fbpx

ನ. ೧೦ ರಂದು ಆದರ್ಶ ವಿದ್ಯಾಲಯ ಕಟ್ಟಡ ಉದ್ಘಾಟನೆ.

ಕೊಪ್ಪಳ ನ. ೦೯ (ಕ ವಾ) ತಾಲೂಕಿನ ಟಣಕನಕಲ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆದರ್ಶ ವಿದ್ಯಾಲಯ ಕಟ್ಟಡದ ಉದ್ಘಾಟನಾ ಸಮಾರಂಭ ನ. ೧೦ ರಂದು ಮಧ್ಯಾಹ್ನ ೧-೩೦ ಗಂಟೆಗೆ ಟಣಕನಕಲ್‌ನಲ್ಲಿ ನಡೆಯಲಿದೆ.
     ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಆದರ್ಶ ವಿದ್ಯಾಲಯ ಕಟ್ಟಡದ ಉದ್ಘಾಟನೆ ನೆರವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಸಾಲೋಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾ.ಪಂ. ಅಧ್ಯಕ್ಷೆ ಬಾನು ಚಾಂದಸಾಬ, ತಾ.ಪಂ. ಉಪಾಧ್ಯಕ್ಷ ಬಾಳಪ್ಪ ಬೂದಗುಂಪಿ, ಸೇರಿದಂತೆ ಜಿ.ಪಂ. ಸದಸ್ಯರುಗಳು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಉನ್ನತ ಅಧಿಕಾರಿಗಳು ಭಾಗವಹಿಸುವರು.

ನ.೧೭ ರಿಂದ ಬೆಳಗಾವಿಯಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ.
ಕೊಪ್ಪಳ, ನ.೦೯ (ಕ ವಾ) ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್‌ಗಾಂಧಿ ಖೇಲ್ ಅಭಿಯಾನ ಮಹಿಳಾ ಕ್ರೀಡಾ ಕೂಟದ ಗುಂಪು ೦೩ ರ ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಟಿ.ಟಿ ಕ್ರೀಡೆಗಳನ್ನು ನ.೧೭ ರಿಂದ ನ.೧೯ ರವರೆಗೆ ಬೆಳಗಾವಿ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
     ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ಮಾತ್ರ ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.  ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳು ನ.೧೭ ರಂದು ಮಧ್ಯಾಹ್ನ ೦೨  ಗಂಟೆಯೊಳಗಾಗಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಲು ಹಾಗೂ ತಮ್ಮ ಜಿಲ್ಲಾ ತಂಡದ ಧ್ವಜದೊಂದಿಗೆ ಸಂಜೆ ೦೪  ಘಂಟೆಗೆ ನಡೆಯುವ ಪಥ ಸಂಚಲನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಕ್ರೀಡಾ ಪಟುಗಳು ನಿಗದಿತ ನಮೂನೆಯಲ್ಲಿ ತಮ್ಮ ಜನ್ಮ ದಿನಾಂಕ ಪ್ರಮಾಣ ಪತ್ರ, ಐ.ಡಿ ಕಾರ್ಡ, ಬ್ಯಾಂಕ್ ಖಾತೆಯ ಸಂಖ್ಯೆ ಮತ್ತು ವಿಳಾಸ ಇತ್ಯಾದಿ ಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಹೋಗಬೇಕು. ಜಿಲ್ಲೆಯಿಂದ ಭಾಗವಹಿಸುವ ಸ್ಪರ್ಧಿಗಳಿಗೆ ಕೊಪ್ಪಳ ದಿಂದ ಬೆಳಗಾವಿ ಜಿಲ್ಲೆಯವರೆಗೆ ಹೋಗಿ ಬರುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳದ ಸಹಾಯಕ ನಿರ್ದೇಶಕಿ ಡಾ.ಶಾರದಾ ನಿಂಬರಗಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ನ್ನು  ಸಂಪರ್ಕಿಸಬಹುದಾಗಿದೆ.

