ಯಾವುದೇ ಮಗುವು ಪೋಷಣೆಯಿಂದ ವಂಚಿತವಾಗಬಾರದು-ಆರ್.ಆರ್.ಜನ್ನು

ಕೊಪ್ಪಳ, ಜೂ.:  ಮಕ್ಕಳು ಸರ್ವತೋಮುಖ ಅಭಿವೃದ್ಧಿ ಹೊಂದಲು  ಪೋಷಣೆ ಅತ್ಯವಶ್ಯಕವಾಗಿದ್ದು, ಯಾವುದೇ ಮಗುವು ಪೋಷಣೆಯಿಂದ ವಂಚಿತವಾಗಬಾರದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಹೇಳಿದರು.
        ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಕೊಪ್ಪಳ ನಗರದ ಜಿಲ್ಲಾ ನ್ಯಾಯಾಲಯದ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಮಕ್ಕಳು ಜನ್ಮದಿಂದ ಮಾನಸಿಕವಾಗಿ ಅಥವಾ ದೈಹಿಕವಾಗಿ ಧೃಢತೆ ಹೊಂದಿರುವುದಿಲ್ಲ. ಆದ್ದರಿಂದ ಪ್ರತಿಯೊಂದು ಮಗುವಿಗೂ ಪೋಷಣೆ ನೀಡುವುದು ಅತ್ಯವಶ್ಯಕವಾಗಿದೆ. ಬಡತನದಿದಾಗಿ ಮಕ್ಕಳು ಪೋಷಣೆಯಿಂದ ವಂಚಿತರಾಗುತ್ತಿದ್ದು, ಪೋಷಕರು ತಮ್ಮ ಬಡತನವನ್ನು ಬದಿಗಿಟ್ಟು ಮಕ್ಕಳ ಪೋಷಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಪೋಷಣೆಯಂತೆಯೇ ಶಿಕ್ಷಣವೂ ಕೂಡಾ ಮಗುವಿಗೆ ಅತ್ಯವಶ್ಯಕವಾಗಿದ್ದು, ಶಿಕ್ಷಣವನ್ನು ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ನೀಡಿ, ಅವರನ್ನು ದೇಶದ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವಲ್ಲಿ ಶ್ರಮಿಸಬೇಕು. ಆ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಕಿತ್ತೊಗೆಯಲು ನಮ್ಮೆಲ್ಲರೊಂದಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
        ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ದಶರಥ ಅವರು ಮಾತನಾಡಿ, ವಿಶ್ವ ಸಂಸ್ಥೆಯು ವಿಶ್ವ ಬಾಲ ಕಾರ್ಮಿಕ ದಿನಾಚರಣೆಯನ್ನು 2002 ರಿಂದ ಆರಂಭಿಸಿದ್ದು, ಮಕ್ಕಳಿಗೆ ಬದುಕುವ, ವಿಕಾಸ ಹೊಂದುವ, ಸಂರಕ್ಷಣೆಯ, ಭಾಗವಹಿಸುವ ಹಕ್ಕುಗಳನ್ನು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ನೀಡಿದೆ. ಆದರೆ, ಸಮೀಕ್ಷೆಯೊಂದರ ಪ್ರಕಾರ ಇಂದು ಜಗತ್ತಿನಾದ್ಯಂತ ಸುಮಾರು 200 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕ ಪದ್ಧತಿಯಲ್ಲಿ ಸಿಲುಕಿರುವುದು ವಿಷಾದನೀಯ ಸಂಗತಿಯಾಗಿದೆ. ಸರ್ಕಾರ ಬಾಲಕಾರ್ಮಿಕ ಪದ್ಧತಿಯನ್ನು ಕಿತ್ತೆಸೆಯಲು ವ್ಯಾಪಕವಾಗಿ  ಶ್ರಮಿಸುತ್ತಿದೆ. ಸರ್ವೋಚ್ಛ ನ್ಯಾಯಾಲಯವು 14 ವರ್ಷದೊಳಗಿನ ಬಾಲಕಾರ್ಮಿಕರನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವಂತೆ ಆದೇಶಿಸಿದ್ದು, ಈ ಪುನರ್ವಸತಿ ಕಾರ್ಯವು ವಿವಿಧ ಇಲಾಖೆಗಳಿಂದ ನಡೆಯುತ್ತಿದೆ. ಮಕ್ಕಳ ಅಭಿವೃದ್ಧಿಯಿಂದ ಮಾತ್ರ ಒಂದು ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳನ್ನು ಅಭಿವೃದ್ಧಿಗೊಳಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವತ್ತ ನಾವೆಲ್ಲರೂ ಶ್ರಮಿಸೋಣ ಎಂದು ಅವರು ಹೇಳಿದರು.
ಕಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಶಿವರಾಯ ಉಂಡೋಡಿ ಮಾತನಾಡಿ, ಬಡತನವು ಬಾಲಕಾರ್ಮಿಕತೆಗೆ ಮೂಲ ಕಾರಣವಾಗಿದೆ. ಪೋಷಕರು ಬಡತನದಿಂದಾಗಿ ಮಕ್ಕಳನ್ನು ಬಾಲಕಾರ್ಮಿಕತೆಗೆ ನೂಕುತ್ತಿದ್ದಾರೆ. ಇದನ್ನು ಸರಿಪಡಿಸಲು ಮೊದಲು ಮಕ್ಕಳ ಜವಾಬ್ದಾರಿ ಹೊತ್ತ ಪಾಲಕರ ಮೌಢ್ಯತೆಯನ್ನು ತೊಡೆದುಹಾಕಿ, ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಅಲ್ಲದೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಸಂರಕ್ಷಣೆ ನಡೆಸಬೇಕಿದೆ  ಎಂದು ಅವರು ತಿಳಿಸಿದರು.
       ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ ಮಾಲೀಪಾಟೀಲ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತ ಪ್ರೇಮಾ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ವಕೀಲ ಬಿ.ಶರಣಪ್ಪ, ಕಾರ್ಮಿಕ ಅಧಿಕಾರಿ ಶಿವಕುಮಾರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ಜಿ.ರಾಮತ್ನಾಳ, ಕೊಪ್ಪಳ ವೃತ್ತದ ಕಾರ್ಮಿಕ ನಿರೀಕ್ಷಕ ಬಸಯ್ಯ ಎನ್.ಅಂಗಡಿ,  ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ತರಬೇತಿ ಸಂಯೋಜಕ ಹರೀಶ್ ಜೋಗಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಹಾಗೂ ವಿವಿಧ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Please follow and like us:
error