ಮೋದಿಯ ವಿರುದ್ಧ ತನಿಖೆಗೆ ಶಿಫಾರಸು

ಗುಜರಾತ್ ಹಿಂಸಾಚಾರ : 
ಹೊಸದಿಲ್ಲಿ, ಮೇ 7: ಗುಜರಾತ್ ಕೋಮು ದಂಗೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರದ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯದ ಸಲಹೆಗಾರ ರಾಜು ರಾಮಚಂದ್ರನ್‌ರ ವರದಿ ಶಿಫಾರಸು ಮಾಡಿದೆಯೆನ್ನಲಾಗಿದೆ. ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಹಾಗೂ ಪಬ್ಲಿಕ್ ಪ್ರಾಸಿ ಕ್ಯೂಟರ್‌ರ ನಡವಳಿಕೆ ಲೋಪಗಳಿಂದ ಕೂಡಿತ್ತೆಂದು ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖೆ ತಂಡ ಅಭಿಪ್ರಾಯಿಸಿದೆ. ಮೋದಿಯವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವು ಪರಿಚ್ಛೇದ ಗಳನ್ವಯ ಆರೋಪಗಳನ್ನು ರೂಪಿಸಬಹುದೆಂದು ಅದು ಹೇಳಿದೆ.
ಕೋಮು ಹಿಂಸಾಚಾರವನ್ನು ನಿಯಂತ್ರಿಸಲು ಸರಕಾರಿ ಯಂತ್ರಾಂಗ ಕಾರ್ಯ ಪ್ರವೃತ್ತವಾಗಬಾರ ದೆಂಬ ಸಂದೇಶ ರವಾನೆಯಾಗಿತ್ತೇ ಎಂಬುದನ್ನು ಕಂಡು ಹಿಡಿಯಲು ಸಬರಮತಿ ಎಕ್ಸ್‌ಪ್ರೆಸ್ ದಹನದ ಬಳಿಕ ಮೋದಿಯವರ ಪಾತ್ರದ ಬಗ್ಗೆ ವಿಸ್ತೃತ ತನಿಖೆ ನಡೆಸುವುದು ಅಗತ್ಯವೆಂದು ಮೇಲ್ನೋಟಕ್ಕೆ ಸೂಚಿಸುವ ಹಲವು ಸನ್ನಿವೇಶಗಳಿವೆಯೆಂದು ವರದಿ ತಿಳಿಸಿದೆ.
2002ರ ಫೆ.27ರಂದು ರಾತ್ರಿ ಸುಮಾರು 11ರ ವೇಳೆ ಮೋದಿಯವರ ನಿವಾಸದಲ್ಲಿ ಸಭೆಯೊಂದು ಖಂಡಿತವಾಗಿಯೂ ನಡೆದಿದೆ. ಅದರಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರೆಂದು ಹೆಚ್ಚಿನ ತನಿಖೆ ವರದಿ ಹಾಗೂ ಸಿಟ್‌ನ ಅಧ್ಯಕ್ಷರ ಟಿಪ್ಪಣಿಗಳಿಂದ ವೇದ್ಯವಾಗುತ್ತದೆ ಯೆಂದು ರಾಮಚಂದ್ರನ್ ತನ್ನ ವರದಿಯಲ್ಲಿ ಹೇಳಿದ್ದಾರೆ. ತಾನು ಆ ಸಭೆಯಲ್ಲಿ ಭಾಗವಹಿಸಿದ್ದೆನೆಂಬ ಆಗಿನ ಪೊಲೀಸ್ ಉಪಾಯುಕ್ತ (ಗುಪ್ತಚರ), ಐಎಎಸ್ ಅಧಿಕಾರಿ ಸಂಜೀವ ಭಟ್‌ರ ಪ್ರತಿಪಾದನೆ ಸುಳ್ಳೆಂದು ಸಿಟ್ ವರದಿ ನಿರ್ಧರಿಸಿದೆ.
ಆದಾಗ್ಯೂ, ಭಟ್ ಹಿರಿಯ ಐಪಿಎಸ್ ಅಧಿಕಾರಿಯಾಗಿರುವುದರಿಂದ, ಸಭೆಯಲ್ಲಿ ಹಾಜರಿದ್ದುದರ ಕುರಿತು ಸಮರ್ಥಿಸಲು ಅವರಲ್ಲಿ ಯಾವುದೇ ಸಾಕ್ಷಾಧಾರಗಳಿಲ್ಲದಿದ್ದರೂ, ಅವರು ತನ್ನ ಪ್ರತಿಪಾದನೆಗೆ ಸಾಂದರ್ಭಿಕ ಸಾಕ್ಷಗಳನ್ನು ನೀಡಲು ಸಾಧ್ಯವಿರುವುದರಿಂದ ತನಿಖೆಯೊಂದನ್ನು ನಡೆಸಲೇ ಬೇಕೆಂದು ರಾಮಚಂದ್ರನ್ ಅಭಿಪ್ರಾಯಿಸಿದ್ದಾರೆ. ಭಟ್ ಆರೋಪಿಸಿರುವಂತೆ ಸಭೆಯಲ್ಲಿ ಯಾವುದೇ ಹೇಳಿಕೆ ನೀಡಿರಲಿಲ್ಲ ಹಾಗೂ ತಮ್ಮ ಸಿಟ್ಟನ್ನು ತೀರಿಸುವುದಕ್ಕೆ ಹಿಂದೂಗಳಿಗೆ ಮುಕ್ತಾವಕಾಶ ನೀಡಬೇಕೆಂಬ ಕಾನೂನು ಬಾಹಿರ ಸೂಚನೆಯನ್ನೂ ಗುಜರಾತ್ ಮುಖ್ಯಮಂತ್ರಿ ನೀಡಿರಲಿಲ್ಲವೆಂದು ಸಿಟ್ ವರದಿ ತೀರ್ಮಾನಿಸಿದೆ. ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ 161ನೆ ವಿಧಿಯಂತೆ ಸಿಟ್‌ಗೆ ನೀಡಿದ್ದ ಹೇಳಿಕೆಯಲ್ಲಿ ಸಂಜೀವ ಭಟ್, 2002ರ ಫೆ.27ರಂದು ಮುಖ್ಯಮಂತ್ರಿ ಮೋದಿ ನಡೆಸಿದ್ದ ಹಿರಿಯಧಿಕಾರಿಗಳ ಸಭೆಯಲ್ಲಿ ತಾನಿದ್ದೆ ಹಾಗೂ ಅವರು ಅಂತಹ ಹೇಳಿಕೆ ನೀಡಿದ್ದರೆಂದು ಆರೋಪಿಸಿದ್ದಾರೆ.
