ಯಡಿಯೂರಪ್ಪ ಭೂಹಗರಣದಲ್ಲಿ ಸಂಘ ಪರಿವಾರಕ್ಕೂ ಪಾಲು

ಬೆಂಗಳೂರು:ಜೈಲು ಪಾಲಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೂಹಗರಣದಲ್ಲಿ ಸಂಘ ಪರಿವಾರದ ನಾಯಕರು ಭಾಗಿಯಾಗಿರುವ ಪ್ರಕರಣವನ್ನು ಮೇಲ್‌ಟುಡೇ ಪತ್ರಿಕೆ ಬಯಲಿಗೆಳೆದಿದೆ.
ಬಿ‌ಎಸ್‌ವೈ ಭೂ ಹಗರಣದಲ್ಲಿ ಆರ್‌ಎಸ್‌ಎಸ್‌ಗೆ ಸೇರಿದ ಆರು ಸಂಸ್ಥೆಗಳು ಮತ್ತು ಏಳು ನಾಯಕರು ಅತಿ ಹೆಚ್ಚು ಲಾಭ ಪಡೆದುಕೊಂಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ವಾಣಿಜ್ಯ ಸೈಟ್‌ಗಳನ್ನು ಮತ್ತು ಗೃಹ ನಿರ್ಮಾಣಕ್ಕೆ ಯೋಗ್ಯವಾದ ಸೈಟುಗಳನ್ನು ಸರ್ಕಾರ ಅತಿ ಕಡಿಮೆ ಬೆಲೆಗೆ ಸಂಘ ಪರಿವಾರದ ನಾಯಕರಿಗೆ ಮತ್ತು ಸಂಸ್ಥೆಗಳಿಗೆ ಮಂಜೂರು ಮಾಡಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಆರು ಸಂಸ್ಥೆಗಳು:ಆರ್‌ಎಸ್‌ಎಸ್‌ಗೆ ಸೇರಿದ ರಾಷ್ಟ್ರೋತ್ಥಾನ ಪರಿಷತ್,ಜನಸೇವಾ ವಿದ್ಯಾ ಕೇಂದ್ರ, ಸಂಸ್ಕಾರ ಭಾರತಿ,ಹಿಂದು ಜಾಗರಣಾ ವೇದಿಕೆ,ಮಹಿಳಾ ದಕ್ಷತಾ ಸಮಿತಿ ಮತ್ತು ಅನಂತ ಶಿಶು ನಿವಾಸಕ್ಕೆ ಬಿಡಿ‌ಎದ ವಾಣಿಜ್ಯ ನಿವೇಶನಗಳನ್ನು ಸರ್ಕಾರ ಮಂಜೂರು ಮಾಡಿದೆ. ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಈ ನಿವೇಶನಗಳನ್ನು ಸರ್ಕಾರ ಕೇವಲ ಒಂದು ಲಕ್ಷ ರುಪಾಯಿಗೆ ಮಾರಾಟ ಮಾಡಿದೆ.
ಏಳು ಆರ್‌ಎಸ್‌ಎಸ್ ನಾಯಕರಿಗೆ ಸೈಟು:ಭಾರತೀಯ ಮಜ್ದೂರ್ ಸಂಘದ ಉಪಾಧ್ಯಕ್ಷ ಡಿ.ಕೆ. ಸದಾಶಿವ,ದಕ್ಷಿಣ ಕನ್ನಡ ಪ್ರಚಾರಕ ಪ್ರಸಾದ್ ಭಂಡಾರಿ ಪತ್ನಿ ಹಾಗೂ ಶಾಸಕಿ ಮಲ್ಲಿಕಾ ಪ್ರಸಾದ್,ಬೆಂಗಳೂರು ಮೂಲದ ಆರ್‌ಎಸ್‌ಎಸ್ ಕಾರ್ಯಕರ್ತ ಶ್ರೀಧರ ಪಟ್ಲ,ರಾಷ್ಟ್ರೋತ್ಥಾನದ ಅಂಕಣಕಾರ್ತಿ ಪಿ.ಮಾಲತಿ,ಆರ್‌ಎಸ್‌ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಶಾಸಕ ಕೆ.ಆರ್. ಮಲ್ಲಿಕಾರ್ಜುನಪ್ಪ,ಡಾ.ಬಿ.ವಿಜಯಸಂಗಮ್‌ದೇವ್ ಮತ್ತು ಶೈಲಜಾ ಶ್ರೀನಾಥ್ ಅವರಿಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ.

Related posts

Leave a Comment