ಬಳ್ಳಾರಿ ಉಪಚುನಾವಣೆ: ಜೆಡಿಎಸ್‌ಗೆ ಅಭ್ಯರ್ಥಿಯೇ ಸಿಕ್ಕಿಲ್ಲ: ಸದಾನಂದ ಗೌಡ

ಮೈಸೂರು, ನ.: ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಜೆಡಿಎಸ್‌ನವರಿಗೆ ಅಭ್ಯರ್ಥಿಯೇ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವ್ಯಂಗ್ಯವಾಡಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಅಭ್ಯರ್ಥಿಯ ಕೊರತೆಯಿಂದ ಜೆಡಿಎಸ್‌ನವರು ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿಲ್ಲ. ಬಳ್ಳಾರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಒಲವು ಬಿಜೆಪಿ ಕಡೆಗಿದ್ದು, ಜೆಡಿಎಸ್ ಅವನತಿಯ ಹಾದಿ ಹಿಡಿದಿದೆ ಎಂದು ತಿಳಿಸಿದರು.
ನ.22ರಿಂದ 4 ದಿನಗಳ ಕಾಲ ತಾನು ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದ ಸದಾನಂದ ಗೌಡ, ಶ್ರೀರಾಮುಲು ಪರ ಪ್ರಚಾರದಲ್ಲಿ ನಿರತರಾಗಿರುವ ಬಿಜೆಪಿ ನಾಯಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಇವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನಿರ್ಧರಿಸಿದ್ದಾರೆ ಎಂದರು.
ನೂತನ ಲೋಕಾಯುಕ್ತರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ ಎಂದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲುಂಟಾದ ಅಗ್ನಿ ಆಕಸ್ಮಿಕದ ಕುರಿತಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ತನಿಖೆ ನಡೆಸಲಾಗುವುದು. ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು

Leave a Reply