fbpx

ಸೇವಾ ನ್ಯೂನ್ಯತೆ ಪರಿಹಾರ ನೀಡಲು ಗ್ರಾಹಕರ ವೇದಿಕೆ ಆದೇಶ.

ಕೊಪ್ಪಳ, ನ.೧೮ (ಕ ವಾ) ಎರಡು ತಿಂಗಳ ಅವಧಿಗೆ ಇರಿಸಲಾಗಿದ್ದ ಮುದ್ದತಿ ಠೇವಣಿ ಹಣವನ್ನು ಗ್ರಾಹಕರಿಗೆ ಸರಿಯಾಗಿ ಹಿಂತಿರುಗಿಸದೇ ಸೇವಾ ನ್ಯೂನ್ಯತೆ ಎಸಗಿರುವ ಅಳವಂಡಿ ಗ್ರಾಮೀಣ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ ಇವರು ಗ್ರಾಹಕನಿಗೆ ಪರಿಹಾರ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
        ಈ ಸೇವಾ ನ್ಯೂನ್ಯತೆಗೆ ಸಂಬಂಧಪಟ್ಟಂತೆ ಫಿರ್ಯಾದುದಾರರಾದ ಅಳವಂಡಿಯ ಸೂರ್ಯಕಾಂತಗೌಡ ಸೋಮನಗೌಡ ಪಾಟೀಲ ಇವರು ಎದರುದಾರರಾದ ಅಳವಂಡಿ ಗ್ರಾಮೀಣ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಅಂದಪ್ಪ ಸಂಗನಬಸಪ್ಪ ಚಿಲಗೋಡರ, ಹಾಗೂ ಸೂರೇಶ ಸಂಗಪ್ಪ ಇವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದು, ಪ್ರಕರಣದಲ್ಲಿ ತಿಳಿಸಿದಂತೆ ಫಿರ್ಯಾದಿದಾರರು ಎದುರುದಾರರ ಅಳವಂಡಿ ಗ್ರಾಮೀಣ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ರೂ. ೧,೦೦,೦೦೦/- ಗಳನ್ನು ರಸೀದಿ ಸಂಖ್ಯೆ: ೨೫೪ ರಡಿ ಎರಡು ತಿಂಗಳ ಅವಧಿಗೆ ಮುದ್ದತಿ ಠೇವಣಿ (ಎಫ್.ಡಿ) ಮಾಡಿದ್ದು, ಅವಧಿ ಮುಗಿದ ನಂತರ ರೂ. ೧,೦೧,೬೯೮/- ಗಳನ್ನು ಕೊಡಲು ಎದುರುದಾರರು ಒಪ್ಪಿಕೊಂಡಿದ್ದರು. ಬಳಿಕ ಅವಧಿ ಮುಗಿದ ನಂತರ ಫಿರ್ಯಾದುದಾರರು ಹಣಕಾಸಿನ ಅವಶ್ಯಕತೆ ಇದ್ದುದರಿಂದ ಮ್ಯಾಚುರಿಟಿ ಹಣ ವಾಪಸ್ ಕೊಡಬೇಕೆಂದು ವಿನಂತಿಸಿಕೊಂಡರೂ ಸಹ ಎದುರುದಾರರು ವಿನಾಕಾರಣ ಮುಂದೂಡುತ್ತಾ ಬಂದಿದ್ದಾರೆ. ನಂತರ ಎದುರುದಾರರು ಫಿರ್ಯಾದುದಾರರ ಅನುಮತಿ ಇಲ್ಲದೇ ಮ್ಯಾಚುರಿಟಿ ಮೊತ್ತ ರೂ.