fbpx

ಪಂಕ್ತಿಭೇದ ವಿರೋಧಿಸಿದವರಿಗೆ ಲಾಠಿ ಏಟು

ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ಪ್ರತಿಭಟಿಸಿ ಉಡುಪಿಯ ಕೃಷ್ಣ ಮಠವನ್ನು ಪ್ರವೇಶಿಸಲು ಯತ್ನಿಸಿದ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿರುವ ಕೆಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಉಡುಪಿಯಲ್ಲಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ಪ್ರಜಾಪ್ರಭುತ್ವವಾದಿ ಶಕ್ತಿಗಳು ವ್ಯಾಪಕವಾಗಿ ಖಂಡಿಸಿವೆ. ಯಾವುದೇ ಮಠ ಇಲ್ಲವೇ ದೇವಾಲಯವನ್ನು ಪ್ರವೇಶಿಸುವ ಹಕ್ಕು ಎಲ್ಲರಿಗೂ ಇದೆ. ದೇವಾಲಯ ಪ್ರವೇಶವನ್ನು ನಿರ್ಬಂದಿಸುವ ಅಧಿಕಾರ ಪೊಲೀಸರು ಸೇರಿದಂತೆ ಯಾರಿಗೂ ಇಲ್ಲ.
ಉಡುಪಿಯ ಕೃಷ್ಣ ಮಠ ನಿಷೇಧಿತ ಪ್ರದೇಶವೇನೂ ಅಲ್ಲ. ಗುರುವಾರ ಅಲ್ಲಿ ಪಂಕ್ತಿಭೇದದ ವಿರುದ್ಧ ಪ್ರತಿಭಟಿಸಿದ ಸಿಪಿಎಂ ಕಾರ್ಯಕರ್ತರ ಪ್ರವೇಶಕ್ಕೆ ಅವಕಾಶ ನೀಡಿದ್ದರೆ ಅಂತಹ ಅನಾಹುತವೇನೂ ಆಗುತ್ತಿರಲಿಲ್ಲ. ಕಾರ್ಯಕರ್ತರು ಒಳನುಗ್ಗಿದ್ದರೂ ಬ್ರಾಹ್ಮಣರ ಪ್ರತ್ಯೇಕ ಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳಬಹುದಾಗಿತಷ್ಟೇ ಈ ಪ್ರಶ್ನೆಯಲ್ಲಿ ಪ್ರತಿಭಟನಕಾರರ ನಾಯಕರೊಂದಿಗೆ ಮಾತನಾಡಿ ಸಹಭೋಜನಕ್ಕೆ ಅವಕಾಶ ಕಲ್ಪಿಸಿದ್ದರೆ ಇಂತಹದೊಂದು ಘಟನೆ ಸಂಭವಿಸುತ್ತಿರಲಿಲ್ಲ. ಉಡುಪಿಯಲ್ಲಿ ಸಿಪಿಎಂ ಕಾರ್ಯಕರ್ತರು ಪಂಕ್ತಿಭೇದದ ವಿರುದ್ಧ ಪ್ರತಿಭಟನೆ ನಡೆಸಿದ ದಿನವೇ ಚಿಕ್ಕಮಗಳೂರಿನ ಬಾಬಾ ಬುಡಾನ್‌ಗಿರಿಯಲ್ಲಿ ಇನ್ನೊಂದು ಘಟನೆ ನಡೆದಿದೆ.
ಅಲ್ಲಿ ಸಂಘಪರಿವಾರದ ಕಾರ್ಯಕರ್ತರು ನಿಷೇಧಿತ ಪ್ರದೇಶವಾದ ದತ್ತಪೀಠದ ಆವರಣದ ಒಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಪೀಠದ ಸುತ್ತಲೂ ಸುತ್ತಿದ್ದ ತಂತಿ ಬೇಲಿಯನ್ನು ದಾಟಿ ಒಳ ನುಗ್ಗಿ ನಿಷೇಧಿತ ಪ್ರದೇಶದ 200 ಮೀ. ವ್ಯಾಪ್ತಿಯೊಳಗೆ ಭಗವಾ ಧ್ವಜವನ್ನು ಹಾರಿಸಿ ಜೈಕಾರ ಹಾಕಿದ್ದಾರೆ. ಹಾಡಹಗಲೇ ನಿಷೇಧಿತ ಪ್ರದೇಶವನ್ನು ಉಲ್ಲಂಘನೆ ಮಾಡಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತಿದ್ದಾರೆ. ಈ ಎರಡೂ ಘಟನೆಗಳನ್ನು ಜೊತೆಗಿಟ್ಟು ನೋಡಿದರೆ ರಾಜ್ಯ ಬಿಜೆಪಿ ಸರಕಾರದ ನಿಜವಾದ ಸ್ವರೂಪ ಬಯಲಿಗೆ ಬರುತ್ತದೆ. ನಿಷೇಧಿತ ಪ್ರದೇಶವಲ್ಲದ ಉಡುಪಿ ಕೃಷ್ಣ ಮಠದಲ್ಲಿ ನಡೆಯುವ ಕಾನೂನಿಗೆ ವಿರುದ್ಧವಾದ ಪಂಕ್ತಿಭೇದವನ್ನು ವಿರೋಧಿಸಿದವರ ಮೇಲೆ ಲಾಠಿ ಬೀಸಿದ ಪೊಲೀಸರು ಬಾಬಾ ಬುಡಾನ್‌ಗಿರಿಯಲ್ಲಿ ಕಾನೂನನ್ನು ಉಲ್ಲಂಘಿಸಿ ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರ ಬಗ್ಗೆ ಮೃದುವಾಗಿ ನಡೆದುಕೊಂಡಿದ್ದಾರೆ.
