ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ- ಶ್ರೀಕಾಂತ ಬಬಲಾದಿ

ಕೊಪ್ಪಳ ಜ.೧೦  ಸಾರ್ವಜನಿಕರು ಹಾಗೂ ವಾಹನ ಚಾಲಕರು ರಸ್ತೆ ನಿಯಮಗಳನ್ನು ಅರಿತು, ಅದರಂತೆ ನಡೆದುಕೊಂಡಲ್ಲಿ ಅಪಘಾತ ಸಂಖ್ಯೆಗಳನ್ನು ಕಡಿಮೆಗೊಳಿಸಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ಬಬಲಾದಿ ಅವರು ಹೇಳಿದರು.
  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಪ್ರಾದೇಶಿಕ ಸಾರಿಗೆ ಕಛೇರಿ, ಸಂಚಾರಿ ಪೊಲೀಸ್ ಠಾಣೆ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕೊಪ್ಪಳ ಸಾಹಿತ್ಯ ಭವನದಲ್ಲಿ ರಸ್ತೆ ಸುರಕ್ಷತಾ ಅಂಗವಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ ವಾಹನ ಚಾಲಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಏರ್ಪಡಿಸಲಾಗಿದ್ದ ವಿಶೇಷ ಕಾನೂನು ತಿಳುವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
  ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿಯೇ ಸರ್ಕಾರ ರಸ್ತೆ ಸಂಚಾರ ನಿಯಮಗಳನ್ನು ರೂಪಿಸಿದ್ದು, ಇದರ ಬಗ್ಗೆ ಅರಿವು ಹೊಂದಿದಲ್ಲಿ ಮಾತ್ರ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದಾಗಿದೆ.  ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವಂತಹವರಿಗೆ ಮಾತ್ರ ಕಾನೂನು, ಅವರ ನೆರವಿಗೆ ಬರಲಿದೆ.  ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರಸ್ತೆ ಸಂಚಾರದ ನಿಯಮಗಳ ಬಗ್ಗೆ ಅರಿವು ಹೊಂದಬೇಕು.  ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತ, ವಾಹನ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿಯಾಗಿದ್ದು, ಇಂತಹ ವಾಹನ ಚಾಲಕರಿಗೆ ಕಠಿಣ ಶಿಕ್ಷೆಗೆ ಕ್ರಮ ವಹಿಸಲಾಗುವುದು.  ಆಟೋ ಚಾಲಕರಿಗೆ ವಾಹನ ಚಾಲನೆ ಪರವಾನಗಿ ಪಡೆಯಲು ೮ನೇ ತರಗತಿ ವಿದ್ಯಾರ್ಹತೆ ಕಡ್ಡಾಯವಾಗಿದ್ದು, ಒಂದು ವೇಳೆ ಯಾರಾದರೂ ಅನಕ್ಷರಸ್ಥ ಆಟೋ ಚಾಲಕರಿದ್ದಲ್ಲಿ, ಅಂತಹವರಿಗೆ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಶಿಕ್ಷಣ ಇಲಾಖೆಯವರ ಸಹಕಾರದೊಂದಿಗೆ ೮ನೇ ತರಗತಿ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಲು ಯತ್ನಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ಬಬಲಾದಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿಭಾಗದ ಉಪ ಸಾರಿಗೆ ಆಯುಕ್ತ ಶಿವರಾಜ ಪಾಟೀಲ್ ಅವರು ಮಾತನಾಡಿ, ಸಾರಿಗೆ ಇಲಾಖೆಯು  ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ,  ಹಾಗೂ ಸಂಚಾರಿ ಪೊಲೀಸ್ ಠಾಣೆಯವರ ಸಹಯೋಗದೊಂದಿಗೆ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇದೇ ಪ್ರಥಮ ಬಾರಿಗೆ ಕೊಪ್ಪಳದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶಿವರಾಮ, ಸಿವಿಲ್ ನ್ಯಾಯಾಧೀಶರಾದ ಕಾವೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಅವರು ಭಾಗವಹಿಸಿ, ಕಾರ್ಯಕ್ರಮ ಕುರಿತು ಮಾತನಾಡಿದರು.  ಪೊಲೀಸ್ ಉಪಾಧೀಕ್ಷಕ ಸುರೇಶ ಬಿ.ಮಸೂತಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾ ಸಾಹೇಬ್, ಜಿಲ್ಲಾ ಸರ್ಕಾರಿ ವಕೀಲ  ಎಂ.ಎ.ಪಾಟೀಲ್ ಅವರು ಭಾಗವಹಿಸಿದ್ದರು.  ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗ ಶೆಟ್ಟಿ ಅವರು ಸ್ವಾಗತಿಸಿದರು, ಸಾರಿಗೆ ನಿರೀಕ್ಷಕ ಜೆ.ಪಿ. ಪ್ರಕಾಶ್ ವಂದಿಸಿದರು, ಹನುಮಂತರಾವ್ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಉಪನ್ಯಾಸಕರಾಗಿ ವಕೀಲರಾದ ಎಸ್.ರುದ್ರಯ್ಯ ಅವರು ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ವಿಮೆಯ ಅವಶ್ಯಕತೆ ಕುರಿತು, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಜಿ.ಪಾಂಡುರಂಗ ಶೆಟ್ಟಿ ಅವರು ಚಾಲನ ಪತ್ರ ಪಡೆಯಲು ಹೊಂದಿರಬೇಕಾದ ಅರ್ಹತೆಗಳು, ಮೋಟಾರ ವಾಹನ ತಪಾಸಕ ಜೆ.ಪಿ.ಪ್ರಕಾಶ ಅವರು ಅಪಘಾತಗಳಿಗೆ ಕಾರಣ ಮತ್ತು ತಡೆಗಟ್ಟಲು ವಿಧಾನ ಹಾಗೂ ಪರಿಣಾಮಗಳು, ಸಂಚಾರಿ ಪಿ.ಎಸ್.ಐ. ರವಿ ಪುರುಷೋತ್ತಮ ಅವರು ಸಂಚಾರ ನಿಯಮ ಹಾಗೂ ಅಪಘಾತಗಳು ಮತ್ತು ಅದರ ನಿಯಂತ್ರಣ ಕುರಿತು ಉಪನ್ಯಾಸ ನೀಡಿದರು.  ಇದೇ ಸಂದರ್ಭದಲ್ಲಿ ಅಪಘಾತಗಳು, ರಸ್ತೆ ಸಂಚಾರ ನಿಯಮಗಳ ಕುರಿತು ವಿಶೇಷ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
Please follow and like us:
error