೧,೦೧,೬೯೮/- ಗಳನ್ನು ಫಿರ್ಯಾದುದಾರರ ಉಳಿತಾಯ ಖಾತೆ ಸಂಖ್ಯೆ: ೪೪೩ ಕ್ಕೆ ೨೦೧೪ರ ಡಿ.೨೮ ರಂದು ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ. ಫಿರ್ಯಾದುದಾರರಿಗೆ ಒಕ್ಕಲುತನಕ್ಕೆ ಸಂಬಂಧಿಸಿದ ಬೀಜ, ಗೊಬ್ಬರ ಇತ್ಯಾದಿಗಳನ್ನು ಖರೀದಿಸುವುದರ ಸಲುವಾಗಿ ಫಿರ್ಯಾದುದಾರನ ಉಳಿತಾಯ ಖಾತೆಯಲ್ಲಿರುವ ಹಣವನ್ನು ಬಡ್ಡಿ ಸಹಿತ ವಾಪಸ ಕೊಡಬೇಕೆಂದು ವಿನಂತಿಸಿಕೊಂಡರೂ ಸಹ ಎದುರುದಾರರು ಠೇವಣಿ ಹಣವನ್ನು ಫಿರ್ಯಾದುದಾರರಿಗೆ ಬಡ್ಡಿ ಸಮೇತ ನೀಡದೇ ೨೦೧೪ ರ ಡಿ.೨೮ ರಂದು ಕೇವಲ ರೂ.೨೦,೦೦೦ ಗಳನ್ನು ಮಾತ್ರ ಕೊಟ್ಟು ಉಳಿದ ರೂ.೮೧,೬೯೮ ಗಳನ್ನು ನೀಡಿಲ್ಲ. ಫಿರ್ಯಾದುದಾರರಾದ ಸೂರ್ಯಕಾಂತಗೌಡ ಪಾಟೀಲ ನಂತರ ಹಲವಾರು ಬಾರಿ ಉಳಿತಾಯ ಖಾತೆಯಲ್ಲಿರುವ ಹಣವನ್ನು ಹಿಂದಿರುಗಿಸುವಂತೆ ಕೇಳಿಕೊಂಡರೂ ಎದುರುದಾರರು ಹಣವನ್ನು ನೀಡದೇ ಇದ್ದಾಗ, ೨೦೧೫ರ ಏ.೦೭ ರಂದು ವಕೀಲರ ಮೂಲಕ ನೋಟೀಸ್‌ನ್ನು ಜಾರಿಗೊಳಿಸಿದಾಗಲೂ ಸಹ ಎದುರುದಾರರು ಯಾವುದೇ ಕ್ರಮ ವಹಿಸದೇ ಇರುವುದು ಎದುರುದಾರರ ಸೇವಾ ನ್ಯೂನತೆಯೆಂದು ಪರಿಗಣಿಸಿ ಸದರಿ ಫಿರ್ಯಾದನ್ನು ದಾಖಲಿಸಿ, ಎದುರುದಾರರು ಫಿರ್ಯಾದುದಾರರಿಗೆ ಉಳಿತಾಯ ಖಾತೆಯಲ್ಲಿರುವ ಹಣ ರೂ.೮೧,೬೯೮ ಗಳನ್ನು ೨೦೧೪ರ ಡಿ.೨೧ ರಿಂದ ಶೇಕಡಾ ೧೮ ರಂತೆ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಸಮೇತ, ಮಾನಸಿಕ ಹಿಂಸೆ ಮತ್ತು ದೈಹಿಕ ತೊಂದರೆಗೆ ಪರಿಹಾರವಾಗಿ ರೂ.೨,೦೦,೦೦೦ ಗಳನ್ನು ಮತ್ತು ಫಿರ್ಯಾದುದಾರನಿಗೆ ಆದ ಆರ್ಥಿಕ ತೊಂದರೆಗೆ ಪರಿಹಾರವಾಗಿ ರೂ.೧,೦೦,೦೦೦ ಹಾಗೂ ಪ್ರಕರಣ ದಾಖಲು ಮಾಡಲು ಆದ ಖರ್ಚು ರೂ.೫,೦೦೦ ಗಳನ್ನು ನೀಡುವಂತೆ ಆದೇಶಿಸಬೇಕೆಂದು ಕೋರಿ ಪ್ರಕರಣವನ್ನು ದಾಖಲಿಸಿದ್ದರು.
          ವೇದಿಕೆಯ ಮುಖಾಂತರ ಸಮನ್ಸ್ ಜಾರಿಯಾದರೂ ಸಹ ಎದುರುದಾರರು ವೇದಿಕೆಯ ಮುಂದೆ ಹಾಜರಾಗದೇ ಇರುವುದರಿಂದ ಈ ಫಿರ್ಯಾದನ್ನು ಎದುರುದಾರರ ವಿರುದ್ಧ ‘ಏಕ-ಪಕ್ಷೀಯ’ ಪ್ರಕರಣವೆಂದು ಪರಿಗಣಿಸಲಾಗಿ, ವೇದಿಕೆಯ ಅಧ್ಯಕ್ಷರಾದ ಏಕತಾ.ಹೆಚ್.ಡಿ, ಮಹಿಳಾ ಸದಸ್ಯರಾದ ಸುಜಾತ ಅಕ್ಕಸಾಲಿ ಹಾಗೂ ಸದಸ್ಯರಾದ ರವಿರಾಜ್ ಕುಲಕರ್ಣಿ ಇವರು ಫಿರ್ಯಾದಿಗೆ ಸಂಬಂಧಪಟ್ಟಂತೆ ಹಾಜರುಪಡಿಸಿದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ೨೦೧೪ರ ಡಿ.೧೮ ರಂದು ರೂ.೧,೦೧,೬೯೮ ಗಳನ್ನು ಖಾತೆಗೆ ಜಮೆ ಮಾಡಿದ್ದು, ಅದೇ ದಿನ ರೂ.೨೦,೦೦೦ ಗಳನ್ನು ಖರ್ಚು ಹಾಕಲಾಗಿದೆ. ಖಾತೆಯಲ್ಲಿ ಇನ್ನೂ ರೂ.೮೧,೬೯೮ ಒಟ್ಟು ಮೊತ್ತ ಖಾತೆಯಲ್ಲಿರುತ್ತದೆ ಎಂದು ನಮೂದು ಮಾಡಲಾಗಿದೆ. ಈ ಬಾಕಿ ಮೊತ್ತವನ್ನು ಹಿಂದಿರುಗಿಸುವಂತೆ ಕೋರಿ ಹಲವಾರು ಬಾರಿ ಫಿರ್ಯಾದುದಾರರು ಎದುರುದಾರರನ್ನು ವಿನಂತಿಸಿಕೊಂಡರೂ ಎದುರುದಾರರು ಠೇವಣಿ ಮೊತ್ತವನ್ನು ಹಿಂದಿರುಗಿಸದೇ ಇದ್ದಾಗ, ಫಿರ್ಯಾದುದಾರರು ೨೦೧೫ ರ ಏ.೦೭ ರಂದು ವಕೀಲರ ಮೂಲಕ ನೋಟೀಸ್ ಜಾರಿಗೊಳಿಸಿದ್ದು, ಸದರಿ ನೋಟೀಸ್ ಎದುರುದಾರರಿಗೆ ತಲುಪಿದ್ದರೂ ಸಹ ಎದುರುದಾರರು ಸದರಿ ಮೊತ್ತವನ್ನು ಹಿಂದಿರುಗಿಸಲು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಹಾಗೂ ವೇದಿಕೆಯಲ್ಲಿ ಪ್ರಕರಣವನ್ನು ದಾಖಲಿಸಿ, ವೇದಿಕೆಯ ಮುಖಾಂತರ ನೋಟೀಸ್ ಜಾರಿಯಾದರೂ ಸಹ ವೇದಿಕೆಯ ಮುಂದೆ ಹಾಜರಾಗಿ ಫಿರ್ಯಾದಿಯಲ್ಲಿ ಕಾಣಿಸಿದ ಅಂಶಗಳನ್ನು ಅಲ್ಲಗಳೆಯದೇ ಇರುವುದರಿಂದ ಎದುರುದಾರರು ಫಿರ್ಯಾದುದಾರರಿಗೆ ಅವರ ಉಳಿತಾಯ ಖಾತೆಯಲ್ಲಿರುವ ಹಣ ರೂ.೮೧,೬೯೮ ಗಳನ್ನು ಹಿಂದಿರುಗಿಸದೇ ಇರುವುದನ್ನು ಸೇವಾ ನ್ಯೂನತೆಯೆಂದು ಪರಿಗಣಿಸಿ, ಸದರಿ ಫಿರ್ಯಾದನ್ನು ಭಾಗಶಃ ಪುರಸ್ಕರಿಸಿ ಮಂಜೂರು ಮಾಡಲಾಗಿದೆ. ಎದುರುದಾರರು ಫಿರ್ಯಾದುದಾರರಿಗೆ ಅವರ ಉಳಿತಾಯ ಖಾತೆಯಲ್ಲಿರುವ ಹಣ ರೂ.೮೧,೬೯೮ ಗಳನ್ನು ಪ್ರಕರಣ ದಾಖಲಾದ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ವಾರ್ಷಿಕ ಶೇಕಡಾ ೧೨ ರ ಬಡ್ಡಿಯೊಂದಿಗೆ ಪಾವತಿಸಲು ಹಾಗೂ ಸೇವಾ ನ್ಯೂನತೆಗೆ ಪರಿಹಾರವಾಗಿ ರೂ.