“ಯಮ” ನಿಂದ ಪಾರಾಗಿ ಬಂದ ಕೊಪ್ಪಳದ ಇಕ್ಬಾಲ್ ಬಾಷಾ

ತಾಯ್ನಾಡಿಗೆ ಮರಳಿದ ಸಂತಸದಲ್ಲಿ ತವರು ಸೇರಿದ ಕೊಪ್ಪಳದ ಇಕ್ಬಾಲ್ ಬಾಷಾ…. ಯೆಮನ್ ನಲ್ಲಿ ನಡೆಯುತ್ತಿರುವ ದಳ್ಳುರಿಯಿಂದ ತವರು ಸೇರುವ ತವಕದಲ್ಲಿ ಇಕ್ಬಾಲ್… ಇಕ್ಬಾಲ್ ಕುಟುಂಬದವರಲ್ಲಿ ಹರ್ಷ… ಯೆಮೆನ್‌ನಲ್ಲಿದ್ದ ಭಾರತೀಯರನ್ನು ಹತ್ತಿಸಿಕೊಳ್ಳದ ಚೀನಾ ಹಡಗು…. ಯೆಮೆನ್‌ನಲ್ಲಿ ಪಟಾಕಿಯಂತೆ ಗಲ್ಲಿ ಗಲ್ಲಿಗಳಲ್ಲಿ ಸಿಡಿಯುತ್ತಿವೆ ಬಾಂಬ್‌ಗಳು…

