ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಬರ ಸ್ಥಿತಿ ಅವಲೋಕಿಸಿ : ಮಂಜುನಾಥ ಪ್ರಸಾದ್

 : ಜಿಲ್ಲೆಯಲ್ಲಿನ ಬರ ಪರಿಸ್ಥಿತಿ, ಕುಡಿಯುವ ನೀರಿನ ತೊಂದರೆ, ಮೇವು ಕೊರತೆಯ ಬಗ್ಗೆ ಅಧಿಕಾರಿಗಳು ಹಳ್ಳಿ, ಹಳ್ಳಿಗಳಿಗೆ ತೆರಳಿ, ಪರಿಸ್ಥಿತಿಯನ್ನು ಅವಲೋಕಿಸಬೇಕು, ಕಚೇರಿಗಳಲ್ಲಿ ಕುಳಿತುಕೊಂಡು, ವರದಿಯನ್ನು ಸಿದ್ಧಪಡಿಸುವ ಕ್ರಮವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
  ಜಿಲ್ಲೆಯಲ್ಲಿನ ಬರಪರಿಸ್ಥಿತಿಯ ಕುರಿತಂತೆ ಪರಾಮರ್ಶೆ ನಡೆಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ತಾಲೂಕುಗಳ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರಪರಿಸ್ಥಿತಿ ಇದ್ದು, ಬೇಸಿಗೆ ಪ್ರಾರಂಭವಾಗಿರುವುದರಿಂದ, ಅಂತರ್ಜಲ ಮಟ್ಟ ಕುಸಿತ ಹಾಗೂ ನೀರಿನ ಮೂಲಗಳು ಖಾಲಿಯಾಗುತ್ತಿದೆ.  ಈಗಾಗಲೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಕುರಿತು ವರದಿಗಳು ಬರುತ್ತಿವೆ.  ಯಾವುದೇ ಕಾರಣಕ್ಕೂ ಜನರಿಗೆ ಕುಡಿಯುವ ನೀರಿನ ತೊಂದರೆ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ.  ಈ ಕುರಿತಂತೆ ರಾಜ್ಯದ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಗಳ ಉನ್ನತ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆಗಳನ್ನು ನೀಡಿದ್ದಾರೆ.  ಆದ್ದರಿಂದ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಚಿತ್ರಣ ಬೇಕಾಗಿದ್ದು, ಅಧಿಕಾರಿಗಳು ಹಳ್ಳಿ, ಹಳ್ಳಿಗಳಿಗೆ ಭೇಟಿ ನೀಡಿ, ಜನರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸಬೇಕು.  ಪರಿಸ್ಥಿತಿಯ ಖುದ್ದು ಪರಾಮರ್ಶೆ ನಡೆಸಿ, ಸಮಸ್ಯೆಗಳ ನಿವಾರಣೆಗೆ ಕ್ರಿಯಾ ಯೋಜನೆ ರೂಪಿಸಬೇಕು.  ಸದ್ಯ ಜಿಲ್ಲೆಯಲ್ಲಿ ಕೇವಲ ೦೫ ಗೋಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ಆಯಾ ತಹಸಿಲ್ದಾರರು ಪ್ರತಿ ಹೋಬಳಿಗೆರಡು ಗೋಶಾಲೆಗಳನ್ನು ಪ್ರಾರಂಭಿಸಲು ಸೂಕ್ತ ಸ್ಥಳ ಗುರುತಿಸಿ, ಈ ನಿಟ್ಟಿನಲ್ಲಿ ಕೂಡಲೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು.  ಯಾವುದೇ ಕಾರಣಕ್ಕೂ ರೈತರು ಮೇವಿನ ಕೊರತೆಯ ಕಾರಣದಿಂದ ಕಸಾಯಿಖಾನೆಗೆ ಮಾರಾಟ ಮಾಡುವಂತಹ ಪ್ರಸಂಗ ಎದುರಾಗಬಾರದು.  ಈಗಾಗಲೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೇವಿನ ಸಮಸ್ಯೆ ಉಂಟಾಗಿರುವ ಸಾಧ್ಯತೆ ಇದ್ದು, ಅಂತಹ ರೈತರಿಗೆ ಮೇವು ನಿಧಿಯಿಂದ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮೇವು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವ್ಯಾಪಕ ಕ್ರಮ ಜರುಗಿಸಬೇಕು. ಗೋಶಾಲೆ ಪ್ರಾರಂಭಕ್ಕೆ, ಮೇವು ಒದಗಿಸುವುದಕ್ಕೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಳೇ ತಪ್ಪಿಸಿ : ಕೊಪ್ಪಳ ಜಿಲ್ಲೆಯಲ್ಲಿ ಅಲ್ಲಲ್ಲಿ ಉದ್ಯೋಗ ಅರಸಿ, ಜನರು ಗುಳೇ ಹೋಗುತ್ತಿರುವ ವರದಿಗಳು ಬಂದಿವೆ.    ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಯಾವುದೇ ಕೂಲಿ ಕಾರ್ಮಿಕರಿಗೆ ತಕ್ಷಣ ಉದ್ಯೋಗ ಒದಗಿಸಬೇಕು.  ಉದ್ಯೋಗಕ್ಕಾಗಿ ಗುಳೇ ಹೋಗುವುದನ್ನು ತಪ್ಪಿಸಲು, ಅಧಿಕಾರಿಗಳು ಅಂತಹ ಗ್ರಾಮಗಳಿಗೆ ಭೇಟಿ ನೀಡಿ, ನಿಖರ ಕಾರಣಗಳನ್ನು ತಿಳಿದುಕೊಂಡು, ಸ್ಥಳೀಯವಾಗಿ ಪರಿಹರಿಸಲು ಪ್ರಯತ್ನಿಸಬೇಕು.  ಕೇಳಿತ ತಕ್ಷಣ ಕೆಲಸ, ವಿಳಂಬವಿಲ್ಲದೆ ಕೂಲಿ ಹಣ ನೀಡಿದಲ್ಲಿ, ಅಂತಹ ಕಾರ್ಮಿಕರು ಗುಳೇ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ.  ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಕೈಪಂಪ್ ದುರಸ್ತಿಗೆ ಸಂಚಾರಿ ಘಟಕ : ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿರುವ ಗ್ರಾಮಗಳಲ್ಲಿ ಯಾವುದೇ ಕೈಪಂಪ್ ಕೆಟ್ಟುಹೋದಲ್ಲಿ, ಅಂತಹವುಗಳ ದುರಸ್ತಿಗಾಗಿ ಎಲ್ಲಾ ಉಪಕರಣಗಳಿಂದ ಸುಸಜ್ಜಿತವಾಗಿರುವ ಸಂಚಾರಿ ವಾಹನ ಘಟಕ ಪ್ರಾರಂಭಿಸಲು ಯೋಜಿಸಲಾಗಿದ್ದು, ಇನ್ನೊಂದು ವಾರದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು.  ನೀರಿನ ಸಮಸ್ಯೆ ಕುರಿತಂತೆ ಸಾರ್ವಜನಿಕರು ಮಾಹಿತಿ ಒದಗಿಸಲು ಪ್ರತಿ ತಾಲೂಕಿನಲ್ಲಿಯೂ ಸಹಾಯವಾಣಿ ಪ್ರಾರಂಭಿಸಿ, ದೂರು ಬಂದ ಕೂಡಲೆ ಸಂಚಾರಿ ದುರಸ್ತಿ ಘಟಕದ ಮೂಲಕ ಕೈಪಂಪು ಅಥವಾ ಮಿನಿ ನೀರು ಸರಬರಾಜು ಘಟಕಗಳನ್ನು ದುರಸ್ತಿಗೊಳಿಸಲು ಅಗತ್ಯ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ ಒಟ್ಟು ೪೬೧ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ ೧೫. ೧೦ ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ.  ಈಗಾಗಲೆ ತಾಲೂಕು ಟಾಸ್‌ಫೋರ್ಸ್ ಯೋಜನೆಯಲ್ಲಿ ೭೯ ಕಾಮಗಾರಿಗಳಿಗೆ ೧. ೮೪ ಕೋಟಿ ರೂ.ಗಳ ಮಂಜೂರಾತಿ ನೀಡಲಾಗಿದ್ದು, ಅದರಲ್ಲಿ ೬೧ ಕಾಮಗಾರಿಗಳು ಪೂರ್ಣಗೊಂಡಿವೆ.  ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ೧೦ ಲಕ್ಷ ರೂ.ಗಳನ್ನು ಕೊಳವೆಬಾವಿಗಳ ಫ್ಲಶಿಂಗ್, ರೀಡ್ರಿಲಿಂಗ್ ಹಾಗೂ ಹೈಡ್ರೋಫ್ಯಾಕ್ಚರ್ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ.  ಜಿಲ್ಲೆಯ ಗೋಶಾಲೆಗಳ ನಿರ್ವಹಣೆಗಾಗಿ ಪ್ರತಿ ತಾಲೂಕಿಗೆ ತಲಾ ೦೫ ಲಕ್ಷ ರೂ.ಗಳನ್ನು ಎರಡನೆ ಕಂತಿನ ಅನುದಾನವಾಗಿ ಬಿಡುಗಡೆ ಮಾಡಲಾಗಿದೆ ಎಂದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಮ್, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply