ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ- ಕೆ. ರಾಘವೇಂದ್ರ ಹಿಟ್ನಾಳ್

  ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಪ್ಪಳ ಜಿಲ್ಲೆ, ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಬೇಕಿದೆ.  ಫಲಿತಾಂಶ ಸುಧಾರಣೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಮೊದಲು ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
     ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಕೊಪ್ಪಳದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಜಿಲ್ಲೆಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಶಿಕ್ಷಣ ತಜ್ಞ ಡಾ. ಮೌಲಾನಾ ಅಬ್ದುಲ್ ಕಲಾಂ ಆಜಾದ್ ರವರ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ೨೦೧೨ ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆ ಶೇ. ೭೮ ರಷ್ಟು ಸಾಧನೆ ಮಾಡಿ, ರಾಜ್ಯದಲ್ಲಿ ೨೬ನೇ ಸ್ಥಾನದಲ್ಲಿದೆ.  ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ಯಾವುದೇ ಪರೀಕ್ಷಾ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯ ಸಾಧನೆ   ತೃಪ್ತಿಕರವಾಗಿಲ್ಲ.  ಕಡಿಮೆ ಫಲಿತಾಂಶ ಬರಲು ಕಾರಣಗಳೇನು ಎಂಬುದರ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.  ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕಿದೆ.  ಜಿಲ್ಲೆಯ ಶಿಕ್ಷಕರು ಪ್ರತಿಭಾವಂತರಾಗಿದ್ದರೂ, ಶಿಕ್ಷಣದ ಗುಣಮಟ್ಟ ಕೆಳಮಟ್ಟದಲ್ಲಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.  ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಹೆಚ್ಚಿಸಬೇಕು, ಗುಣಮಟ್ಟದ ಶಿಕ್ಷಣ ನೀಡಬೇಕು.  ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರು ಹೆಚ್ಚಿನ ಶ್ರಮ ವಹಿಸುವ ಅಗತ್ಯವಿದೆ.  ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಹೊಂದಿರುವ ಭಯದ ಮನೋಭಾವನೆಯನ್ನು ನಿವಾರಿಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕಾದ ಅಗತ್ಯವಿದೆ.  ದೃಢಸಂಕಲ್ಪ ಹಾಗೂ ಶ್ರಮದಿಂದ ಫಲಿತಾಂಶದ ಗುಣಮಟ್ಟ ಉತ್ತಮಗೊಳಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಅಭಿಪ್ರಾಯಪಟ್ಟರು.
     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಶೈಕ್ಷಣಿಕ ಬೋಧನಾ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನಗಳು ನಡೆದಿವೆ.  ಆದರೆ ಇದರ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ದೊರಕಿಲ್ಲ.  ಆಯಾ ಶಾಲೆಯ ಪರೀಕ್ಷಾ ಫಲಿತಾಂಶದ ಮಟ್ಟ, ಆಯಾ ಶಿಕ್ಷಕರ ಸಾಧನೆಯನ್ನು ಬಿಂಬಿಸುತ್ತದೆ.  ಸರ್ಕಾರ ೬ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿ, ಶಿಕ್ಷಕರ ವೇತನವನ್ನೂ ಸಹ ಹೆಚ್ಚಿಸಿದೆ.  ಶಿಕ್ಷಕರು ಶಾಲಾ ಮಟ್ಟದಲ್ಲಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡದೆ, ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿದಲ್ಲಿ ಜಿಲ್ಲೆಯ ಶೈಕ್ಷಣಿಕ ಮಟ್ಟ ಸುಧಾರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
     ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  ೨೦೧೨ ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ೨೦೧೧ ರಲ್ಲಿ ಜಿಲ್ಲೆ ೨೦ನೇ ಸ್ಥಾನದಲ್ಲಿತ್ತು.  ೨೦೧೨ರಲ್ಲಿ ೨೬ನೇ ಸ್ಥಾನದಲ್ಲಿದೆ.  ಜಿಲ್ಲೆಯ ೮೫ ಸರ್ಕಾರಿ, ೧೮- ಅನುದಾನಿತ ಮತ್ತು ೫೩- ಅನುದಾನರಹಿತ ಶಾಲೆಗಳಲ್ಲಿ ಶೇ. ೮೦ ಕ್ಕೂ ಹೆಚ್ಚು ಫಲಿತಾಂಶ ಬಂದಿದೆ.  ಜಿಲ್ಲೆಯ ಒಂದು ಅನುದಾನರಹಿತ ಶಾಲೆಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.  ಜಿಲ್ಲೆಯಲ್ಲಿ ೧೩ ಸರ್ಕಾರಿ, ೨ ಅನುದಾನಿತ ಹಾಗೂ ೨೧ ಅನುದಾನರಹಿತ ಪ್ರೌಢಶಾಲೆಗಳಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬಂದಿದೆ.  ಈ ಪೈಕಿ ನಗರ ಮತ್ತು ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿರುವುದನ್ನು ಗಮನಿಸಿದರೆ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆನ್ನುವ ಸಮಾಧಾನವಿದೆ.  ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸಾಧನೆ ತೋರಬೇಕಿದೆ.  ಜಿಲ್ಲೆಯ ಫಲಿತಾಂಶದ ಮಟ್ಟವನ್ನು ರಾಜ್ಯಮಟ್ಟದಲ್ಲಿ ೨೬ ರಿಂದ ಕನಿಷ್ಟ ೧೫ನೇ ಸ್ಥಾನಕ್ಕೇರುವ ಭರವಸೆಯನ್ನು ಶಿಕ್ಷಣ ಸಚಿವರಿಗೆ ನೀಡಿದ್ದೇವೆ.  ಇದಕ್ಕೆ ಶಿಕ್ಷಕರ ಸಹಕಾರ ಅಗತ್ಯವಾಗಿದೆ ಎಂದರು.
     ನಮ್ಮ ರಾಷ್ಟ್ರದ ಮೊದಲ ಶಿಕ್ಷಣ ಸಚಿವ ಹಾಗೂ ಶಿಕ್ಷಣ ತಜ್ಞ ಡಾ. ಅಬ್ದುಲ್ ಕಲಾಂ ಆಜಾದ್ ರವರ ಜನ್ಮ ದಿನಾಚರಣೆ ಕುರಿತಂತೆ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ವಿ.ಬಿ. ರಡ್ಡೇರ್ ಅವರು ಮಾತನಾಡಿ,  ಡಾ. ಅಬ್ದುಲ್ ಕಲಾಂ ಆಜಾದ್ ರವರು ಸತತ ೧೦ ವರ್ಷಗಳ ಕಾಲ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುವುದರ ಮೂಲಕ ನಮ್ಮ ದೇಶದ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು.  ದೇಶ ವಿಭಜನೆಯನ್ನು ಬಲವಾಗಿ ವಿರೋಧಿಸಿದ್ದ ಅವರು, ಈ ದೇಶದ ಶಿಕ್ಷಣ ಕ್ಷೇತ್ರಕ್ಕೆ ಅತ್ಯಮೂಲ್ಯ ಕಾಣಿಕೆಯನ್ನು ನೀಡಿದ್ದಾರೆ.  ಶಿಕ್ಷಕರೂ ಸೇರಿದಂತೆ ಯಾವುದೇ ನೌಕರರು, ತಾವು ಪಡೆಯುವ ಸಂಬಳಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವುದೂ ಸಹ ಒಂದು ಬಗೆಯ ಭ್ರಷ್ಟಾಚಾರವೇ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
     ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ಪ್ರಶಸ್ತಿ ವಿಜೇತರಾದ ಚಿತ್ರದುರ್ಗ ಜಿಲ್ಲೆಯ ಚಂದ್ರಪ್ಪ, ಬಸವರಾಜ್, ಸಂತೋಷ್, ಪಂಚಾಕ್ಷರಯ್ಯ, ಮನೋಹರ್ ಅವರು ಭಾಗವಹಿಸಿದ್ದರು.  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜಯ್ಯ, ಗೋನಾಳ್, ಸೋಮಶೇಖರಗೌಡ, ವೆಂಕಟೇಶ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ., ಶಿಕ್ಷಣ ಇಲಾಖೆಯ ಪಂಡಿತ್ ಯಲ್ಲಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಗಳು ಪಾಲ್ಗೊಂಡಿದ್ದರು.

Please follow and like us:
error