ಟೊಮ್ಯೋಟೊ ಬೆಳೆಗೆ ಸೂಜಿ ಹುಳುವಿನ ಬಾಧೆ ನಿರ್ವಹಣೆಗೆ ಸಲಹೆ.

ಕೊಪ್ಪಳ ಫೆ. ೨೦ (ಕ ವಾ) ಕೊಪ್ಪಳ ತಾಲೂಕಿನ ಕೋಳೂರು, ಕಾಟ್ರಳ್ಳಿ, ಹಾಲಹಳ್ಳಿ, ಗಬ್ಬೂರು, ಕಲತಾವರೆಗೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಟೊಮ್ಯಾಟೋ ಬೆಳೆಗೆ ಸೂಜಿ ಹುಳುವಿನ ಬಾಧೆ (ಪಿನ್ ವರ್ಮ್) ಕಂಡುಬಂದಿದ್ದು ಶೇ. ೫೦ ರಿಂದ ೧೦೦ ರಷ್ಟು ಹಾನಿಗೊಳಗಾಗುತ್ತಿದೆ.  ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಸೂಜಿ ಹುಳುವಿನ ಕೀಟವು ಪತಂಗ ಜಾತಿಯ ಗೆಲಿಚಿಡೆ ಎಂಬ ಗುಂಪಿಗೆ ಸೇರಿದ್ದು ಇದನ್ನು ಟುಟ ಅಬ್ಸಲೂಟ ಎಂದು ಕರೆಯುತ್ತಾರೆ. ಇದರ ಜೀವನಚಕ್ರವು ೨೪ ರಿಂದ ೨೮ ದಿನಗಳಾಗಿದ್ದು ಒಂದು ಪತಂಗವು ದಿನಕ್ಕೆ ೩೦೦ ಮೊಟ್ಟೆಗಳನ್ನಿಡುತ್ತದೆ.
ಬಾಧೆಯ ಲಕ್ಷಣಗಳು : ಮೊಟ್ಟೆಯೊಡೆದು ಹೊರಬಂದ ಮರಿಹುಳುಗಳು ಎಲೆ ಮತ್ತು ಕಾಯಿಗಳ ಹಸಿರು ಭಾಗವನ್ನು ತಿನ್ನುವುದರಿಂದ ಎಲೆಗಳು ಅಲ್ಲಲ್ಲಿ ಸುಟ್ಟಂತೆ ಕಾಣುತ್ತವೆ ಮತ್ತು ಒಣಗಿ ಹೋಗುತ್ತವೆ.  ಕಾಯಿಗಳ ಮೇಲೆ ಸಣ್ಣ ಸಣ್ಣ ರಂದ್ರಗಳು ಉಂಟಾಗಿ ಕಾಯಿಂದ ರಸ ಸೋರಲು ಶುರುವಾಗುತ್ತದೆ. ಕೀಡೆಗಳು ಹಾನಿ ಮಾಡಿದ ಜಾಗದಲ್ಲಿ ರೋಗಾಣುಗಳು ಆಕ್ರಮಣ ಮಾಡಿ ಕಾಯಿ ಮತ್ತು ಹಣ್ಣುಗಳು ಕೊಳೆಯಲು ಶುರುವಾಗುತ್ತವೆ. ತೀವ್ರವಾಗಿ ಹಾನಿಯಾದ ಹಣ್ಣುಗಳ ಪ್ರಮಾಣ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ನಿರ್ವಹಣೆ ಕೈಗೊಳ್ಳದಿದ್ದಲ್ಲಿ ಶೇ.೧೦೦ ರಷ್ಟು ಹಾನಿಗೊಳಗಾಗುತ್ತದೆ.
ನಿರ್ವಹಣಾ ಕ್ರಮಗಳು : ಸೂಜಿ ಹುಳುವಿನ ಬಾಧೆ ನಿರ್ವಹಣೆಗಾಗಿ ಒಂದು ಬೆಳೆಯಿಂದ ಇನ್ನೊಂದು ಬೆಳೆಗೆ ಕನಿಷ್ಟ ೬ ವಾರಗಳ ಅಂತರವಿರಬೇಕು.  ಉಳುಮೆ ಮಾಡಿದ ನಂತರ ಪ್ಲಾಸ್ಟಿಕ್ ಪೇಪರಿನಿಂದ ಹೊದಿಕೆ ಹಾಕಿ ಬಿಸಿಲಿನ ಶಾಖಕ್ಕೆ ಮಣ್ಣಲ್ಲಿರುವ ಕೋಶಗಳನ್ನು ಸಾಯುವಂತೆ ಮಾಡಬೇಕು.  ಕಳೆ ಕಸ ಇರದಂತೆ ಕಿತ್ತು ನಾಶಪಡಿಸಬೇಕು.  ನಾಟಿ ಮಾಡುವ ಪೂರ್ವದಲ್ಲಿ ಅಂಟು ಬಲೆಗಳನ್ನು ಹೊಲದಲ್ಲಿ ಅಳವಡಿಸಬೇಕು. ಬೆಳೆಯನ್ನು ಪರಿಶೀಲಿಸಿ ಮೊದಲಿನ ಕೀಡೆಯ ಲಕ್ಷಣಗಳನ್ನು ಗಮನಿಸಬೇಕು.  ಟುಟ ಅಬ್ಸಲೂಟ ಮೋಹಕ ಬಲೆಗಳನ್ನು ಎಕರೆಗೆ ೧೦ ರಂತೆ ಅಳವಡಿಸಿ ಲ್ಯೂರ್‌ಗಳನ್ನು ಪ್ರತೀ ೨೦ ದಿನಗಳಿಗೊಮ್ಮೆ ಬದಲಾಯಿಸುದರಿಂದ ಈ ಕೀಡೆಯ ನಿರ್ವಹಣೆ ಪರಿಣಾಮಕಾರಿಯಾಗಿರುತ್ತದೆ.  ಒಂದೇ ಗುಂಪಿಗೆ ಸೇರಿದ ಕೀಟನಾಶಕಗಳನ್ನು ಪದೇ ಪದೇ ಸಿಂಪಡಿಸಬಾರದು.
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯತಜ್ಞರಾದ ರೋಹಿತ್ ಕೆ.ಎ (೯೮೪೫೧೯೪೩೨೮) ಅವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ (೯೪೮೦೬೯೬೩೧೯) ತಿಳಿಸಿದ್ದಾರೆ.

Please follow and like us:
error