ಕೆ.ಎಲ್.ಇ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ

 ಬೆಳಗಾವಿಯ ಕೆ.ಎಲ್.ಇ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡಿದ್ದರ ಫಲವಾಗಿ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಸಾಲಿನಲ್ಲಿ ಸೇರ್ಪಡೆಯಾಗಿದ್ದು ಇಡೀ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಕೆ.ಎಲ್.ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು.
ಸಮೀಪದ ಗುದ್ನೆಪ್ಪನಮಠದ ಕೆ.ಎಲ್.ಇ ಪದವಿ ಪೂರ್ವ ಕಾಲೇಜಿನಲ್ಲಿ   ಏರ್ಪಡಿಸಿದ್ದ ಕೆ.ಎಲ್.ಇ ಸಂಸ್ಥೆಯ 96ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಬೆಳಗಾವಿಯ ಶಿಕ್ಷಣ ದೃಷ್ಠಾರರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅರಬಾಳು ರುದ್ರಗೌಡ, ರಾಜಾ ಲಕಮನಗೌಡ್ರ, ವಿ.ವಿ.ಪಾಟೀಲ, ಪಿ.ಎಫ್.ಕಟ್ಟಿಮನಿ, ಮಮದಾಪುರ ಹಂಚಿನಾಳ ಅವರು ಸ್ಥಾಪಿಸಿದ ಸಂಸ್ಥೆಯನ್ನು ಪೋಷಿಸಿದ ಕೀರ್ತಿ ಸಿರಸಂಗಿ ಲಿಂಗರಾಜ ದೇಸಾಯಿ ಹಾಗೂ ಭೂಮರೆಡ್ಡಿ ಅವರಿಗೆ ಸಲ್ಲುತ್ತದೆ. ವಿವಿಧ 34 ಶಿಕ್ಷಣ ಸಂಸ್ಥೆಯ ಚುಕ್ಕಾಣಿ ಹಿಡಿದ ಪ್ರಭಾಕರ ಕೋರೆ ಅವರು ಇಂದು 211ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದರ ಫಲವಾಗಿ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಇಂದಿನ ದಿನಮಾನಕ್ಕೆ ಅನುಗುಣವಾದ ಶಿಕ್ಷಣ ಪಡೆದು ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಂಡಿದ್ದಾರೆ. 
ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಸೇವೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಿಗಲಿ ಎನ್ನುವ ಉದ್ದೇಶದಿಂದ ಗುದ್ನೆಪ್ಪನಮಠದಲ್ಲಿ ಕಾಲೇಜನ್ನು ಸ್ಥಾಪಿಸಲಾಗಿದೆ. ಇಂತಹ ಗುಣಾತ್ಮಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ಸಂಸ್ಥೆಯ ಏಳ್ಗೆಗೆ ಪ್ರತಿಯೊಬ್ಬರೂ ಸಹಾಯ ಸಹಕಾರ ನೀಡುವುದರ ಜೊತೆಗೆ ಶಿಕ್ಷಣ ಪಡೆಯಲು ಮುಂದಾಗಬೇಕೆಂದು ಅವರು ಕರೆ ನೀಡಿದರು. ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗೂ ಸಂಸ್ಥೆಯ ಸದಸ್ಯ ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ, ವೀರಣ್ಣ ರಡ್ಡೇರ, ಅಬ್ದುಲ್‌ಸಾಹೇಬ ತಳಕಲ್, ಪ್ರಾಚಾರ್ಯ ಎಸ್.ಸಿ.ಪಾಟೀಲ ಮಾತನಾಡಿದರು. ಇಟಗಿ ಕಾಲೇಜಿನ ಎಂ.ಎಸ್.ಹಿರೇಮಠ ವಿಶೇಷ ಉಪನ್ಯಾಸ ನೀಡಿದರು. 
ಗ್ರಾಮ ಪಂಚಾಯತಿ ಸದಸ್ಯರಾದ ಶರಣಯ್ಯ ಬಂಡಿ, ವೆಂಕಟೇಶ ವಡ್ಡರ, ಚನ್ನಬಸಯ್ಯ ಇತರರು ವೇದಿಕೆಯಲ್ಲಿದ್ದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Leave a Reply