ಏಪ್ರಿಲ್ ೨೦೧೬ ರೊಳಗೆ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಅಂತಿಮ ಗಡುವು ಶಿವರಾಜ್ ತಂಗಡಗಿ.

ಕೊಪ್ಪಳ ಸೆ. ೦೯ (ಕ ವಾ)ಕೊಪ್ಪಳ ನಗರದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಯುಜಿಡಿ ಕಾಮಗಾರಿಯನ್ನು ಏಪ್ರಿಲ್ ೨೦೧೬ ರೊಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಅಂತಿಮ ಗಡುವು ನೀಡಿದರು.
     ಕೊಪ್ಪಳ ನಗರಸಭೆಗೆ ಸಂಬಂಧಿಸಿದ ಕಾಮಗಾರಿಗಳು ಹಾಗೂ ಸಮಸ್ಯೆಗಳ ಕುರಿತು ನಗರಸಭೆಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಲ ನಗರದಲ್ಲಿ ಯುಜಿಡಿ ಕಾಮಗಾರಿ ೨೦೧೧ ರಿಂದ ಪ್ರಾರಂಭವಾಗಿದ್ದು, ಮಂದಗತಿಯಲ್ಲಿ ಸಾಗುತ್ತಿದೆ.  ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹಲವು ಬಾರಿ ಸೂಚನೆ ನೀಡಿದರೂ, ಗುತ್ತಿಗೆದಾರರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ.  ನಗರದಲ್ಲಿ ೧೦೮. ೫ ಕಿ.ಮೀ. ಯುಜಿಡಿ ವ್ಯಾಪ್ತಿಯ ಕಾಮಗಾರಿಯಲ್ಲಿ ಇದುವರೆಗೂ ೫೯ ಕಿ.ಮೀ. ಕಾಮಗಾರಿ ಮಾತ್ರ ಪೂರ್ಣಗೊಂಡಿದೆ.  ಇನ್ನೂ ೪೯ ಕಿ.ಮೀ. ಬಾಕಿ ಇದೆ.  ಯುಜಿಡಿ ಕಾಮಗಾರಿಯ ವಿಳಂಬದಿಂದಾಗಿ ನಗರದ ರಸ್ತೆಗಳಲ್ಲೆವೂ ಹಾಳಾಗಿದ್ದು, ಜನರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.  ಇಷ್ಟು ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವುದನ್ನು ಗಮನಿಸಿದರೆ, ಇದೇನು ಪಂಚವಾರ್ಷಿಕ ಯೋಜನೆಯೆ? ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಯುಜಿಡಿ ಕಾಮಗಾರಿಯ ವಿಳಂಬದಿಂದಾಗಿ ನಗರ ಅಭಿವೃದ್ಧಿಗೆಂದು ಪ್ರಾರಂಭಿಸಲಾಗಿರುವ ನಗರೋತ್ಥಾನ ಯೋಜನೆ ಕಾಮಗಾರಿಗಳೂ ಸಹ ನಿಧಾನಗತಿಯಲ್ಲಿ ಸಾಗುತ್ತಿವೆ.  ಏಪ್ರಿಲ್ ೨೦೧೬ ರ ಒಳಗಾಗಿ ಕೊಪ್ಪಳ ನಗರದಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕು.  ಇದು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಅಂತಿಮ ಗಡುವಾಗಿದ್ದು, ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ, ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದಲ್ಲದೆ, ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು.  ಯುಜಿಡಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.  ಎಲ್ಲೆಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡಿವೆಯೋ, ಅಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೆ ಪ್ರಾರಂಭಿಸಬೇಕು.  ಕೊಪ್ಪಳ ನಗರದಲ್ಲಿ ನಗರೋತ್ಥಾನ ಯೋಜನೆಯಡಿ ಒಟ್ಟು ೨೧೯ ಕಾಮಗಾರಿಗಳಿದ್ದು, ಈವರೆಗೆ ೧೦೮ ಕಾಮಗಾರಿಗಳು ಪೂರ್ಣಗೊಂಡಿವೆ.  ಪ್ರತಿ ತಿಂಗಳು ಜಿಲ್ಲಾಧಿಕಾರಿಗಳು ಯುಜಿಡಿ ಹಾಗೂ ನಗರೋತ್ಥಾನ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಕುಡಿಯುವ ನೀರು : ಕೊಪ್ಪಳ ನಗರಕ್ಕೆ ೨೪*೭ ಕುಡಿಯುವ ನೀರು ಸರಬರಾಜು ಯೋಜನೆ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.  ಕಾಸನಕಂಡಿ ಬಳಿ ಪೈಪ್‌ಲೈನ್ ಅಳವಡಿಕೆಗೆ ಅರಣ್ಯ ಇಲಾಖೆಯ ಕ್ರಮದಿಂದಾಗಿ ತೊಂದರೆಯಾಗಿದೆ.  ಕೊಪ್ಪಳ ನಗರದಲ್ಲಿ ಕಳೆದ ವರ್ಷ ನಿರ್ಮಾಣ ಪೂರ್ಣಗೊಂಡಿದ್ದ ಓವರ್‌ಹೆಡ್ ಟ್ಯಾಂಕ್ ಕುಸಿತಗೊಂಡು ಹಾನಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ನಗರ ನೀರು ಸರಬರಾಜು ಮಂಡಳಿ ನೇಮಿಸಿದ್ದ ಸಮಿತಿಯು ಸಲ್ಲಿಸಿದ ವರದಿಯ ಆಧಾರದಲ್ಲಿ ಈಗಾಗಲೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿ ಕಾರ್ಯಪಾಲಕ ಅಭಿಯಂತರ ಕೃಷ್ಣಮೂರ್ತಿ ಸಭೆಗೆ ವಿವರಿಸಿದರು.  ನಗರದಲ್ಲಿ ಒಂದು ಟ್ಯಾಂಕ್ ಕುಸಿತಗೊಂಡು ಈಗಾಗಲೆ ಹಾನಿಯಾಗಿದೆ.  ಇದೇ ಗುತ್ತಿಗೆದಾರರು ನಗರದಲ್ಲಿ ನಿರ್ಮಿಸಿರುವ ಉಳಿದೆರಡು ಟ್ಯಾಂಕ್‌ಗಳ ಗುಣಮಟ್ಟದ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಿ.  ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಟ್ಯಾಂಕ್‌ಗಳನ್ನು ತೆರವುಗೊಳಿಸಿದ ಬಳಿಕ, ಪುನಃ ಹೊಸದಾಗಿ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಕ್ರಮವನ್ನು ಶೀಘ್ರ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ವೃತ್ತಗಳ ಅಭಿವೃದ್ಧಿ : ಕೊಪ್ಪಳ ನಗರದ ಪ್ರಮುಖ ಐದು ಸರ್ಕಲ್‌ಗಳನ್ನು ಅಭಿವೃದ್ಧಿ
     ಸಭೆಯಲ್ಲಿ ಭಾಗವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ನಗರದಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ಉತ್ತರ ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.  ನಗರೋತ್ಥಾನ ಕಾಮಗಾರಿಗಳೂ ಸಹ ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲ ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪುಪಟ್ಟಿಯಲ್ಲಿ ಸೇರಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
     ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾಧಿಕಾರಿ ರಮಣದೀಪ್ ಚೌಧರಿ ಸೇರಿದಂತೆ ನಗರಸಭೆ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.  ನಗರ ಆಶ್ರಯ ಯೋಜನೆಯಡಿ ಫಲಾನುಭವಿಗಳ ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿರುವ ಬಗೆಗಿನ ಪ್ರಮಾಣಪತ್ರಗಳನ್ನು ಇದೇ ಸಂದರ್ಭದಲ್ಲಿ ಸಚಿವರು ಫಲಾನುಭವಿಗಳಿಗೆ ವಿತರಣೆ ಮಾಡಿದರು.

ಗೊಳಿಸಲು ಕೂಡಲೆ ಕಾಮಗಾರಿ ಪ್ರಾರಂಭಿಸಬೇಕು.  ಅದಕ್ಕೂ ಪೂರ್ವದಲ್ಲಿ ಸರ್ಕಲ್‌ಗಳಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಲು ಕೂಡಲೆ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಹಾಗೂ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.

Please follow and like us:
error