ವಾಹನ ದುರಸ್ತಿ ವೆಚ್ಚ ಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಸೂಚನೆ- ಗ್ರಾಹಕರ ವೇದಿಕೆ ತೀರ್ಪು

  ಅಪಘಾತಕ್ಕೀಡಾದ ವಾಹನವನ್ನು ರಿಪೇರಿ ಮಾಡಿಸಿದ ವೆಚ್ಚವನ್ನು ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ರವರು ಪಾವತಿಸಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.
  ಯಲಬುರ್ಗಾ ತಾಲೂಕು ನರೇಗಲ್‌ನ ಬಸವರಾಜ್ ತಂದೆ ಕಲ್ಯಾಣಪ್ಪ ಎಂಬುವವರು ತಮ್ಮ ಟಾಟಾ ಇಂಡಿಕಾ ಕಾರಿಗೆ ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ಬೆಂಗಳೂರು ಇವರ ಬಳಿ ವಿಮೆ ಮಾಡಿಸಿದ್ದರು.  ವಿಮಾ ಅವಧಿ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಕಳೆದ ೨೦೧೧ ರ ಮಾರ್ಚ್ ೧ ರಂದು ಇದೇ ಕಾರು ಕೊಪ್ಪಳ ನಗರದ ಹೊರವಲಯದಲ್ಲಿ ಅಪಘಾತಕ್ಕೀಡಾಗಿತ್ತು.  ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳ ಮಹಜರು ಮಾಡಿ, ಮೋಟಾರು ಕಾಯ್ದೆ ಕಾಯ್ದೆಯನ್ವಯ ಚಾಲಕನಿಂದ ೫೦೦ ರೂ. ದಂಡ ವಸೂಲು ಮಾಡಿದ್ದರು.  ಅಪಘಾತಕ್ಕೀಡಾದ ಕಾರನ್ನು ಗದುಗಿನ ಅರಿಹಂತ ಬಾಗಮಾರ್ ಮೋಟಾರ್‍ಸ್ ಎಂಬುವವರ ಬಳಿ ರಿಪೇರಿಗಾಗಿ ಬಿಡಲಾಗಿತ್ತು.  ಇನ್ಸೂರೆನ್ಸ್ ಕಂಪನಿಯ ಸವೇಯರ್‌ರವರು ಅಪಘಾತಕ್ಕೀಡಾದ ವಾಹನವನ್ನು ಗ್ಯಾರೇಜಿನಲ್ಲಿ ಪರಿಶೀಲಿಸಿ ೧೧೦೪೨೩ ರೂ.ಗಳ ಅಂದಾಜು ವೆಚ್ಚದ ಮಾಹಿತಿ ನೀಡಿದ್ದರು.  ಬಸವರಾಜ್ ಅವರು ತಮ್ಮ ಕಾರನ್ನು ಟಾಟಾ ವಾಹನ ರಿಪೇರಿಗಾಗಿ ಪರವಾನಗಿ ಪಡೆದ ಗದುಗಿನ ಅರಿಹಂತ ಬಾಗಮಾರ್ ಮೋಟಾರ್‍ಸ್ ಅವರ ಬಳಿ ದುರಸ್ತಿ ಮಾಡಿಸಿ, ರೂ. ೧೬೭೬೨೭ ಪಾವತಿಸಿದರು.  ಈ ದುರಸ್ತಿ ಮೊತ್ತವನ್ನು ಪಾವತಿಸುವಂತೆ ಬಸವರಾಜ್ ಅವರು ಇನ್ಸೂರೆನ್ಸ್ ಕಂಪನಿಗೆ ಕ್ಲೇಮ್ ಸಲ್ಲಿಸಿದರು.  ಆದರೆ ಇನ್ಸೂರೆನ್ಸ್ ಕಂಪನಿಯು, ವಾಹನವನ್ನು ಅಪಘಾತಕ್ಕೀಡಾದ ಸ್ಥಳದಲ್ಲಿ ಪರಿಶೀಲನೆ ಮಾಡದೆ ಬೇರೆ ಸ್ಥಳದಲ್ಲಿ ಪರಿಶೀಲಿಸಿ ವರದಿ ಸಲ್ಲಿಸಿರುವುದರಿಂದ, ಫಿರ್ಯಾದುದಾರರ ಕ್ಲೇಂ ಅರ್ಜಿಯನ್ನು ಪರಿಗಣಿಸಲು ಬರುವುದಿಲ್ಲವೆಂಬುದಾಗಿ ತಿಳಿಸಿತು.  ಬಸವರಾಜ್ ಅವರು ಅಪಘಾತಕ್ಕೀಡಾದ ವಾಹನದ ದುರಸ್ತಿ ವೆಚ್ಚ ಹಾಗೂ ಸೇವಾ ನ್ಯೂನತೆಗಾಗಿ ಪರಿಹಾರ ಕೊಡಿಸುವಂತೆ ಕೋರಿ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.
  ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯೆ ವೇದಾ ಜೋಷಿ ಅವರು, ಅಪಘಾತಕ್ಕೀಡಾದ ವಾಹನವನ್ನು ಅಧಿಕೃತ ಸೇವಾ ಕೇಂದ್ರದಲ್ಲಿಯೇ ದುರಸ್ತಿ ಮಾಡಿಸಲಾಗಿದೆ.  ಅಪಘಾತಕ್ಕೀಡಾದ ಸ್ಥಳದ ಬದಲಾವಣೆಯಿಂದಾಗಿ ಕ್ಲೇಂ ಅರ್ಜಿಯನ್ನು ತಿರಸ್ಕರಿಸಬಹುದಾಗಿದೆ ಎಂಬುದರ ಕುರಿತು ಕಂಪನಿಯು ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ.  ಕಂಪನಿಯ ಸರ್ವೇಯರ್ ರವರು ವರದಿ ಸಲ್ಲಿಸಿದಂತೆ ದುರಸ್ತಿಯ ವೆಚ್ಚ ರೂ. ೧೧೦೪೨೩ ಗಳ ಅಂದಾಜು ವೆಚ್ಚದ ಮಾಹಿತಿ ನೀಡಿದ್ದು, ಇದರಲ್ಲಿ ಯಾವುದೇ ತೆರಿಗೆಗಳನ್ನು ಸೇರಿಸಿರುವುದಿಲ್ಲ.  ಆದ್ದರಿಂದ ವಾಹನದ ದುರಸ್ತಿ ವೆಚ್ಚ ರೂ. ೧೫೫೨೩೬ ಗಳು ಹಾಗೂ ಸೇವಾ ನ್ಯೂನತೆ ಪರಿಹಾರ ಮತ್ತು ಪ್ರಕರಣದ ಖರ್ಚು ರೂ. ೨೦೦೦ ಗಳನ್ನು ೯೦ ದಿನಗಳ ಒಳಗಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.
Please follow and like us:
error