲೂಕು ಅಧ್ಯಕ್ಷ ಶಿವರಾಜ ನುಗಡೋಣಿ, ಪ್ರಧಾನ ಕಾರ್ಯದರ್ಶಿ ರಮೇಶ ಪವಾರ್, ಸದಸ್ಯರಾದ ಬಸವರಾಜ ಬಿನ್ನಾಳ, ವೀರಣ್ಣ ಕಳ್ಳಿಮನಿ, ಸಿದ್ದಪ್ಪ ಹಂಚಿನಾಳ, ಬಸವರಾಜ ಗುಡ್ಲಾನೂರ, ವೈ.ಬಿ.ಜೂಡಿ, ಉಮೇಶ ಅಬ್ಬಿಗೇರಿ, ವ್ಯಾಸರಾಜ ಕಲ್ಮಂಗಿ, ಕವಿತಾ ಓಲಿ, ಮಂಜುನಾಥ ಕೋಳೂರು, ಹನುಮೇಶ ಮ್ಯಾಗಳಮನಿ, ಮಹೇಶಗೌಡ ಮತ್ತಿತರರು ಭಾಗವಹಿಸಿದ್ದರು.

Leave a Reply