ಉಡುಪಿಯ ಕೃಷ್ಣ ಮಠ ಸೇರಿದಂತೆ ರಾಜ್ಯದ ಹಲವಾರು ಬ್ರಾಹ್ಮಣರ ಮಠಗಳಲ್ಲಿ ನಡೆಯುತ್ತಿರುವ ಪಂಕ್ತಿಭೇದ ಅಮಾನವೀಯವಾದುದು. ಮನುಷ್ಯರನ್ನು ಹುಟ್ಟಿನ ಆಧಾರದಲ್ಲಿ ಮೇಲು ಕೀಳು ಎಂದು ತಾರತಮ್ಯ ಮಾಡುವ ಪಂಕ್ತಿಭೇದ ಸಂವಿಧಾನಕ್ಕೆ ವ್ಯತಿರಿಕ್ತವಾಗಿದೆ. ಇದನ್ನು ಸರಕಾರವೇ ಮುಂದಾಗಿ ತಡೆಯಬೇಕಾಗಿತ್ತು. ಆದರೆ ರಾಜ್ಯದಲ್ಲಿರುವುದು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪುರಸ್ಕರಿಸುವ ಮನುವಾದದಲ್ಲಿ ನಂಬಿಕೆ ಹೊಂದಿರುವ ಸಂಘಪರಿವಾರದ ಸರಕಾರ. ಅಂತಲೇ ಅದು ವೈದಿಕಶಾಹಿ ಆಚರಣೆಗೆ ರಕ್ಷಣೆ ನೀಡುವ ಸಂಕಲ್ಪ ತೊಟ್ಟಿದೆ. ಇಂತಹ ಆಚರಣೆಗಳನ್ನು ಧಿಕ್ಕರಿಸಲು ಮುಂದಾದ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರ ಮೂಲಕ ಲಾಠಿ ಪ್ರಹಾರ ಮಾಡಿಸುತ್ತದೆ. ಇದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯಲ್ಲದೆ ಬೇರೇನೂ ಅಲ್ಲ. ಕಾನೂನು ಪಾಲನೆಯಲ್ಲಿ ಸರಕಾರಕ್ಕೆ ಆಸಕ್ತಿ ಇಲ್ಲ. ಅಂತಹ ಒಂದು ಕರ್ತವ್ಯ ಪ್ರಜ್ಞೆ ಎಂಬುದು ಇರುತ್ತಿದ್ದರೆ ಕೋಮು ಪ್ರಚೋದಕ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಎಂದೋ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಅವರು ಇಂದಿಗೂ ಅದೇ ಭಾಷಣಗಳನ್ನು ಮಾಡುತ್ತಾ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಮಡೆಸ್ನಾನ ಮತ್ತು ಎಡೆಸ್ನಾನದ ಹೆಸರಿನಲ್ಲಿ ಉಡುಪಿಯ ಪೇಜಾವರ ಸ್ವಾಮಿಗಳು ದ್ವಿಮುಖ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂಬ ಟೀಕೆಯಲ್ಲಿ ಹುರುಳಿಲ್ಲದೆ ಇಲ್ಲ. ರಾಜ್ಯದ ಬಿಜೆಪಿ ಸರಕಾರ ಸಂವಿಧಾನಾತ್ಮಕವಾಗಿ ನಡೆದುಕೊಳ್ಳುವ ಬದಲಾಗಿ ಮಠಾಧೀಶರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ. ಅಂತಲೇ ಎಡೆ ಸ್ನಾನಕ್ಕೆ ಸಂಬಂಧಿಸಿದಂತೆ ಪೇಜಾವರ ಸ್ವಾಮಿಗಳ ಸಲಹೆಯನ್ನೇ ಎರವಲು ಪಡೆದು ಹೈಕೋರ್ಟ್‌ಗೆ ತಿಳಿಸಿದೆ. ಮಡೆ ಸ್ನಾನ ಇಲ್ಲವೇ ಎಡೆ ಸ್ನಾನದ ಬಗ್ಗೆ ಪುರಾಣ ಹಾಗೂ ಧರ್ಮ ಶಾಸ್ತ್ರಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ನಂಬಿಕೆಯ ಹೆಸರಿನಲ್ಲಿ ಬ್ರಾಹ್ಮಣ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಮೂಢನಂಬಿಕೆ ಇದು. ಬ್ರಾಹ್ಮಣರು ಉಂಡ ಊಟದ ಎಲೆಗಳ ಮೇಲೆ ಬ್ರಾಹ್ಮಣರೂ ಸೇರಿದಂತೆ ಶೂದ್ರರು ಉರುಳಾಡಿದರೆ ಪುಣ್ಯ ಲಭಿಸುತ್ತದೆ ಎಂದು ಹೇಳುವುದು ಮೂಢನಂಬಿಕೆಯ ಪರಮಾವಧಿಯಾಗಿದೆ. ಇದು ಮುಗ್ಧ ಜನರನ್ನು ದಾರಿ ತಪ್ಪಿಸುವ ಹುನ್ನಾರವಲ್ಲದೆ ಮತ್ತೇನೂ ಅಲ್ಲ. ಸ್ವಾತಂತ್ರದ 6 ದಶಕಗಳ ನಂತರವೂ ಮನುಷ್ಯತ್ವಕ್ಕೆ ಅಪಮಾನಕಾರಿಯಾದ ಮಡೆಸ್ನಾನ ಹಾಗೂ ಪಂಕ್ತಿಭೇದಗಳ ಆಚರಣೆ ನಿರಾತಂಕವಾಗಿ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಇದನ್ನು ವಿರೋಧಿಸುವವರ ಮೇಲೆ ಪೊಲೀಸರನ್ನು ಬಳಸಿ ಹತ್ತಿಕ್ಕುವ ಮೂಲಕ ಬಿಜೆಪಿ ಸರಕಾರ ತಾನು ಪುರೋಹಿತಶಾಹಿಯ ಆಜ್ಞಾಧಾರಕ ಎಂದು ತೋರಿಸಿಕೊಟ್ಟಂತಾಗಿದೆ. ಉಡುಪಿ ಮಾತ್ರವಲ್ಲ. ಕರ್ನಾಟಕದ ಅನೇಕ ಕಡೆ ಯಾವುದೇ ಮಠ ದೇವಾಲಯಗಳಲ್ಲಿ ಪಂಕ್ತಿಭೇದ ನಡೆದರೆ ಅದನ್ನು ತಡೆಯಬೇಕಾದುದು ಸರಕಾರದ ಸಂವಿಧಾನಬದ್ಧ ಕರ್ತವ್ಯ.
ಈ ಬಗ್ಗೆ ಬಿಜೆಪಿ ಸರಕಾರದ ವರ್ತನೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಂತಹ ಜಾತ್ಯತೀತ ಪಕ್ಷಗಳು ಖಂಡಿಸಬೇಕಾಗಿದೆ. ಉಡುಪಿ ಮತ್ತು ಬಾಬಾಬುಡಾನ್‌ಗಿರಿ ಇವೆರಡೂ ಕಡೆ ನಡೆದ ಘಟನೆಗಳಲ್ಲಿ ರಾಜ್ಯ ಬಿಜೆಪಿ ಸರಕಾರದ ನೇರ ಹಸ್ತಕ್ಷೇಪ ಎದ್ದು ಕಾಣುತ್ತದೆ. ಸರಕಾರದ ಈ ದ್ವಿಮುಖ ನೀತಿಯ ವಿರುದ್ಧ ಪ್ರಜ್ಞಾವಂತರು ಧನಿಯೆತ್ತಬೇಕಾಗಿದೆ. ಬಸವಣ್ಣ, ಕುವೆಂಪು, ಟಿಪ್ಪುಸುಲ್ತಾನ್ ಜನಿಸಿದ ಕರ್ನಾಟಕದಲ್ಲಿ ಇಂತಹ ಅಮಾನವೀಯ ಆಚರಣೆಗಳು ನಡೆಯದಂತೆ ಜನತೆ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ.
Please follow and like us:
error

Leave a Reply

error: Content is protected !!