 ತಾಯಿಯ ಮಡಿಲು ಮತ್ತು ತಾಯ್ನಾಡಿನ ನೆಲದ ಸಂಬಂಧ ಎಲ್ಲವನ್ನೂ ಮೀರಿದ್ದು. ಹೀಗಾಗಿಯೇ ನಾವು ಎಲ್ಲೆ ಇದ್ದರೂ ತಾಯಿಯ ಹಾಗೂ ತಾಯ್ನಾಡಿನ ನೆಲದ ಸೆಳೆತ ಇರುತ್ತದೆ. ತಾಯ್ನಾಡು ಬಿಟ್ಟು ವಿದೇಶದಲ್ಲಿರುವ ಅನೇಕರು ತಾಯ್ನಾಡು ಯಾವಾಗ ಸೇರುತ್ತೇವೆ ಎಂದು ಹಂಬಲಿಸುತ್ತಿರುತ್ತಾರೆ. ಅದ್ರಲ್ಲೂ ಅಲ್ಲೇನಾದ್ರೂ ಪರಸ್ಥಿತಿ ಬಿಗಡಾಯಿಸಿದ್ರೆ ತಾಯ್ನಾಡಿಗೆ ಮರಳುತ್ತಿವೋ ಇಲ್ಲವೋ ಎಂಬ ಭಯ ಕಾಡುತ್ತಿರುತ್ತದೆ. ಇಂತಹ ಭಯದೊಂದಿಗೆ ಗಲಭೆಪೀಡಿತ ಯೆಮೆನ್‌ನಿಂದ ತಾಯ್ನಾಡಿನ ನೆಲಕ್ಕೆ ಬಂದ ಖುಷಿ ಹಾಗೂ ಪುನರ್ಜನ್ಮ ಪಡೆದ ಭಾವ ಅವ್ರ ಮುಖದಲ್ಲಿತ್ತು. ಹೊತ್ತಿ ಉರಿಯುತ್ತಿರುವ ಆ ರಾಷ್ಟ್ರದಿಂದ ಬಂದು ತನ್ನವರನ್ನು ಸೇರಿಕೊಂಡು ಆ ವ್ಯಕ್ತಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಯೆಮೆನ್‌ನಿಂದ ಕೊಪ್ಪಳಕ್ಕೆ ಬಂದಿಳಿದ ಆ ವ್ಯಕ್ತಿ ಯೆಮೆನ ಅನುಭವಿಸಿದ ಯಾತನೆ ಹಾಗೂ ಅಲ್ಲಿನ ಸದ್ಯದ ಚಿತ್ರಣ ಬಿಚ್ಚಿಟ್ಟಿದ್ದಾರೆ.
ಹೆಸರು ಇಕ್ಬಾಲ್ ಬಾಷಾ. ಕೊಪ್ಪಳದವರಾಗಿರುವ ಇವ್ರು ಕಳೆದ ೩೧ ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ವಿದೇಶದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದರು. ಬಿ.ಇ ಮೆಕ್ಯಾನಿಕಲ್ ವ್ಯಾಸಂಗ ಮಾಡಿದ ಮೇಲೆ ಇಕ್ಬಾಲ್ ಬಾಷಾ ಅವ್ರು ಮೊದಲು ಓಮನ್ ರಾಷ್ಟ್ರದಲ್ಲಿ ಕೆಲಸ ಮಾಡಿ ಕಳೆದ ೧೬ ವರ್ಷಗಳಿಂದ ಯೆಮೆನ್ ರಾಷ್ಟ್ರದಲ್ಲಿ ಕೆಲಸ ಮಾಡ್ತಿದ್ದಾರೆ.  ಕಳೆದ ೧೫ ದಿನಗಳ ಹಿಂದೆ ಯೆಮೆನ್ ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಎರಡು ಕೋಮುಗಳ ಮಧ್ಯೆ ಗಲಭೆ ನಡೆದು ಇಡೀ ರಾಷ್ಟ್ರ ಹೊತ್ತಿ ಉರಿಯುತ್ತಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ೪೦೦೦ ಭಾರತೀಯರು ಸೇರಿದ್ದ ವಿದೇಶಿಯರು ತಮ್ಮ ರಾಷ್ಟ್ರಕ್ಕೆ ಮರಳುತ್ತೇವೆ ಎಂಬ ಭರವಸೆಯನ್ನು ಕಳೆದುಕೊಂಡಿದ್ದರು. ಭಾರತದಲ್ಲಿ ದೀಪಾವಳಿ ಸಂದರ್ಭದಲ್ಲಿ ಗಲ್ಲಿ ಗಲ್ಲಿಗಳು ಪಟಾಕಿ ಸಿಡಿಸಿದಂತೆ ಯೆಮೆನ್‌ನಲ್ಲಿ ಬಾಂಬ್‌ಗಳು ಸಿಡಿಯುತ್ತಿವೆ. ಅಲ್ಲಿ ವಾಸ ಮಾಡೋದು ಜೀವವನ್ನು ಕೈಲಿ ಹಿಡಿದುಕೊಂಡು ವಾಸಮಾಡಬೇಕು. ಇಂತಹ ವಾತಾವರಣದಿಂದ ಬೆಚ್ಚಿ ಬಿದ್ದ ಅಲ್ಲಿ ನೆಲೆಸಿದ್ದ ಭಾರತೀಯರು ಸೇರಿದಂತೆ ವಿದೇಶಿಯರು ಜೀವಂತವಾಗಿ ತಾಯ್ನಾಡಿಗೆ ಮರಳುತ್ತೇವೆ ಎಂಬ ಭರವಸೆಯನ್ನು ಕಳೆದುಕೊಂಡಿದ್ದರು. ಈ ಮಧ್ಯೆ ಚೀನಿಯರನ್ನು ಕರೆದೊಯ್ಯಲು ಚೀನಾದ ಹಡಗೊಂದು ಬಂದಿತ್ತು. ಆದ್ರೆ, ಭಾರತೀಯರನ್ನು ಅದು ಹತ್ತಿಸಿಕೊಳ್ಳಲಿಲ್ಲ. ಭಾರತೀಯರನ್ನೂ ಕರೆದುಕೊಂಡು ಹೋಗಿ ಎಂದು ಗೋಗರೆದ್ರೂ ಚೀನಾ ಹಡಗಿನವರು ನಮ್ಮನ್ನು ಹಡಗಿನಲ್ಲಿ ಹತ್ತಿಸಿಕೊಳ್ಳಲಿಲ್ಲ. ನಂತರ ಭಾರತ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿ ನಮ್ಮ ತಾಯ್ನೆಲವನ್ನು ಮತ್ತೆ ನೋಡುವಂತೆ ಮಾಡಿದೆ. ಜೀವಕ್ಕಿಂತ ಹಣ ಮುಖ್ಯವಲ್ಲ ಎಂಬುದು ಗೊತ್ತಾಗಿದೆ. ಮತ್ತೆ ನನ್ನ ದೇಶಕ್ಕೆ ಅದ್ರಲ್ಲೂ ಕೊಪ್ಪಳಕ್ಕೆ ಬಂದಿಳಿದಿರೋದು ನನಗೆ ಪುನರ್ಜನ್ಮ ಬಂದಂತಾಗಿದೆ ಎಂದು ಯೆಮೆನಿಂದ ಬಂದಿರುವ ಕೊಪ್ಪಳದ ನಿವಾಸಿ ಇಕ್ಬಾಲ್ ಭಾಷಾ ಅವ್ರು ಅನುಭವವನ್ನು ಹೇಳ್ತಾರೆ. 
ಕಳೆದ ೧೫ ದಿನಗಳಿಂದ ಸರಿಯಾಗಿ ಊಟವಿಲ್ಲದೆ ಜೀವ ಭಯದಲ್ಲಿ ಬದುಕುತ್ತಿರೋ ವಿಷಯವನ್ನು ಇಕ್ಬಾಲ್ ಬಾಷಾ ಅವ್ರ ಮನೆಯವರು ತಿಳಿದುಕೊಂಡಿದ್ದರು. ಅಲ್ಲಿನ ಪರಸ್ಥಿತಿಯನ್ನು ನೆನೆದು ದುಃಖಿಸುತ್ತಿದ್ದರು. ಈಗ ಇಕ್ಬಾಲ್ ಬಾಷಾ ಅವ್ರು ಸುರಕ್ಷಿತವಾಗಿ ಮನೆಗೆ ವಾಪಾಸ್ಸಾಗಿರೋದ್ರಿಂದ ಬಾಷಾ ಅವ್ರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. 
 ಹಣದಾಸೆಗೆ ವಿದೇಶಕ್ಕೆ ಹೋಗಿ ದೂರದ ದೇಶದಲ್ಲಿ ನರಳುವುದಕ್ಕಿಂತ ತಾಯಿ ನೆಲದಲ್ಲಿದ್ದುಕೊಂಡು ಇಲ್ಲಿಯೇ ಬಂಧು-ಬಳಗದೊಂದಿಗೆ ಇರೋದು ಸೂಕ್ತ ಅನ್ನೋ ಅನುಭವ ಇಕ್ಬಾಲ್ ಅವ್ರಿಗೆ ಆಗಿದೆ. ಅಲ್ಲದೆ, ಹಣಕ್ಕಿಂತ ಜೀವ ಮುಖ್ಯ. ಜೀವವಿದ್ದರೆ ಸಾಕಷ್ಟು ಹಣ ಗಳಿಸಬಹುದು. ಒಟ್ನಲ್ಲಿ ತಾಯ್ನಾಡು ಮತ್ತು ತಾಯಿ ಮಡಿಲು ಎಲ್ಲದಕ್ಕಿಂತಲೂ ಶ್ರೇಷ್ಠ ಅನ್ನೋದು ಇದಕ್ಕೆ. 

Leave a Reply