ನಕಲಿ ವೈದ್ಯರ ಪತ್ತೆಗೆ ತಂಡ ರಚನೆ

ಕೊಪ್ಪಳ ಜೂ. : ಕೊಪ್ಪಳ ಜಿಲ್ಲೆಯಲ್ಲಿ ಅನಧಿಕೃತವಾಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ನಕಲಿ ವೈದ್ಯರನ್ನು ಪತ್ತೆ ಹಚ್ಚಲು ತಂಡವನ್ನು ರಚಿಸಲಾಗಿದ್ದು, ಅರ್ಹ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿಗೆ ಸರ್ಕಾರ ಪುನಃ ಅವಕಾಶ ಕಲ್ಪಿಸಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಬಿ. ಬಸವರಾಜ್ ಅವರು ತಿಳಿಸಿದ್ದಾರೆ.
ಸರ್ಕಾರವು ಖಾಸಗಿ ವೈದ್ಯಕೀಯ ಸಂಸ್ಥೆಗಳು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವಂತೆ ಮಾಡಲು ಹಾಗೂ ಆರ್ಥಿಕವಾಗಿ ಹಿಂದುಳಿದವರೂ ಕೂಡಾ ಉತ್ತಮ ದರ್ಜೆಯ (ಮಲ್ಟಿಸ್ಪೆಷಾಲಿಟಿ) ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಾಗಲು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯ ನೋಂದಣಿ ಕಾಯ್ದೆ ೨೦೦೭ನ್ನು ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಖಾಸಗಿ ವೈದ್ಯಕೀಯ ಸಂಸ್ಥೆಗಳು ನೋಂದಣಿ ಮಾಡಿಸಲು ಅರ್ಜಿ ಆಹ್ವಾನಿಸಿದ್ದರಿಂದ, ಜಿಲ್ಲೆಯಲ್ಲಿ ಈವರೆಗೆ ೨೭೦ ಅರ್ಜಿಗಳು ಸ್ವೀಕೃತಗೊಂಡು, ಆ ಪೈಕಿ ೨೦೮ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಯಶಸ್ವಿಯಾಗಿ ನೋಂದಣಿ ಮಾಡಲಾಗಿದೆ. ಉಳಿದಂತೆ ೪೦ ಅರ್ಜಿಗಳು ತಿರಸ್ಕೃತಗೊಂಡಿದ್ದು, ೨೨ ಸಂಸ್ಥೆಗಳ ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. ಸದ್ಯ ಸರ್ಕಾರ ಇನ್ನುಳಿದ ಖಾಸಗಿ ಸಂಸ್ಥೆಗಳ ನೋಂದಣಿಗೆ ಪುನಃ ದಿನಾಂಕವನ್ನು ನಿಗದಿಪಡಿಸುವುದಾಗಿ ತಿಳಿಸಿದೆ.
ಜಿಲ್ಲೆಯಲ್ಲಿ ಇತ್ತೀಚೆಗೆ ಖಾಸಗಿಯಾಗಿ ವೈದ್ಯ ವೃತ್ತಿ ನಡೆಸುವ ಅನರ್ಹ ವೈದ್ಯರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ರೀತಿ ಅನರ್ಹವಾಗಿ ವೈದ್ಯ ವೃತ್ತಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ತಂಡವನ್ನು ರಚಿಸಲಾಗಿದ್ದು, ಈಗಾಗಲೆ ಆಯಾ ತಾಲೂಕು ವೈದ್ಯಾಧಿಕಾರಿಗಳಿಗೆ, ಅನರ್ಹ ವೈದ್ಯರ ಕುರಿತು ಪರಿಶೀಲನಾ ವರದಿ ಸಲ್ಲಿಸಲು ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನರ್ಹ ವೈದ್ಯರ ಸಂಖ್ಯೆ ಹೆಚ್ಚಾಗಿದ್ದು, ಕೆ.ಪಿ.ಎಂ.ಇ. ೨೦೦೭ ಕಾಯ್ದೆ ಪ್ರಕಾರ ನೋಂದಣಿ ಮಾಡಿಸದೆ ವೃತ್ತಿ ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ನೋಂದಣಿ ಇಲ್ಲದವರು ಕೂಡಲೆ ವೈದ್ಯಕೀಯ ವೃತ್ತಿ ನಿಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ತಪ್ಪಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಬಿ. ಬಸವರಾಜ್ ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply