ಅ.೨೧ ರಂದು ಪೊಲೀಸ್ ಹುತಾತ್ಮರ ದಿನಾಚರಣೆ.


 ಕೊಪ್ಪಳ, ಅ.೨೦ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಅ.೨೧ ರಂದು ಬೆಳಿಗ್ಗೆ ೦೮ ಗಂಟೆಗೆ ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಪೊಲೀಸ್ ಹುತಾತ್ಮ ಸ್ಮಾರಕ್ಕೆ ಪುಷ್ಪಗುಚ್ಛ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ತ್ಯಾಗರಾಜನ್ ಕೆ, ತಿಳಿಸಿದ್ದಾರೆ.
ಆಸ್ತಿ ತೆರಿಗೆ ಪಾವತಿಯ ಚಲನ್‌ಗಳನ್ನು ನಗರಸಭೆಗೆ ಸಲ್ಲಿಸಲು ಸೂಚನೆ
ಕೊಪ್ಪಳ, ಅ.೨೦ (ಕರ್ನಾಟಕ ವಾರ್ತೆ) : ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಬ್ಯಾಂಕ್ ಮೂಲಕ ಪಾವತಿಸಿರುವ ಕೊಪ್ಪಳ ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು ೨೦೦೨-೦೩ ರಿಂದ ಪ್ರಸಕ್ತ ಸಾಲಿನವರೆಗಿನ ವಿವರಪಟ್ಟಿ ಹಾಗೂ ಚಲನ್‌ಗಳನ್ನು ಅ.೩೧ ರೊಳಗಾಗಿ ನಗರಸಭೆಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ತಿಳಿಸಿದ್ದಾರೆ.
     ಸರ್ಕಾರದ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭೌಗೋಳಿಕ ಮಾಹಿತಿ ಆಧಾರಿತ ಆಸ್ತಿ ತೆರಿಗೆ ಪದ್ಧತಿಯನ್ನು ಅಳವಡಿಸಲಾಗಿದ್ದು, ಕೊಪ್ಪಳ ನಗರಸಭೆ ಪರಿಮಿತಿಯ ಎಲ್ಲಾ ಆಸ್ತಿ ತೆರಿಗೆಯನ್ನು ಬ್ಯಾಂಕ್ ಮೂಲಕ ಪಾವತಿಸಿದ ನಂತರ ವಿವರಪಟ್ಟಿ ಹಾಗೂ ಚಲನ್‌ಗಳನ್ನು ಹಾಜರುಪಡಿಸಿರುವುದಿಲ್ಲ. ಇದರಿಂದ ತಾವು ಪಾವತಿಸಿರುವ ಆಸ್ತಿ ತೆರಿಗೆಯು ಕೆ.ಎಮ್.ಎಫ್-೨೪ ಆಸ್ತಿ ತೆರಿಗೆ ವಹಿ ಹಾಗೂ ಆಸ್ತಿ ತೆರಿಗೆ ತಂತ್ರಾಶದಲ್ಲಿ ನೊಂದಾಯಿಸಲು ಸಾಧ್ಯವಾಗದೇ ತಮ್ಮ ಹೆಸರಿಗೆ ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ  ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಬ್ಯಾಂಕ್ ಮೂಲಕ ಪಾವತಿಸಿರುವ ಕೊಪ್ಪಳ ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು ೨೦೦೨-೦೩ ರಿಂದ ಪ್ರಸಕ್ತ ಸಾಲಿನವರೆಗಿನ ವಿವರಪಟ್ಟಿ ಹಾಗೂ ಚಲನ್‌ಗಳ ಝರಾಕ್ಸ್ ಪ್ರತಿಗಳನ್ನು ಅ.೩೧ ರೊಳಗಾಗಿ ನಗರಸಭೆಗೆ ಹಾಜರುಪಡಿಸಿ, ಕೆ.ಎಮ್.ಎಫ್-೨೪ ಆಸ್ತಿ ತೆರಿಗೆ ವಹಿ ಹಾಗೂ ಆಸ್ತಿ ತೆರಿಗೆ ತಂತ್ರಾಶದಲ್ಲಿ ನೊಂದಾಯಿಸಲು ಸಹಕರಿಸಬೇಕು. ಹಿಂದಿನ ಬಾಕಿ ಇರುವ ಖಾಲಿ ನಿವೇಶನ ಮತ್ತು ಕಟ್ಟಡಗಳ ಆಸ್ತಿ ತೆರಿಗೆಯನ್ನು ಪ್ರಸಕ್ತ ಸಾಲಿನವರೆಗೂ ಹಾಗೂ ಹಿಂದಿನ ಬಾಕಿ ಹಾಗೂ ಚಾಲ್ತಿ ತಿಂಗಳವರೆಗಿನ ನೀರಿನ ತೆರಿಗೆಯನ್ನು ಕೂಡಲೇ ಪಾವತಿಸಿ, ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ತಿಳಿಸಿದ್ದಾರೆ.
ಅ.೨೨ ರಂದು ‘ನನ್ನವಳು’ ಬಿಡುಗಡೆ
ಕೊಪ್ಪಳ, ಅ.೨೦ (ಕರ್ನಾಟಕ) : ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ದಿ||ಲಲಿತಾ ನಿಂಗೋಜಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ರಚಿಸಿರುವ ‘ನನ್ನವಳು’ ಕವನ ಸಂಕಲನದ ಬಿಡುಗಡೆ ಸಮಾರಂಭ ಅ.೨೨ ರಂದು ಬೆಳಿಗ್ಗೆ ೧೦ ಗಂಟೆಗೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದಲ್ಲಿ ಜರುಗಲಿದೆ.
     ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ನಿವೃತ್ತ ಪ್ರಾಚಾರ್ಯ ಜಿ.ಎಂ.ನಿಂಗೋಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ವೀರಣ್ಣ ವಾಲಿ ಕೃತಿ ಕುರಿತು ಮಾತನಾಡಲಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ಶಿಷ್ಯವೇತನ : ಅವಧಿ ವಿಸ್ತರಣೆ
ಕೊಪ್ಪಳ, ಅ.೨೦ ಕೊಪ್ಪಳ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಇವರಿಂದ ನೀಡಲಾಗುವ ಪ್ರಸಕ್ತ ಸಾಲಿನ ಮೆಟ್ರಿಕ್ ಪೂರ್ವ ಶಿಷ್ಯವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ಅ.೩೦ ರವರೆಗೆ ವಿಸ್ತರಿಸಲಾಗಿದೆ.
     ಪರಿಶಿಷ್ಟ ಜಾತಿಯ ೧ ರಿಂದ ೧೦ ನೇ ತರಗತಿಯವರೆಗಿನ ಹಾಗೂ ಪರಿಶಿಷ್ಟ ಪಂಗಡದ ೧ ರಿಂದ ೮ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಈ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಅ.೩೦ ರವರೆಗೆ ವಿಸ್ತರಿಸಲಾಗಿದೆ ಎಂದು ತಾಲೂಕಾ ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ
ಕೊಪ್ಪಳ, ಅ.೨೦ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ   ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಅ.೨೧ ರಿಂದ ೨೫ ರವರೆಗೆ ಐದು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅ.೨೧ ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಬಳಿಕ ಕಾರಟಗಿಯಲ್ಲಿ –  ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ನಡೆಸುವರು. ಅ,೨೨ ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಧ್ಯಾಹ್ನ ೩ ಗಂಟೆಗೆ ಬಾಗಲಕೋಟೆ ಜಿಲ್ಲೆಗೆ ಪ್ರಯಾಣ ಬೆಳೆಸುವರು.  ಅಂದು ರಾತ್ರಿ ೦೯ ಗಂಟೆಗೆ ಕಾರಟಗಿಗೆ ಆಗಮಿಸಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ಕೈಗೊಳ್ಳುವರು. ಅ.೨೩ ಮತ್ತು ೨೪ ರಂದು ಕಾರಟಗಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ನಡೆಸುವರು. ಅ.೨೫ ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವ ಸಚಿವರು, ಬಳಿಕ ಕಾರಟಗಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಕಾನೂನು ಮಾಪನ ಶಾಸ್ತ್ರ ಇಲಾಖೆಯಡಿ ೨೯೫ ಪ್ರಕರಣ ದಾಖಲು.
ಕೊಪ್ಪಳ, ಅ.೨೦  ಕಲಬುರಗಿ ಹಾಗೂ ಬೆಳಗಾವಿ ವಿಭಾಗದ ವ್ಯಾಪ್ತಿಗೆ ಬರುವ ಹುಬ್ಬಳ್ಳಿ ಕಾನೂನು ಮಾಪನ ಶಾಸ್ತ್ರ ಇಲಾಖೆ, ಕಾನೂನು ಮಾಪನ ಶಾಸ್ತ್ರ ನಿಯಂತ್ರಕರ ಕಛೇರಿಯ ಸಂಚಾರಿ ದಳ-೦೩ ಇವರಿಂದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿ, ತೂಕ ಮತ್ತು ಅಳತೆ ಹಾಗೂ ಪೊಟ್ಟಣ ಸಾಮಗ್ರಿ ಕಾಯಿದೆ ಉಲ್ಲಂಘನೆಗಾಗಿ ಒಟ್ಟು ೨೯೫ ಪ್ರಕರಣಗಳನ್ನು ದಾಖಲಿಸಲಾಗಿದೆ.
     ಸಂಚಾರಿ ದಳದಿಂದ ಪ್ರಸಕ್ತ ಸಾಲಿನ ಸೆಪ್ಟಂಬರ್ ಅಂತ್ಯದವರೆಗೆ ಒಟ್ಟು ೧೨೨೨ ಅಂಗಡಿ ಹಾಗೂ ಸಂಸ್ಥೆಗಳನ್ನು ತಪಾಸಣೆ ಮಾಡಿ, ೨೦೯ ತೂಕ ಮತ್ತು ಅಳತೆ ಹಾಗೂ ೮೬ ಪೊಟ್ಟಣ ಸಾಮಗ್ರಿ ಕಾಯಿದೆ ಉಲ್ಲಂಘನೆಗಾಗಿ ಒಟ್ಟು ೨೯೫ ಮೊಕದ್ದಮೆಗಳನ್ನು ಹೂಡಲಾಗಿದ್ದು, ಒಟ್ಟು ರೂ.೧೩,೮೦,೫೦೦/- ಅಭಿಸಂಧಾನ ಶುಲ್ಕ ವಸೂಲು ಮಾಡಲಾಗಿದೆ ಎಂದು ಸಂಚಾರಿ ದಳ-೦೩ ಹುಬ್ಬಳ್ಳಿಯ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ಮಧುಕರ ಆರ್.ಘೋಡಕೆ ತಿಳಿಸಿದ್ದಾರೆ.

Please follow and like us:
error