You are here
Home > Koppal News > ಬಿ‌ಎಸ್‌ವೈ : ಲಭಿಸುವುದೇ ಬಿಡುಗಡೆಯ ಭಾಗ್ಯ?

ಬಿ‌ಎಸ್‌ವೈ : ಲಭಿಸುವುದೇ ಬಿಡುಗಡೆಯ ಭಾಗ್ಯ?

ಬೆಂಗಳೂರು ನ.೭ : ಭೂ ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಸುತ್ತಿಕೊಂಡು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿಷಯಗಳಿಗೆ ಮೊದಲಿಗರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಜಾಮೀನು ಪ್ರಕರಣದಲ್ಲೂ ದೇಶದ ಕಾನೂನು ವ್ಯವಸ್ಥೆಗೆ ಮಾದರಿ ಉದಾಹರಣೆಯಾಗಲಿದ್ದಾರೆ.
ತಮ್ಮ ೨ನೇ ದೂರಿನಲ್ಲಿ ಜಾಮೀನು ಪಡೆಯಲು ಬಿ‌ಎಸ್‌ವೈ ಸಫಲರಾಗುತ್ತಿದ್ದಂತೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವುದಾಗಿ ದೂರುದಾರ ಸಿರಾಜಿನ್ ಭಾಷ ತಿಳಿಸಿದ್ದಾರೆ. ಮತ್ತೊಂದು ದೂರಿನಲ್ಲಿ ಫಲಿತಾಂಶ ಏನೇ ಬಂದರೂ ಇಬ್ಬರಲ್ಲಿ ಒಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವುದರಲ್ಲಿ ಸಂಶಯವಿಲ್ಲ.
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಖಾಸಗಿ ದೂರು ಮೇಲಿನ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲಿದೆ. ಕೋರ್ಟ್ ನೀಡುವ ಆದೇಶ ಭ್ರಷ್ಟಾಚಾರ ಪ್ರಕರಣಗಳಿಗೆ ಹೊಸ ವ್ಯಾಖ್ಯಾನವಾಗಲಿದೆ.
ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯಲ್ಲಿ ಮೂಗು ತೂರಿಸಬೇಡಿ ಎಂದು ಉಚ್ಚ ನ್ಯಾಯಾಲಯ ಗಳಿಗೆ ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟಪಡಿಸಿದೆ. ಆದರೆ ಜಾಮೀನು ಪ್ರಕರಣದಲ್ಲಿ ಈವರೆಗೆ ಯಾವುದೇ ಸ್ಪಷ್ಟ ನಿರ್ಧಾರ ಹೊರಬಂದಿಲ್ಲ.
ಇತರೆ ಜಾಮೀನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹಾಗೂ ನಾನಾ ಹೈಕೋರ್ಟ್‌ಗಳು ನೀಡಿರುವ ತೀರ್ಪು ತಾಳೆ ಮಾಡಿ ಆದೇಶ ನೀಡಲಾಗುತ್ತಿದೆ. ಈ ಕಾರಣದಿಂದ ಭ್ರಷ್ಟಾಚಾರ ಪ್ರಕರಣದ ಜಾಮೀನಿಗೆ ಸಂಬಂಧಿಸಿದಂತೆ ಕೋರ್ಟ್ ಆದೇಶಗಳು ಭಿನ್ನವಾಗಿವೆ.
ಪ್ರಸ್ತುತ ಸ್ಥಿತಿ ಏನಿದೆ?: ಭೂ ಹಗರಣ ಕುರಿತ ಎರಡು ಖಾಸಗಿ ದೂರಿನಲ್ಲಿ ಲೋಕಾಯುಕ್ತ ಕೋರ್ಟ್ ಯಡಿಯೂರಪ್ಪ ಅವರ ಜಾಮೀನು ನಿರಾಕರಿಸಿತ್ತು. ಒಂದು ದೂರಿನಲ್ಲಿ ಈಗಾಗಲೇ ಬಿ‌ಎಸ್‌ವೈ ಜಾಮೀನು ಪಡೆದು ನಿಟ್ಟುಸಿರು ಬಿಟ್ಟಿದ್ದಾರೆ.
ಮತ್ತೊಂದು ಪ್ರಕರಣದಲ್ಲೂ ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಎರಡೂ ಪ್ರಕರಣದಲ್ಲಿ ಜಾಮೀನು ದೊರೆತರೂ ಅಥವಾ ಭಾಗಶಃ ಯಶಸ್ವಿಯಾದರೂ ಒಬ್ಬರು ಸುಪ್ರೀಂ ಮೇಟ್ಟಿಲೇರುವುದು ಖಚಿತ. ವಾರಾಂತ್ಯದೊಳಗೆ ಎರಡೂ ಪ್ರಕರಣಗಳ ಸ್ಪಷ್ಟ ಚಿತ್ರಣವೂ ಹೊರಬೀಳಲಿದೆ.
ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪ್ರಸ್ತಾಪಕ್ಕೆ ಬರುವುದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಮತ್ತು ಕನಿಮೋಳಿ ಪ್ರಕರಣ. ಸತ್ಯನಾರಾಯಣ ಶರ್ಮ ಪ್ರಕರಣವೂ ಕೆಲವೊಮ್ಮೆ ಪ್ರಸ್ತಾಪವಾಗುತ್ತದೆ. ಆದರೆ ಇವ್ಯಾವೂ ಖಾಸಗಿ ದೂರುಗಳಲ್ಲ. ಸರ್ಕಾರ ಅಥವಾ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿದ್ದ ದೂರುಗಳಾಗಿದ್ದವು.
ವಿಚಾರಣೆಗೂ ಮುಂಚೆ ಖಾಸಗಿ ಪ್ರಕರಣದ ದಾಖಲೆಗಳನ್ನು ಆಧರಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಬಾರದು ಎಂದು ಒಂದು ಜಾಮೀನು ಅರ್ಜಿ ವಿಚಾರಣೆ ವೇಳೆ ರಾಜ್ಯ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅದೇ ಕನಿಮೋಳಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಅಭಿಪ್ರಾಯ ಭಿನ್ನವಾಗಿದೆ.
ಸುಪ್ರೀಂಗೆ ಖಾಸಗಿ ವಿಷಯ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಎ.ಆರ್. ಅಂತುಲೆ ಹಾಗೂ ತಮಿಳುನಾಡು ಹಾಲಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರು ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಅವರಿಬ್ಬರು ದೂರು ಹಾಗೂ ರಾಜ್ಯಪಾಲರ ಅನುಮತಿ ರದ್ದು ಕೋರಿ ಮೇಲ್ಮನವಿ ಸಲ್ಲಿಸಿದ್ದರು.
ಜಾಮೀನು ವಿಷಯಕ್ಕೆ ಈ ಪ್ರಮಾಣದ ಅಲೆದಾಟವನ್ನು ಅವರೂ ಅನುಭವಿಸಿಯೂ ಇರಲಿಲ್ಲ. ಆದರೆ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ಹೊರಡಿಸುವ ಆದೇಶ ಭ್ರಷ್ಟಾಚಾರದ ಪ್ರಕರಣಗಳಿಗೆ ಹೊಸ ಮಾರ್ಗಸೂಚಿಯನ್ನೇ ಸೃಷ್ಟಿಸಲಿದೆ.
ಜಾಮೀನು ಕರುಣಿಸಿದರೆ?
ಭೂಹಗರಣಕ್ಕೆ ಸಂಬಂಧಪಟ್ಟ ಐದು ಖಾಸಗಿ ದೂರುಗಳ ಪೈಕಿ ೨ರಲ್ಲಿ ಜಾಮೀನು ಪಡೆಯಲು ಬಿ‌ಎಸ್‌ವೈ ಲೋಕಾಯುಕ್ತ ಕೋರ್ಟ್‌ನಲ್ಲಿ ವಿಫಲವಾಗಿದ್ದಾರೆ. ಇನ್ನು ಮೂರು ದೂರುಗಳಲ್ಲಿ ಸದ್ಯವೇ ಸಮನ್ಸ್ ಆಗುವ ಸಾಧ್ಯತೆಯಿದೆ. ಸುಪ್ರೀಂ ಕೋರ್ಟ್‌ನಿಂದ ಯಡಿಯೂರಪ್ಪಗೆ ಜಾಮೀನು ಪಕ್ಕಾಗೊಂಡರೆ ಉಳಿದ ಪ್ರಕರಣಗಳಲ್ಲೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವ ವರೆಗೆ ಬಂಧನದ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಮತ್ತೊಂದೆಡೆ ದೇಶಾದ್ಯಂತ ಭ್ರಷ್ಟ ರಾಜಕಾರಣಿಗಳ ‘ಜೈಲ್ ಭರೋ’ ಪ್ರಾರಂಭವಾಗಿರುವು ದರಿಂದ, ಅಂತಹ ಪ್ರಕರಣಗಳಿಗೆ ಸುಪ್ರೀಂ ಕೋರ್ಟ್ ತೀರ್ಪು ದಿಕ್ಸೂಚಿಯಾಗಲಿದೆ. ಇದು ಪರೋಕ್ಷವಾಗಿ ೨- ಜಿ ತರಂಗಾಂತರದ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಯ ಮೇಲೂ ಪ್ರಭಾವ ಬೀರಲಿದೆ.
