ಬಳ್ಳಾರಿ ಶಾಖೋತ್ಪನ್ನ ಕೇಂದ್ರ ಸ್ಥಗಿತ:

 ರಾಜ್ಯಕ್ಕೆ ಮತ್ತೆ ವಿದ್ಯುತ್ ಸಮಸ್ಯೆ?
ಬೆಂಗಳೂರು,ಅ,೧೨: ಬಳ್ಳಾರಿ ಶಾಖೋತ್ಪನ್ನ ಕೇಂದ್ರ ಕಲ್ಲಿದ್ದಲು ಕೊರತೆಯಿಂದಾಗಿ ಉತ್ಪಾದನೆ ಸ್ಧಗಿತಗೊಳಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಬಿಗಡಾಯಿಸುವ ಆತಂಕ ಎದುರಾಗಿದೆ. ಕಳೆದ ಹತ್ತು ದಿನಗಳಿಂದ ಬಳ್ಳಾರಿ ಈ ಎರಡೂ ಘಟಕಗಳು ಉತ್ಪಾದನೆಯನ್ನು ನಿಲ್ಲಿಸಿವೆ. ಕಲ್ಲಿದ್ದಲು ದೊರೆಯದ ಹೊರತು ಸಮಸ್ಯೆ ನಿವಾರಣೆ ಸಾಧ್ಯವಿಲ್ಲದಂತಾಗಿದೆ. ಸಮರ್ಪಕ ಮಳೆಯಿಲ್ಲದೇ ವಿದ್ಯುತ್ ಉತ್ಪಾದಿಸುವ ಜಲಾಗಾರಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಇದೀಗ ಕಲ್ಲಿದ್ದಲು ಕೊರತೆ ರಾಜ್ಯವನ್ನು ಮತ್ತಷ್ಟು ಕತ್ತಲೆಗೆ ದೂಡುವಂತಾಗಿದೆ. ೫೦೦ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ೨ನೆ ಘಟಕ ಕಲ್ಲಿದ್ದಲು ಕೊರತೆಯಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಮತ್ತೆ ವಿದ್ಯುತ್ ಕ್ಷಾಮ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಮುಂದೇನು ಮಾಡಬೇಕೆಂದು ತೋಚದಂತಾಗಿದೆ. ರಾಜ್ಯದ ಒಟ್ಟಾರೆ ಬಳಕೆಯ ಶೇ.೨೦ರಷ್ಟು ವಿದ್ಯುತ್‌ನ್ನು ಈ ಎರಡೂ ಘಟಕಗಳು ಉತ್ಪಾದಿಸುತ್ತಿವೆ.
ಕಲ್ಲಿದ್ದಲು ಕೊರತೆಯ ಕಾರಣ ಎರಡೂ ಘಟಕಗಳ ಕಾರ್ಯ ಸ್ಧಗಿತಗೊಂಡಿದೆ. ಈ ಘಟಕಗಳಿಂದ ಪ್ರತಿದಿನ ೨೪ ದಶ ಲಕ್ಷ ಯೂನಿಟ್ ಉತ್ಪಾದನೆಯಾಗುತ್ತಿದೆ. ವಾರ್ಷಿಕ7000 ದಶ ಲಕ್ಷ ಯೂನಿಟ್‌ನಷ್ಟು ವಿದ್ಯುತ್ ಕೊಡುಗೆಯನ್ನು ರಾಜ್ಯಕ್ಕೆ ನೀಡುತ್ತಿದೆ. ಇದರಿಂದಾಗಿ ರಾಜ್ಯ, ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಭಾಗ ಗಾಢಾಂಧಕಾರದಲ್ಲಿ ಮುಳುಗುವ ಕಳವಳ ವ್ಯಕ್ತವಾಗಿದೆ.
ಪ್ರತಿ ದಿನ ಒಂದೊಂದು ಘಟಕಕ್ಕೆ 6 ರಿಂದ 7 ಸಾವಿರ ಟನ್‌ನಷ್ಟು ಕಲ್ಲಿದ್ದಲು ಅವಶ್ಯವಾಗಿದೆ. ಮೊದಲ ಘಟಕಕ್ಕೆ ಒರಿಸ್ಸಾದ ತಲ್ಚೇರಿಯಿಂದ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಬಳ್ಳಾರಿಯ ಈ ಎರಡೂ ಘಟಕಕ್ಕೆ ಕಲ್ಲಿದ್ದಲಿನ ಕೊರತೆ ಬಹಳ ಕಡಿಮೆ. ಆದರೆ ಕಳೆದ ತಿಂಗಳು ಅಂದರೆ ಅಗಸ್ಟ್ ೨೭ಕ್ಕೆ ವಿದ್ಯುತ್ ಉತ್ಪಾದನೆ ಆರಂಭಿಸಿದ ೨ನೆ ಘಟಕಕ್ಕೂ ಇದೀಗ ಕಲ್ಲಿದ್ದಲಿನದೇ ಸಮಸ್ಯೆ ಕಾಣಿಸಿಕೊಂಡಿದೆ.
2ನೆ ಘಟಕಕ್ಕೆ ಕಲ್ಲಿದ್ದಲು ಪೂರೈಸಲು ಕೋಲ್ ಇಂಡಿಯಾ ಲಿಮಿಟೆಡ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆದರೆ ಒಪ್ಪಂದದಂತೆ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಇದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಘಟಕಕ್ಕೆ ಪ್ರತಿದಿನ ಎರಡು ವ್ಯಾಗನ್‌ನಷ್ಟು ಕಲ್ಲಿದ್ದಲು ಬೇಕು. ಆದರೆ ಈಗ ಮಹಾನಂದಿ ಕಲ್ಲಿದ್ದಲು ಪ್ರದೇಶದಿಂದ ಪ್ರತಿದಿನ ೩, ೬೦೦ ಟನ್ ಕಲ್ಲಿದ್ದಲಿನ ಒಂದು ವ್ಯಾಗನ್ ಮಾತ್ರ ಬರುತ್ತಿದೆ. ಇದರಿಂದಾಗಿ 2ನೆ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗದೇ ಸಮಸ್ಯೆಯಾಗಿದೆ. ಘಟಕವನ್ನು ಚಾಲನೆಗೊಳಿಸಲು ಆಗದ ಪರಿಸ್ಧಿತಿಯಿದೆ.
ಹೀಗಾಗಿ ಕಳೆದ 10 ದಿನಗಳಿಂದ ಈ ಘಟಕ ಬಂದ್ ಆಗಿದೆ. ಇನ್ನು ಜಲ ವಿದ್ಯುತ್ ಉತ್ಪಾದನೆಯೂ ಸಹ ಕಡಿಮೆಯಾಗಿದೆ. ಮುಂಬರುವ ಬೇಸಿಗೆಗೆ ಹೆಚ್ಚು ನೀರು ಸಂಗ್ರಹಿಸುವ ಉದ್ದೇಶದಿಂದ ಜಲ ವಿದ್ಯುತ್‌ನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ.
Please follow and like us:
error