fbpx

ಅರ್ಥಪೂರ್ಣ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಗೆ ನಿರ್ಧಾರ

ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಸಡಗರ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.

  ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ದೇಶಕ್ಕೆ 1947 ರ ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರೆಯಿತು.  ಆದರೆ ಹೈದ್ರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟ ಪ್ರದೇಶಕ್ಕೆ 1948 ರ ಸೆ. 17 ರಂದು ಅಂದರೆ ಒಂದು ವರ್ಷ ತಡವಾಗಿ ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿ ಪ್ರದೇಶಗಳಿಗೆ ಸ್ವಾತಂತ್ರ್ಯ ದೊರೆಯಿತು.  ಇದರ ಸವಿ ನೆನಪಿಗಾಗಿ ಹೈದ್ರಾಬಾದ್-ಕರ್ನಾಟಕ ಪ್ರದೇಶಗಳಲ್ಲಿ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತಿದೆ.  ಇದು ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಷ್ಟೆ ಅರ್ಥಪೂರ್ಣವಾಗಿ ಆಚರಿಸಲಾಗುವುದು.  ಸೆ. 17 ರಂದು    ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸುವರು.  ಶಾಲಾ ಮಕ್ಕಳು, ಎನ್.ಸಿ.ಸಿ., ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಆಕರ್ಷಕ ಪಥಸಂಚಲನ, ಅಲ್ಲದೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.  ಹೈದ್ರಾಬಾದ್-ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.  ಈ ಬಾರಿ ವಿಶೇಷ ಉಪನ್ಯಾಸ ನೀಡಲು ಡಾ. ಬಿ.ವಿ. ಶಿರೂರ್ ಅವರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.  ಅದೇ ದಿನ ಸಂಜೆ 6 ಗಂಟೆಗೆ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಮೈದಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.  ನಗರದ ಸಾರ್ವಜನಿಕ ಕಟ್ಟಡಗಳು, ವಾಣಿಜ್ಯ ಮಳಿಗೆ ಹಾಗೂ ಪ್ರಮುಖ ವೃತ್ತಗಳಿಗೆ ವಿಶೇಷ ದೀಪಾಲಂಕಾರ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮನವಿ ಮಾಡಿದರು.
  ಸಭೆಯಲ್ಲಿ  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರಾದ ವಿಠ್ಠಪ್ಪ ಗೋರಂಟ್ಲಿ, ಶಿವಾನಂದ ಹೊದ್ಲೂರ ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
Please follow and like us:
error

Leave a Reply

error: Content is protected !!