ಜಾಮೀನು ನಿರಾಕರಿಸಿದರೆ?
ಒಂದೊಮ್ಮೆ ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಬಿ‌ಎಸ್‌ವೈ ಜಾಮೀನು ರದ್ದುಗೊಳಿಸಿದರೆ ರಾಜಕೀಯ ಭವಿಷ್ಯವೇ ಅಂಧಕಾರಕ್ಕೆ ಹೋಗಲಿದೆ.
ಎರಡು ಪ್ರಕರಣದಲ್ಲಿ ಸುಪ್ರೀಂ ಜಾಮೀನು ರದ್ದುಗೊಳಿಸಿದ ಬಳಿಕ, ಕೆಳ ನ್ಯಾಯಾಲಯಗಳು ವ್ಯತಿರಿಕ್ತವಾಗಿ ಆದೇಶ ನೀಡುವ ಹುಂಬ ಧೈರ್ಯ ಮಾಡುವುದಿಲ್ಲ. ದೇಶಾದ್ಯಂತ ಖಾಸಗಿ ದೂರಿನ ಹೊಸ ಶಕೆಯೇ ಆರಂಭವಾಗುತ್ತದೆ. ಸುಪ್ರೀಂ ಆದೇಶ ಭ್ರಷ್ಟಾಚಾರದ ವಿರುದ್ಧ ಅಭಿಯಾನಕ್ಕೆ ಮಾರ್ಗಸೂಚಿಯಾಗಲಿದೆ.
-ಲಭಿಸುವುದೇ ಬಿಡುಗಡೆಯ ಭಾಗ್ಯ?
ಬೆಂಗಳೂರು: ಭೂಹಗರಣ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಕಳೆದ ೨೩ ದಿನಗಳಿಂದ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಡುಗಡೆಯ ಭಾಗ್ಯ ಲಭಿಸಲಿದೆಯೇ?
ಈ ಪ್ರಶ್ನೆಗೆ ಇಂದು ಹೈಕೋರ್ಟ್ ಉತ್ತರ ನೀಡಲಿದೆ. ಈಗಾಗಲೇ ಒಂದು ಪ್ರಕರಣದಲ್ಲಿ ಜಾಮೀನು ಪಡೆಯುವ ಮೂಲಕ ಭಾಗಶಃ ನಿರಾಳತೆ ಪಡೆದಿರುವ ಯಡಿಯೂರಪ್ಪ ಅವರ ಬಿಡುಗಡೆಯ ಭವಿಷ್ಯವನ್ನು ನ್ಯಾಯಾಲಯ ಮಂಗಳವಾರ ಬರೆಯಲಿದೆ.
ಯಡಿಯೂರಪ್ಪ ಅವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿರುವ ಎರಡು ಪ್ರಕರಣಗಳ ವಿಚಾರಣೆ ನಡುವೆಯೇ ಹೈಕೋರ್ಟ್‌ನ ಏಕಸದಸ್ಯ ಪೀಠ ಒಂದು ಪ್ರಕರಣಕ್ಕೆ ಗುರುವಾರ ಜಾಮೀನು ನೀಡಿತ್ತು. ಇನ್ನೊಂದು ಪ್ರಕರಣದ ವಾದ ಪ್ರತಿವಾದ ಇನ್ನೂ ಮುಂದುವರಿದಿದ್ದು, ಮಂಗಳವಾರ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ. ಈಗಾಗಲೇ ಜಾಮೀನು ದೊರೆತಿರುವ ಎರಡನೇ ದೂರಿನಲ್ಲಿ ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫೈ ಆರೋಪವಿದೆ.
ಆದರೆ, ಮೂರನೇ ದೂರಿನಲ್ಲಿ ಯಡಿಯೂರಪ್ಪ ಅವರು ತಮ್ಮ ಕುಟುಂಬ ಸದಸ್ಯರು, ಹಲವು ಸಂಸ್ಥೆಗಳು, ಹಾಲಿ ಶಾಸಕ, ವಿಧಾನಪರಿಷತ್ ಸದಸ್ಯರಿಗೆ ಭೂಮಿ ನೀಡಿರುವುದು ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬಾರದು ಎಂದು ದೂರುದಾರ ಸಿರಾಜಿನ್ ಬಾಷ ಪರ ವಕೀಲರು ವಾದ ಮಂಡಿಸಿದ್ದಾರೆ.

ನಿರೀಕ್ಷಣಾ ಜಾಮೀನು: ಇದರೊಂದಿಗೆ ತಮ್ಮ ವಿರುದ್ಧದ ಒಂದು, ನಾಲ್ಕು ಹಾಗೂ ಐದನೇ ದೂರಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ಸಹ ಮಂಗಳವಾರ ವಿಚಾರಣೆಗೆ ಬರಲಿವೆ.

Leave a Reply

Top