ಜಿಲ್ಲೆಯಲ್ಲಿ ಬರಪರಿಸ್ಥಿತಿ : ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಿ- ಜ್ಯೋತಿ ಬಿಲ್ಗಾರ್

ಕೊಪ್ಪಳ ನ.  : ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ವಿಫಲಗೊಂಡ ಕಾರಣ ಬರಪರಿಸ್ಥಿತಿ ಉಂಟಾಗಿದೆ.  ಈಗಾಗಲೆ ಸರ್ಕಾರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವುದರಿಂದ, ಪರಿಸ್ಥಿತಿಯ ನಿರ್ವಹಣೆಗೆ ಅಧಿಕಾರಿಗಳು ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮ ಪ್ರಾರಂಭಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಅಂಶಗಳ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ಜಿಲ್ಲೆಯಲ್ಲಿ ತೀವ್ರ ಬರಪರಿಸ್ಥಿತಿ ಇದೆ.  ಜನ, ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆ ಉಂಟಾಗಬಾರದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉದ್ಘವವಾಗದಂತೆ ನೊಡಿಕೊಳ್ಳಬೇಕು.  ಜಿಲ್ಲೆಯಲ್ಲಿ ಈಗಾಗಲೆ ಪ್ರಾರಂಭಿಸಲಾಗಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಬೇಕು.  ಮೇವು ಸಂಗ್ರಹಕ್ಕೆ ಸೂಕ್ತ ಕ್ರಮ ಜರುಗಿಸಬೇಕು.  ಜನರು ಉದ್ಯೋಗ ಅರಸಿ ಇತರೆ ಪ್ರದೇಶಗಳಿಗೆ ಗುಳೇ ಹೋಗದಂತೆ ಮಾಡಲು ಉದ್ಯೋಗಖಾತ್ರಿ ಯೋಜನೆಯಡಿ ಈಗಾಗಲೆ ಉದ್ಯೋಗ ಕಾರ್ಡ್ ಪಡೆದವರಿಗೆ ಕೂಡಲೆ ಉದ್ಯೋಗ ಒದಗಿಸಲು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.   ಜಿಲ್ಲೆಯ ಕುಡಿಯುವ ನೀರು ಯೋಜನೆಯ ಸುಮಾರು ೨೭೯ ಕಾಮಗಾರಿಗಳ ಪೈಕಿ ಟೆಂಡರ್ ಕರೆಯದೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡಿ, ಕೂಡಲೆ ಕಾಮಗಾರಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೀವ್ರ ತರಾಟೆ : ಸಾಮಾನ್ಯವಾಗಿ ಸಭೆಗಳಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರ ಧೋರಣೆ ಇಂದು ಬದಲಾಗಿತ್ತು.  ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು ತೀಕ್ಷ್ಮ ಮಾತುಗಳಿಂದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.  ಜಿಲ್ಲೆಯಲ್ಲಿ ಬರಪರಿಸ್ಥಿತಿ ಇದೆ.  ಜಿಲ್ಲಾ ಮಟ್ಟದ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು, ತೀವ್ರಗತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು,  ಈಗಾಗಲೆ ಜಿಲ್ಲಾ ಪಂಚಾಯತಿಯ ಕ್ರಿಯಾ ಯೋಜನೆ ಅನುಮೋದನೆಗೊಂಡು ಆರಕ್ಕೂ ಹೆಚ್ಚು ತಿಂಗಳುಗಳಾಗಿವೆ.  ಆದರೆ ಪ್ರಗತಿ ಮಾತ್ರ ಅತ್ಯಂತ ಅಲ್ಪವಾಗಿದೆ.  ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳಡಿ ಪ್ರಗತಿ ತೃಪ್ತಿಕರವಾಗಿಲ್ಲ.  ಸಚಿವರುಗಳು ನಡೆಸುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗುತ್ತಿಲ್ಲ.  ಯಾವುದೇ ಇಲಾಖೆಗಳು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಜಿಲ್ಲೆಯಲ್ಲಿನ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಕಾಮಗಾರಿಗಳೆಷ್ಟು,  ಎಷ್ಟು ಪ್ರಗತಿಯಲ್ಲಿವೆ? ಎಷ್ಟು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೇ ಇದ್ದಿದ್ದಕ್ಕಾಗಿ ಕಾರ್ಯಪಾಲಕ ಅಭಿಯಂತರ ಭಜಂತ್ರಿ ಅವರನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.  ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕನಿಷ್ಟ ೩ ರಿಂದ ೦೪ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಬೇಕು.  ಉದ್ಯೋಗ ಕಾರ್ಡ್ ಪಡೆದವರಿಗೆ ತಕ್ಷಣ ಉದ್ಯೋಗ ಒದಗಿಸಬೇಕು.  ಈಗಾಗಲೆ ಈ ಯೋಜನೆಯಡಿ ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ವರದಿಯಲ್ಲಿ ತಿಳಿಸಿರುವಂತೆ ಕಾಮಗಾರಿಗಳಿಗೆ ಸಂಬಂಧಿಸಿದ ಮೊತ್ತ ಪಾವತಿಸಬೇಕು.  ಉದ್ಯೋಗಕ್ಕಾಗಿ ಗುಳೇ ಹೋಗುವುದನ್ನು ತಪ್ಪಿಸಲು ಆಯಾ ಗ್ರಾಮ ಪಂಚಾಯತಿಗಳು ವ್ಯಾಪಕ ಕ್ರಮ ಕೈಗೊಳ್ಳಬೇಕು.  ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಹಿಂಗಾರು ಮಳೆ ವಿಫಲದ ಆತಂಕ : ಸಭೆಯಲ್ಲಿ ಭಾಗವಹಿಸಿದ್ದ ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೆ ಮುಂಗಾರು ವಿಫಲಗೊಂಡು ಬರಪರಿಸ್ಥಿತಿ ಇದೆ.  ಇದೀಗ ಹಿಂಗಾರು ಮಳೆಯೂ ಸಹ ವಿಫಲವಾಗುವ ಆತಂಕವಿದೆ.  ಇನ್ನು ಹದಿನೈದು ದಿನಗಳ ಒಳಗಾಗಿ ಮಳೆ ಬಾರದಿದ್ದಲ್ಲಿ, ಸದ್ಯ ಬಿತ್ತನೆ ಮಾಡಲಾಗಿರುವ ಹುರಿಕಡಲೆ ಮುಂತಾದ ಬೆಳೆಗಳೂ ಸಹ ಕೈಗೆ ಬರುವುದು ಕಷ್ಟವಾಗಲಿದೆ.  ಜಿಲ್ಲೆಯಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ.  ಆದರೆ ರಸಗೊಬ್ಬರ ಇನ್ನೂ ಜಿಲ್ಲೆಗೆ ಬೇಕಾಗಬಹುದು.  ಈಗಾಗಲೆ ರಸಗೊಬ್ಬರ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ಉಪಕಾರ್ಯದರ್ಶಿ ಅನ್ನದಾನಯ್ಯ, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ, ಮುಖ್ಯ ಲೆಕ್ಕಾಧಿಕಾರಿ ರತ್ನಾನಾಯಕ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.  ಕರ್ನಾಟಕ ಅಭಿವೃದ್ಧಿ ಅಂಶಗಳ ಕುರಿತು ವಿವಿಧ ಇಲಾಖೆಗಳ ಪ್ರಗತಿಯನ್ನು ಈ ಸಂದರ್ಭದಲ್ಲಿ ಪರಿಶೀಲಿಸಲಾಯಿತು.

Leave a Reply