೨೦,೦೦೦ ಗಳನ್ನು ಹಾಗೂ ಆರ್ಥಿಕ ನಷ್ಟಕ್ಕೆ ಪರಿಹಾರವಾಗಿ ರೂ. ೨,೦೦೦ ಗಳನ್ನು, ಪ್ರಕರಣದ ಖರ್ಚು ರೂ.೨,೫೦೦ ಗಳನ್ನು ಆದೇಶವಾದ ಒಂದು ತಿಂಗಳೊಳಗಾಗಿ ಪಾವತಿಸುವಂತೆ ಆದೇಶಿಸಲಾಗಿದೆ. ಇದಕ್ಕೆ ತಪ್ಪಿದಲ್ಲಿ ಸದರಿ ಮೊತ್ತದ ಮೇಲೆ ವಾರ್ಷಿಕ ಶೇಕಡಾ ೧೨ ರಷ್ಟು ಬಡ್ಡಿಯನ್ನು ಪ್ರಕರಣ ದಾಖಲಾದ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಪಾವತಿಸಲು ಸಹ ಆದೇಶಿಸಲಾಗಿದೆ.

ಆದಾಯ ಉತ್ತನ್ನಕರ ಚಟುವಟಿಕೆಗಳಿಗೆ ಪ್ರೋತ್ಸಾಹಧನ  ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನ.
ಕೊಪ್ಪಳ, ನ.೧೮ (ಕರ್ನಾಟಕ ವಾರ್ತೆ) ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ, ಜಿಲ್ಲಾ ಕಛೇರಿ, ಕೊಪ್ಪಳ ಇವರಿಂದ ಜಿಲ್ಲೆಯ ಮಾಜಿ ದೇವದಾಸಿ ಮಹಿಳೆಯರು ಆದಾಯ ಉತ್ತನ್ನಕರ ಚಟುವಟಿಕೆ ಕೈಗೊಳ್ಳಲು ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
         ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಯಂ ಉದ್ಯೋಗ ಹಮ್ಮಿಕೊಳ್ಳಲು ಮಾಜಿ ದೇವದಾಸಿ ಮಹಿಳೆಯರಿಗೆ ಈ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸಲಿಚ್ಛಿಸುವವರು ೧೯೯೩-೯೪ನೇ ಹಾಗೂ ೨೦೦೭-೦೮ ನೇ ಸಮೀಕ್ಷಾ ಪಟ್ಟಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಲ್ಪಟ್ಟಿರಬೇಕು. ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಆರ್ಥಿಕ ಸಂಸ್ಥೆಗಳಲ್ಲಿ ಅಥವಾ ಬ್ಯಾಂಕುಗಳಲ್ಲಿ ಸುಸ್ತಿರರಾಗಿರಬಾರದು. ಕಾನೂನಿನ ಯಾವುದೇ ವಿವಾದಗಳಿಗೆ ಒಳಪಟ್ಟಿರಬಾರದು. ಈಗಾಗಲೇ ಆದಾಯ ಉತ್ಪನ್ನಕರ ಚಟುವಟಿಕೆಯಡಿ ಸೌಲಭ್ಯ ಪಡೆದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅನರ್ಹರು. ಅರ್ಜಿ ನಮೂನೆಗಳನ್ನು ನ.೧೯ ರಿಂದ ವಿತರಿಸಲಾಗುತ್ತಿದ್ದು, ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯೊಂದಿಗೆ ಇತ್ತೀಚಿನ ಭಾವಚಿತ್ರ, ವಿಳಾಸ ದೃಢೀಕರಣ ಪತ್ರ, ಬ್ಯಾಂಕ್ ಖಾತೆ ಝರಾಕ್ಸ್ ಪ್ರತಿ, ವೈದ್ಯರಿಂದ ದೃಢೀಕರಣಗೊಳಿಸಿದ ವಯಸ್ಸಿನ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಡಿ.೦೪ ರೊಳಗಾಗಿ ಸಲ್ಲಿಸಬಹುದಾಗಿದೆ.