ಬಾಲಕಿ ಅಪಹರಣ ಶಂಕೆ ಪತ್ತೆಗೆ ಸಹಕರಿಸಲು ಮನವಿ.
 ಕೊಪ್ಪಳ, ನ.೦೯ (ಕ ವಾ) ಭಾಗ್ಯನಗರ ಸರ್ಕಾರಿ ಬಾಲಕೀಯರ ಬಾಲಮಂದಿರದಿಂದ   ಆರೈಕೆ ಮತ್ತು ಪೋಷಣೆಗಾಗಿ ಇರಿಸಲಾಗಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ಟರಹಳ್ಳಿಯ ಸುಮಾ ತಂದೆ, ಕುಮಾರ (೧೪) ಎಂಬ ಬಾಲಕಿ, ಬಾಲಕಿಯರ ಬಾಲಮಂದಿರದಿಂದ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಬಾಲಕಿಯನ್ನು ಅ.೧೮ ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಮಕ್ಕಳ ಸಹಾಯವಾಣಿಯ ಸಿಬ್ಬಂದಿಯವರ ಸಹಯೋಗದ ರಕ್ಷಣಾ ಸಂಸ್ಥೆಯಲ್ಲಿ ಆರೈಕೆ ಮತ್ತು ಪೋಷಣೆಗಾಗಿ ಇರಿಸಲಾಗಿತ್ತು.  ಬಳಿಕ ಬಾಲಕಿಯು ಇದಾದ ನಾಲ್ಕನೇ ದಿನಕ್ಕೆ. ಅಂದರೆ ಅ.೨೨ ರಂದು ಸಂಜೆ ೫.೩೦ ಗಂಟೆ ಸುಮಾರಿಗೆ ಬಾಲಮಂದಿರದಿಂದ ಕಾಣೆಯಾಗಿದ್ದಾಳೆ.   ಬಾಲಮಂದಿರದ ಸಿಬ್ಬಂದಿ, ಬಾಲಕಿಯನ್ನು ಎಲ್ಲಾ ಕಡೆ ಹುಡುಕಿ, ಯಾವುದೇ ಮಾಹಿತಿ ತಿಳಿಯದ ಹಿನ್ನೆಲೆಯಲ್ಲಿ ಬಾಲಕಿಯನ್ನು ಯಾರೋ ಅಪರಿಚಿತರು ಅಪಹರಣ ಮಾಡಿರಬಹುದು ಎಂಬ ಸಂಶಯ ಬಂದಿದ್ದು, ಅಪಹರಣ ಮಾಡಿಕೊಂಡು ಹೋದ ವ್ಯಕ್ತಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಕಾಣೆಯಾದ ಬಾಲಕಿಯ ವಿವರ ಈ ಕೆಳಗಿನಂತಿದೆ ಹೆಸರು: ಸುಮಾ, ತಂದೆ:ಕುಮಾರ, ತಾಯಿ:ಚಂದ್ರಕಲಾ, ವಯಸ್ಸು: ೧೪, ಜಾತಿ:ಲಮಾಣಿ, ಸಾ:ಪಟ್ಟರಹಳ್ಳಿ, ತಾ:ಹಿರಿಯೂರು, ಜಿ:ಚಿತ್ರದುರ್ಗ, ಭಾಷೆ: ಕನ್ನಡ, ವಿದ್ಯಾಭ್ಯಾಸ:೬ನೇ ತರಗತಿ, ಎತ್ತರ : ೪ ಫೀಟ್, ೪ ಇಂಚು, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ, ಎಡಕಿವಿಯ ಕೆಳಭಾಗ ಹರಿದಿದೆ. ಬಾಲಮಂದಿರದಿಂದ ಹೊರಡುವಾಗ ಹಸಿರು ಬಣ್ಣದ ಝರಿ ಲಂಗಾ, ಗುಲಾಬಿ ಬಣ್ಣದ ಬ್ಲೌಸ್, ಹಸಿರು ಬಣ್ಣದ ವೇಲು ಧರಿಸಿದ್ದಾಳೆ. 
     ಈ   ಚಹರೆಯುಳ್ಳ ಬಾಲಕಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಕೊಪ್ಪಳ ಕಂಟ್ರೋಲ್ ರೂಂ, ದೂರವಾಣಿ ಸಂಖ್ಯೆ: ೦೮೫೩೯-೨೩೦೧೦೦, ೨೩೦೨೨೨, ಪೊಲೀಸ್ ಇನ್ಸ್‌ಪೆಕಟ್ಟರ್, ನಗರ ಪೊಲೀಸ್ ಠಾಣೆ, ಕೊಪ್ಪಳ, ಮೊಬೈಲ್ ಸಂಖ್ಯೆ: ೯೪೮೦೮೦೩೭೪೫, ನಗರ ಪೊಲೀಸ್ ಠಾಣೆ, ಕೊಪ್ಪಳ, ದೂರವಾಣಿ ಸಂಖ್ಯೆ: ೦೮೫೩೯-೨೨೦೩೩೩ ಇವರಿಗೆ ಮಾಹಿತಿ ನೀಡುವಂತೆ ತಿಳಿಸಿದೆ.
Please follow and like us:
error

Leave a Reply

error: Content is protected !!