ಉದ್ಯೋಗಖಾತ್ರಿ ವಿಶೇಷ ಯೋಜನೆ : ಜು. ೧೧ ರಿಂದ ಹೋಬಳಿ ಮಟ್ಟದಲ್ಲಿ ತರಬೇತಿ

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು, ಪ.ಜಾತಿ, ಪ.ಪಂಗಡದವರಿಗೆ ವಿವಿಧ ತೋಟಗಾರಿಕೆ ಬೆಳೆ ಬೆಳೆಯುವುದು, ಹನಿ ನೀರಾವರಿ ಅಳವಡಿಕೆ, ಮಾರುಕಟ್ಟೆ ಮುಂತಾದ ವಿಷಯಗಳ ಕುರಿತು ಹೋಬಳಿ ಮಟ್ಟದಲ್ಲಿ ತರಬೇತಿ ನೀಡುವ ಕಾರ್ಯಕ್ರಮ ಜು. ೧೧ ರಿಂದ ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಮನವಿ ಮಾಡಿಕೊಂಡಿದ್ದಾರೆ.
  ಉದ್ಯೋಗಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ರೈತರನ್ನು ತೋಟಗಾರಿಕೆ ಬೆಳೆಯತ್ತ ಆಕರ್ಷಿಸಿ, ಅವರನ್ನು ಆರ್ಥಿಕವಾಗಿ ಸದೃಢರಾಗಿಸಲು ಉದ್ದೇಶಿಸಲಾಗಿದೆ.  ವಯಕ್ತಿಕ ಶೌಚಾಲಯಕ್ಕೆ ಪ್ರತಿ ಫಲಾನುಭವಿಯು ಸಹಾಯಧನ ಮತ್ತು ಮಾನವದಿನಗಳಿಗನುಗುಣವಾಗಿ ಹೀಗೆ ಒಟ್ಟು ೯೨೦೦ ರೂ. ಪಡೆಯಲು ಅವಕಾಶವಿದೆ.  ಹನಿ ನೀರಾವರಿಯನ್ನು ಸಹ ಶೇ. ೮೦ ರಷ್ಟು ಸಹಾಯಧನ ಮತ್ತು ಶೇ. ೨೦ ರಷ್ಟು ಕೂಲಿ ಮೊತ್ತಕ್ಕೆ ಅನುಗುಣವಾಗಿ ಪಡೆಯಲು (ಕನ್ವರ್ಜೆನ್ಸ್) ಅವಕಾಶ ಕಲ್ಪಿಸಲಾಗಿದೆ.   ಇದಕ್ಕಾಗಿ ಈಗಾಗಲೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಿ, ಫಲಾನುಭವಿಗಳನ್ನು ಆಯ್ಕೆಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.  ಒಂದು ವೇಳೆ ಗ್ರಾಮ ಸಭೆಗಳಲ್ಲಿ ರೈತರ ಹೆಸರು ಬಿಟ್ಟು ಹೋಗಿದ್ದಲ್ಲಿ, ಅಂತಹ ರೈತರು ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಆಯಾ ಗ್ರಾ.ಪಂ. ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.  ಈ ವಿಶೇಷ ಯೋಜನೆಯಡಿ ಜಿಲ್ಲೆಯ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರು, ಪ.ಜಾತಿ, ಪ.ಪಂಗಡದವರಿಗೆ ತೋಟಗಾರಿಕೆ ಬೆಳೆ ಬೆಳೆಯುವ ಬಗ್ಗೆ ಮತ್ತು ಯೋಜನೆಯ ಲಾಭ ಪಡೆಯುವುದು, ಮಾರುಕಟ್ಟೆ ವ್ಯವಸ್ಥೆ, ಉತ್ತಮ ಇಳುವರಿ, ಮಣ್ಣು ಹಾಗೂ ನೀರಿನ ಗುಣಮಟ್ಟಕ್ಕೆ ಅನುಗುಣವಾಗಿ ಬೆಳೆ ಆಯ್ಕೆ, ಲಾಭ-ನಷ್ಟ ಮುಂತಾದ ವಿಷಯಗಳ ಬಗ್ಗೆ  ಜಿಲ್ಲೆಯಾದ್ಯಂತ ಜುಲೈ ೧೧ ಮತ್ತು ೧೨ ರಂದು ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿ ತರಬೇತಿಯನ್ನು ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.  ತರಬೇತಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಕೈಗೊಳ್ಳಲು ಪ್ರತಿ ತಾಲೂಕಿಗೆ ಒಬ್ಬರನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು ಕೊಪ್ಪಳ ತಾಲೂಕಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ.  ಯಲಬುರ್ಗಾ- ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್, ಕುಷ್ಟಗಿ- ಜಂಟಿಕೃಷಿ ನಿರ್ದೇಶಕ ಪದ್ಮಯನಾಯಕ್, ಮತ್ತು ಗಂಗಾವತಿ ತಾಲೂಕಿಗೆ ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಅವರನ್ನು ನೇಮಿಸಲಾಗಿದೆ.  ಅಲ್ಲದೆ ಪ್ರತಿ ಹೋಬಳಿಗೆ ಒಬ್ಬರು ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.  ಹೋಬಳಿ ಮಟ್ಟದಲ್ಲಿ ತರಬೇತಿ ನಡೆಯುವ ವಿವರ ಇಂತಿದೆ.  