          ನಿಗದಿತ ಅರ್ಜಿ ನಮೂನೆ ಪಡೆಯಲು, ಸ್ವೀಕರಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ವಿವಿಧ ತಾಲೂಕುಗಳ ಯೋಜನಾ ಅನುಷ್ಠಾನಾಧಿಕಾರಿಗಳಾದ ದಾದೇಸಾಬ್ ಹಿರೇಮನಿ, ಕೊಪ್ಪಳ, ಮೊ: ೯೫೩೮೬೨೮೩೫೯, ಭೀಮಣ್ಣ ಟಿ.ಜಿ, ಗಂಗಾವತಿ, ಮೊ: ೯೮೮೦೫೧೮೪೯೮, ಎಮ್.ಮರಿಯಪ್ಪ, ಕುಷ್ಟಗಿ, ಮೊ:೯೬೮೬೧೪೮೯೩೩, ರೇಣುಕಾ ಎಮ್.ಯಲಬುರ್ಗಾ, ಮೊ: ೯೬೮೬೦೭೨೨೯೬ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ತಿಳಿಸಿದ್ದಾರೆ.  

ನ.೧೯ ರಂದು ವಿಶ್ವ ಶೌಚಾಲಯ ದಿನಾಚರಣೆ.
ಕೊಪ್ಪಳ, ನ.೧೮ (ಕರ್ನಾಟಕ ವಾರ್ತೆ)  ಸಮುದಾಯದಲ್ಲಿ ನೈರ್ಮಲ್ಯದ ಮಹತ್ವ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ನವೆಂಬರ್.೧೯ ರಂದು ವಿಶ್ವ ಶೌಚಾಲಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಅಂದು ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿಶ್ವ ಶೌಚಾಲಯ ದಿನಾಚರಣೆಯನ್ನು ಆಚರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.
          ವಿಶ್ವ ಶೌಚಾಲಯ ದಿನದ ಅಂಗವಾಗಿ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಹಮ್ಮಿಕೊಳ್ಳಬೇಕಾದ ಜಾಗೃತಿ ಕಾರ್ಯಕ್ರಮಗಳ ವಿವರ : ಅಂದು ಬೆಳಿಗ್ಗೆ ೯.೦೦ ಗಂಟೆಗೆ ಶಾಲಾ ಮಕ್ಕಳಿಂದ ನೈರ್ಮಲ್ಯದ ಸ್ಲೋಗನ್‌ಗಳನ್ನು ಘೋಷಣೆಯ ಮುಖಾಂತರ ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸುವುದು. ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯದ ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಾಣದ ಬಳಕೆಯ ಬಗ್ಗೆ ಕಾರ್ಯಕ್ರಮ ನಡೆಸುವುದು. ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯದ ಉದ್ಘಾಟನೆ ಮಾಡುವುದು. ಶಾಲಾ ಮಕ್ಕಳಿಂದ ನೈರ್ಮಲ್ಯದ ಕುರಿತು ಭಾಷಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಶೌಚಾಲಯದ ಕಿರುಚಿತ್ರ ಪ್ರದರ್ಶಿಸಬೇಕು ಹಾಗೂ ಶಾಲಾ ಶೌಚಾಲಯಗಳಿಗೆ ಶಾಲಾ ಸಂಚಿತ ನಿಧಿಯಿಂದ ಅಥವಾ ಲಭ್ಯವಿರುವ ಇತರೆ ಅನುದಾನದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಫಿನೈಲ್, ಬ್ರಷ್, ಸೋಪ್, ಟವೆಲ್ ಹಾಗೂ ಮಗ್‌ಗಳಲ್ಲಿ ಆಯಾ ಎಸ್.ಡಿ.ಎಮ್.ಸಿ ಸಮ್ಮುಖದಲ್ಲಿ ವಿತರಿಸಬೇಕು. ಈ ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡು  ಛಾಯಾ ಚಿತ್ರದೊಂದಿಗೆ ಜಿಲ್ಲಾ ಪಂಚಾಯತ್ ಕಛೇರಿಗೆ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!