ಡಾಕ್ಟರ್‌ಗಳೂ ಮತದಾನ ಮಾಡಿ ಅಂತ ಚೀಟಿ ಕೊಡ್ತಾರೆ

 : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತಾಗಲು, ಮತದಾರರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಲವಾರು ಕಸರತ್ತು ಪ್ರಾರಂಭಿಸಿದ್ದು, ಇದೀಗ ಎಲ್ಲ ಆಸ್ಪತ್ರೆಗಳಲ್ಲೂ ಡಾಕ್ಟರ್‌ಗಳು, ತಮ್ಮ ಅಮೂಲ್ಯ ಮತವನ್ನು ತಪ್ಪದೆ ಚಲಾಯಿಸಿ ಎಂಬ ಸಂದೇಶವುಳ್ಳ ಚೀಟಿಯನ್ನು ನೀಡುವ ಮೂಲಕ ಮತದಾರರ ಜಾಗೃತಿಗೆ ಮುಂದಾಗಿದ್ದಾರೆ.

ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಮತದಾನದ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಈ ದಿಸೆಯಲ್ಲಿ ಡಾಕ್ಟರ್‌ಗಳ ಮೂಲಕವೂ ಮತದಾರರ ಜಾಗೃತಿ ಕೈಗೊಳ್ಳಲು ಮುಂದಾಗಿದ್ದು, ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಹಾಗೂ ಕೊಪ್ಪಳ ಜಿಲ್ಲಾ ಆಸ್ಪತ್ರೆಯವರಿಗೆ ಮತದಾರರ ಜಾಗೃತಿಯ ಸಂದೇಶವುಳ್ಳ ಒಟ್ಟು ೬೦ ಮೊಹರುಗಳನ್ನು (ಸೀಲ್) ತಲುಪಿಸಲು ಈಗಾಗಲೆ ಕ್ರಮ ಕೈಗೊಂಡಿದೆ.  ಅಲ್ಲದೆ ಅಂಚೆಯಣ್ಣನ ಮೂಲಕವೂ ಮತದಾರರ ಜಾಗೃತಿಗೆ ಸ್ವೀಪ್ ಸಮಿತಿ ಮುಂದಾಗಿದ್ದು, ಅಂಚೆ ಇಲಾಖೆಯ ನೆರವಿನೊಂದಿಗೆ ಎಲ್ಲ ಲಕೋಟೆಗಳು, ಪತ್ರಗಳ ಮೇಲೆ ’ ತಮ್ಮ ಅಮೂಲ್ಯ ಮತ ಚಲಾಯಿಸಿ’ ಎಂಬ ಸಂದೇಶವುಳ್ಳ ಸೀಲ್ ಹಾಕಲು ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಅಗತ್ಯವಿರುವಷ್ಟು ಸೀಲ್‌ಗಳನ್ನು ತಯಾರಿಸಿ ಅಂಚೆ ಇಲಾಖೆಗೆ ಪೂರೈಸಲಾಗಿದೆ.  ಇನ್ನು ಮುಂದೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯವವರೆಗೂ ಅಂಚೆ ಮೂಲಕ ಬರುವ ಪತ್ರಗಳು, ಲಕೋಟೆಗಳು ಅಲ್ಲದೆ ಡಾಕ್ಟರ್‌ಗಳು ನೀಡುವ ಚೀಟಿಗಳೂ ಸಹ ಮತದಾನದ ಜಾಗೃತಿ ಸಂದೇಶವನ್ನು ಹೊತ್ತು ಮತದಾರರನ್ನು ತಲುಪಲಿವೆ.  
  ಒಟ್ಟಾರೆಯಾಗಿ ಮತದಾರರು ಜಾಗೃತಗೊಂಡು, ತಮ್ಮ ಸಂವಿಧಾನಬದ್ಧ ಹಕ್ಕನ್ನು ತಪ್ಪದೆ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಬಲಪಡಿಸಲಿ ಎಂಬುದೇ ಜಿಲ್ಲಾ ಸ್ವೀಪ್ ಸಮಿತಿಯ ಉದ್ದೇಶವಾಗಿದೆ ಎನ್ನುತ್ತಾರೆ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು.

Related posts

Leave a Comment