  ಜು. ೧೧ ರಂದು ಯಲಬುರ್ಗಾದ ಬುದ್ಧಬಸವ ಅಂಬೇಡ್ಕರ್ ಭವನ, ಕುಕನೂರಿನ ಎಪಿಎಂಸಿ ಭವನ, ಮಂಗಳೂರಿನ ಮಂಗಳೇಶ್ವರ ಕಲ್ಯಾಣ ಮಂದಿರ, ಹಿರೇವಂಕಲಕುಂಟಾದ ಹಿ.ಪ್ರಾ.ಶಾಲೆ ಆವರಣದಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.  ಕುಷ್ಟಗಿ ತಾಲೂಕಿನ ಹನುಮನಾಳದ ಬಿಸಿಎಂ ವಸತಿನಿಲಯ, ಕುಷ್ಟಗಿಯ ಗುರುಭವನ, ಹನುಮಸಾಗರದ ಶಾದಿಮಹಲ್, ತಾವರಗೇರಾದ ವೀರಭದ್ರೇಶ್ವರ ಕಲ್ಯಾಣ ಮಂದಿರ.  ಗಂಗಾವತಿ ತಾಲೂಕಿನ ಆನೆಗುಂದಿಯ ರಂಗನಾಥ ದೇವಸ್ಥಾನ, ಮರಳಿಯ ಗ್ರಾ.ಪಂ. ಆವರಣ, ಸಿದ್ದಾಪುರದ ಎಪಿಎಂಸಿ ಕಲ್ಯಾಣ ಮಂಟಪ, ಕಾರಟಗಿಯ ಎಪಿಎಂಸಿ ಆವರಣದಲ್ಲಿ ರೈತರಿಗೆ ತರಬೇತಿ ಏರ್ಪಡಿಸಲಾಗಿದೆ.
  ಜು. ೧೨ ರಂದು   ಕೊಪ್ಪಳ ತಾಲೂಕಿನ ಇರಕಲ್ಲಗಡದ ಸಮುದಾಯ ಭವನ, ಭಾಗ್ಯನಗರದ ಗ್ರಾ.ಪಂ. ಸಮುದಾಯ ಭವನ, ಅಳವಂಡಿಯ ಐಟಿಐ ಕಾಲೇಜು, ಹಿಟ್ನಾಳದ ನಗರೇಶ್ವರ ದೇವಸ್ಥಾನ ಸಮುದಾಯ ಭವನ.  ಗಂಗಾವತಿ ತಾಲೂಕಿನ ನವಲಿಯ ವೀರಭದ್ರೇಶ್ವರ ರಂಗ ಮಂದಿರ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ ಬಳಿ, ಹುಲಿಹೈದರ್‌ನ ದುರಗಮ್ಮನ ಗುಡಿ ಹತ್ತಿರ ಮತ್ತು ವೆಂಕಟಗಿರಿಯ ಗ್ರಾಮ ಪಂಚಾಯತಿ ಆವರಣದಲ್ಲಿ ತರಬೇತಿ ಆಯೋಜಿಸಲಾಗಿದೆ.
    ಜಿಲ್ಲೆಯ ಎಲ್ಲ ರೈತರು ಈ ತರಬೇತಿ ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸಿ, ಯೋಜನೆಯ ಲಾಭ ಪಡೆಯುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಮನವಿ ಮಾಡಿದ್ದಾರೆ.
Please follow and like us:
error