ಆದುದರಿಂದ, 2002ರ ಫೆ.27ರ ಸಭೆಯಲ್ಲಿ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡುವುದು ಸಹಜವಾಗಿಯೇ ಕಾನೂನಿನನ್ವಯ ಅಪರಾಧವೇ ಎಂಬ ಪ್ರಶ್ನೆಯನ್ನು ಪರಿಶೀಲಿಸಬೇಕಾಗಿದೆ. ತನ್ನ ಅಭಿಪ್ರಾಯದಂತೆ ಈ ಮೇಲ್ನೋಟದ ಹಂತದಲ್ಲಿ ಐಪಿಸಿಯ 153ಎ(1) (ಎ) ಮತ್ತು (ಬಿ) 153 ಬಿ (1) (ಸಿ), 166 ಮತ್ತು 505 (2) ಪರಿಚ್ಛೇದಗಳನ್ವಯ ಆರೋಪ ಹೊರಿಸಬಹುದು. ಆದರೆ, ಈ ಆರೋಪಗಳ ಬಗ್ಗೆ ಅಥವಾ ಯಾವುದೇ ಒಂದು ಅಥವಾ ಬೇರೆಯೇ ಆರೋಪಗಳ ಬಗ್ಗೆ ವಿಚಾರಣೆಗಾಗಿ ಮೋದಿಯವರಿಗೆ ಸಮನ್ಸ್ ಕಳುಹಿಸಬೇಕೇ ಎಂಬುದನ್ನು ನಿರ್ಧರಿಸುವ ಅಧಿಕಾರ ಸಕ್ಷಮ ವ್ಯಾಪ್ತಿಯ ನ್ಯಾಯಾಲಯದ್ದಾಗಿದೆಯೆಂದು ರಾಮಚಂದ್ರನ್ ವರದಿ ಸ್ಪಷ್ಟಪಡಿಸಿದೆ.
ಅಹ್ಮದಾಬಾದ್‌ನ ಆಗಿನ ಜಂಟಿ ಪೊಲೀಸ್ ಆಯುಕ್ತ ಎಂ.ಕೆ. ಟಂಡನ್ ಹಾಗೂ ಆಗಿನ ಪೊಲೀಸ್ ಉಪಾಯುಕ್ತ ಪಿ.ಬಿ. ಗೊಂಡಿಯಾರ ವಿರುದ್ಧ ಐಪಿಸಿಯ 304ಎ ಹಾಗೂ 166ನೆ ಪರಿಚ್ಛೇದ ಗಳನ್ವಯ ಪ್ರಕರಣಗಳನ್ನು ರೂಪಿಸಲಾಗಿದೆಯೆಂದು ವರದಿ ತಿಳಿಸಿದೆ. ಗುಲ್ಬರ್ಗ ಸೊಸೈಟಿ ಹತ್ಯಾಕಾಂಡದಲ್ಲಿ ಮೋದಿಯವರ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಪುರಾವೆಯಿಲ್ಲವೆಂದು ಸಿಟ್ ವರದಿ ನೀಡಿದ ಒಂದು ತಿಂಗಳ ಬಳಿಕ ಅಹ್ಮದಾಬಾದ್‌ನ ನಗರ ನ್ಯಾಯಾಲಯ ವೊಂದು ಅದರ ಪ್ರತಿಯನ್ನು ದೂರುದಾರೆ ಝಕೀಯ್ಯಾ ಜಾಫ್ರಿಗೆ ನೀಡಿದೆ. ವರದಿ 25 ಸಾವಿರ ಪುಟಗಳಷ್ಟು ದೀರ್ಘವಾಗಿದೆ. ವರದಿಯಲ್ಲಿ ಲೋಪವಿದೆಯೆಂದು ಕಂಡುಬಂದರೆ ಅಥವಾ ದಾಖಲೆಗಳು ಅಪೂರ್ಣವೆಂದು ಅಭಿಪ್ರಾಯಿಸಿದರೆ ಮೇ 10ರೊಳಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯವು ಝಕೀಯ್ಯಾಗೆ ಸೂಚಿಸಿದೆ. ಪ್ರಕರಣದ ವಾದ-ಪ್ರತಿವಾದ ಆರಂಭಿಸಲು ಎರಡು ತಿಂಗಳ ಸಮಯಾವಕಾಶವನ್ನು ಝಕೀಯ್ಯಾ ಕೇಳಿದ್ದಾರೆ. ಮೋದಿಯವರ ವಿರುದ್ಧ ಯಾವುದೇ ಸಾಕ್ಷ ಇಲ್ಲದಿರುವುದರಿಂದ ತನಿಖೆಯನ್ನು ನಿಲ್ಲಿಸಬಹುದೆಂದು ವರದಿ ಶಿಫಾರಸು ಮಾಡಿದೆ.
Please follow and like us:
error