’ಅಂಬೇಡ್ಕರ್ ಹೋರಾಟದಲ್ಲಿ ರಮಾಬಾಯಿ ಅವರ ಕೊಡುಗೆ ಅಪಾರ’

ಮಿಸೆಸ್ ಅಂಬೇಡ್ಕರ್ ನಾಟಕ ಕೃತಿ ಬಿಡುಗಡೆ

ಬಳ್ಳಾರಿ, ಡಿ. ೯: ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಹೋರಾಟ, ಬೆಳವಣಿಗೆಯಲ್ಲಿ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರ ಕೊಡುಗೆ, ಪಾತ್ರ ಅಪಾರ  ಎಂದು ಚಿಂತಕ, ಧಾರವಾಡ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಲಕ್ಷ್ಮಣ ಬಕ್ಕಾಯಿ ಅವರು ಹೇಳಿದರು.
ನಗರದ ಸಂಸ್ಕೃತಿ ಪ್ರಕಾಶನ ಶನಿವಾರ ಭಾರತ ರತ್ನ ಡಾ. ಅಂಬೇಡ್ಕರ್ ಅವರ ಪರಿನಿರ್ವಾಣದ ಅಂಗವಾಗಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ  ಕ್ರಿಯಾರಂಗ, ಗಣಕರಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಾಹಿತಿ ಡಾ.ಸಿದ್ರಾಮ ಕಾರಣಿಕ ಅವರ ೨೫ನೇ ಕೃತಿ ಮಿಸೆಸ್ ಅಂಬೇಡ್ಕರ್ ರಂಗಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಬದುಕು ಕಳೆದುಕೊಂಡವರ ಮರು ಬದುಕಿಗಾಗಿ ನಿರಂತರ ಸಂಘರ್ಷ ಮಾಡಿದವರು. ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಬದುಕಿನ ಎಲ್ಲ ಸಾಧನೆಗಳಿಗೆ ಮಹಾತಾಯಿ ರಮಾಯಿ ಅವರು ಬಹುದೊಡ್ಡ ಶಕ್ತಿಯಾಗಿ ಬೆಂಬಲಕ್ಕೆ ನಿಂತಿದ್ದರು.  ತಮ್ಮ ಬದುಕಿನಲ್ಲಿ ಯಾವತ್ತೂ ಸುಖವನ್ನು ಬಯಸದೆ ಪರರ ಏಳ್ಗೆ, ಸುಖದಲ್ಲಿ ಸಂತೋಷ ಕಾಣುತ್ತಿದ್ದ ರಮಾಯಿ  ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.
ಧಾರವಾಡದಲ್ಲಿ ಬಾಬಾಸಾಹೇಬರು ಸ್ಥಾಪಿಸಿದ ಬಡ ಮಕ್ಕಳ ಹಾಸ್ಟೆಲಿನಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾದಾಗ ಮೈಮೇಲಿನ ಒಡವೆಗಳನ್ನು ಮಾರಾಟ ಮಾಡಿ  ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದ ಮಹಾನ್ ತ್ಯಾಗಮಯಿ, ಕರುಣಾಮಯಿ  ರಮಾಯಿ ಅವರು ಎಂದು ಕೋಂಡಾಡಿದರು.
ಹೋರಾಟಗಾರ ಎಫ್.ಎಚ್.ಜಕ್ಕಪ್ಪನವರ್ ಅವರು ಮಾತನಾಡಿ, ಪತಿಯ ಮಹತ್ವಾಕಾಂಕ್ಷಿ ಹೋರಾಟಕ್ಕೆ ಕಿಂಚಿತ್ತು ಅಡ್ಡಿಯಾಗದೇ ನಿರಂತರ ಬೆಂಬಲ ನೀಡಿ  ಪ್ರೋತ್ಸಾಹಿಸದ ಮಹಾಮಾತೆ ರಮಾಯಿ ಎಂದರು.
ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ ಮಾತನಾಡಿ, ಧೀಮಂತ ಮಹಿಳೆ ರಮಾಬಾಯಿಯವರ ಜೀವನ ಕುರಿತ ರಂಗ ಕೃತಿ ಪ್ರಕಟಿಸುವ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ವಿವಿ ಪ್ರಾಧ್ಯಾಪಕ ಡಾ.ಅರವಿಂದ ಮೂಲಿಮನಿ, ಸಾಹಿತಿ ಮೋಹನ ನಾಗಮ್ಮನವರ್, ಬೀದರಿನ ವಿಚಾರವಾದಿ  ಡಾ.ತಾತ್ಯಾರಾವ್ ಕಾಂಬಳೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಮುಖಂಡರಾದ  ತಾಯಪ್ಪ ಪವಾರ, ಶಿವು ಭಜಂತ್ರಿ, ರಾಣಿ ಚೆನ್ನಮ್ಮಾ ವಿವಿಯ ಪ್ರಾಧ್ಯಾಪಕ ಡಾ.ಮಹೇಶ ಗಾಜಪ್ಪನವರ್ ಉಪಸ್ಥಿತರಿದ್ದರು. 
ಸನ್ಮಾನ: ಇದೇ ಸಂದರ್ಭದಲ್ಲಿ ಕೃತಿಕಾರ ಡಾ.ಸಿದ್ರಾಮ ಕಾರಣಿಕ ಮತ್ತು ಪ್ರಕಾಶಕ ಸಿ.ಮಂಜುನಾಥ ಅವರನ್ನು ಗಣಕರಂಗ ಮತ್ತು ಕ್ರಿಯಾರಂಗ ಸಂಸ್ಥೆಗಳ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. 
ನಾಟಕ ಪ್ರದರ್ಶನ: ಕೃತಿ ಬಿಡುಗಡೆಯ ನಂತರ ರಂಗ ಕರ್ಮಿ ಹಿಪ್ಪರಗಿ ಸಿದ್ಧರಾಮ ನಿರ್ದೇಶನದಲ್ಲಿ ಕ್ರೀಯಾರಂಗ ಮತ್ತು ಗಣಕರಂಗ ಸಂಸ್ಥೆಯ ಕಲಾವಿದರು ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶಿಸಿದರು. 
ಹಿಪ್ಪರಗಿ ಸಿದ್ಧರಾಮ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕಿ ನೀಲಮ್ಮ ವಿಲಾಸರಾವ್ ಕಾಂಬಳೆ ನಿರೂಪಿಸಿದರು. ಶಶಿಧರ ಪಾಟೀಲ ವಂದಿಸಿದರು.

Leave a Reply