ಒಂದು ದಿನದ ವೇತನ ಅಕ್ಟೋಬರ್‌ನಲ್ಲೇ ಕಡಿತಕ್ಕೆ ಸರ್ಕಾರದ ಆದೇಶ

ಕೊಪ್ಪಳ  : ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರು ನೀಡುವ ಒಂದು ದಿನದ ವೇತನವನ್ನು ಆಯಾ ನೌಕರರ ಅಕ್ಟೋಬರ್ ತಿಂಗಳಿನ ವೇತನದಲ್ಲಿಯೇ ಕಡಿತಗೊಳಿಸಿ ಸಾಹಿತ್ಯ ಸಮ್ಮೇಳನದ ಲೆಕ್ಕ ಶೀರ್ಷಿಕೆಗೆ ಜಮಾಗೊಳಿಸುವಂತೆ ಸರ್ಕಾರ ಕಳೆದ ಅಕ್ಟೋಬರ್ ೦೭ ರಂದು ಆದೇಶ ಹೊರಡಿಸಿದೆ.
  ಗಂಗಾವತಿಯಲ್ಲಿ ನಡೆಯಲಿರುವ ಅಕ್ಷರ ಜಾತ್ರೆ, ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಶಾಖೆ, ಜಿಲ್ಲೆಯ ನೌಕರರ ಒಂದು ದಿನದ ವೇತನವನ್ನು ಸಮ್ಮೇಳನಕ್ಕಾಗಿ ನೀಡಲು ನಿರ್ಣಯ ಕೈಗೊಂಡಿತ್ತು.  ಈ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಸಂಖ್ಯೆ: ಆಇ ೩೪ ಎಸ್‌ಆರ್‌ಪಿ ೨೦೧೧, ಬೆಂಗಳೂರು, ದಿನಾಂಕ: ೦೭-೧೦-೨೦೧೧ ರಲ್ಲಿ ಆದೇಶ ಹೊರಡಿಸಿ, ಸರ್ಕಾರಿ ನೌಕರರ ಒಂದು ದಿನದ ವೇತನದ ವಂತಿಗೆಯನ್ನು ಅಕ್ಟೋಬರ್ ತಿಂಗಳ ವೇತನದಲ್ಲಿಯೇ ಕಡಿತಗೊಳಿಸಿ, ಮೊತ್ತವನ್ನು ಲೆಕ್ಕ ಶೀರ್ಷಿಕೆ- ೮೬೫೮-೦೦-೧೦೨-೪-೨೬ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಂತಿಗೆ ಯಡಿ ಜಮಾ ಮಾಡುವಂತೆ ಸೂಚನೆ ನೀಡಿದೆ.  ಇದಕ್ಕಾಗಿ ಆಯಾ ಕಚೇರಿ ಮುಖ್ಯಸ್ಥರು ಮತ್ತು ಖಜಾನಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.  ವಂತಿಗೆ ಕಟಾಯಿಸಿದ ವೇತನದ ಬಿಲ್ಲಿನಲ್ಲಿ ಆಯಾ ಅಧಿಕಾರಿ/ಸಿಬ್ಬಂದಿಯ ಹೆಸರಿನ ಎದುರಿನಲ್ಲಿ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವಂತಿಕೆ ಎಂದು ಪ್ರತ್ಯೇಕ ಅಂಕಣದಲ್ಲಿ ನಮೂದಿಸಬೇಕು.  ಅಲ್ಲದೆ ವೇತನ ಬಿಲ್ಲಿನ ಮುಖಪುಟದಲ್ಲಿ ಸಮ್ಮೇಳನಕ್ಕಾಗಿ ವಂತಿಕೆ ಎಂಬುದಾಗಿ ಸ್ಪಷ್ಟವಾಗಿ ನಮೂದಿಸಬೇಕು.  ಈಗೆ ಜಮಾ ಮಾಡುವ ಒಟ್ಟು ಮೊತ್ತಕ್ಕೆ ಜಿಲ್ಲಾ ಖಜಾನೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಕ್ರೋಢೀಕೃತ ಮೊತ್ತದ ಚೆಕ್ ಅನ್ನು ನೀಡುವಂತೆ ಸೂಚನೆ ನೀಡಲಾಗಿದೆ.  ಅಕ್ಟೋಬರ್ ತಿಂಗಳು ಅಂತ್ಯಗೊಂಡ ನಂತರ ಪಾವತಿ ಮಾಡಿದ ಬಿಲ್ಲುಗಳ ಪ್ರಕರಣಗಳಲ್ಲಿ ಅವುಗಳನ್ನು ಪಾವತಿ ಮಾಡಿದ ಒಂದು ವಆರದೊಳಗೆ ಜಿಲ್ಲಾಧಿಕಾರಿಗಳಿಗೆ ವಂತಿಗೆಯ ಚೆಕ್ ಅನ್ನು ಖಜಾನಾಧಿಕಾರಿಗಳು ಸಲ್ಲಿಸಬೇಕಾಗಿರುತ್ತದೆ. ಕೊಪ್ಪಳ ಜಿಲ್ಲಾಧಿಕಾರಿಗಳು ಈ ವಂತಿಕೆ ಹಣವನ್ನು ಉದ್ದೇಶಿತ ಸಮ್ಮೇಳನ ಕಾರ್ಯಕ್ಕೆ ಬಳಸಿಕೊಳ್ಳಲು ಅಧಿಕಾರ ಹೊಂದಿರುತ್ತಾರೆ.  ಒಂದು ದಿನದ ವೇತನವನ್ನು ವಂತಿಗೆಯಾಗಿ ಕೊಡಲಿಚ್ಛಿಸದ ನೌಕರರು ಲಿಖಿತ ಮನವಿಯ ಮೂಲಕ ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ಸರ್ಕಾರದ ಆರ್ಥಿಕ ಇಲಾಖೆಯ ಉಪಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Please follow and like us:
error

Related posts

Leave a Comment