ಕಳಂಕಿತರ ಸಚಿವರ ಮೇಲೆ ಪ್ರತಿಪಕ್ಷ ಕೆಂಗಣ್ಣು

ಬೆಂಗಳೂರು:ಭ್ರಷ್ಟಾಚಾರ ಆರೋಪದಡಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ವಿಧಾನ ಪರಿಷತ್‌ನಲ್ಲಿ ಸೋಮವಾರ ಪಟ್ಟುಹಿಡಿದ ವಿರೋಧ ಪಕ್ಷಗಳ ಸದಸ್ಯರು,ಸಚಿವರಾದ ಆರ್.ಅಶೋಕ,ವಿ.ಸೋಮಣ್ಣ ಮತ್ತು ಮುರುಗೇಶ ನಿರಾಣಿ ಅವರನ್ನು ಕಲಾಪದ ಅವಧಿಯಲ್ಲಿ ಬಹಿಷ್ಕರಿಸಿದ ಘಟನೆ ನಡೆಯಿತು.
ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರಕ್ಕೆ ಚಾಲನೆ ನೀಡಲು ಸಭಾಪತಿ ಡಿ.ಎಚ್.ಶಂಕರಮೂರ್ತಿ ಮುಂದಾದರು.ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಜೆಡಿಎಸ್ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ,`ಈ ದಿನ ಸದನದಲ್ಲಿ ಮಾಜಿ ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿ ಸೇರಿದಂತೆ ನಾಲ್ವರು ಗಣ್ಯರ ಭಾವಚಿತ್ರ ಅನಾವರಣ ಮಾಡಲಾಗಿದೆ.ಈ ಗಣ್ಯರ ಆದರ್ಶಗಳನ್ನು ನಾವೂ ಪಾಲಿಸಬೇಕಿದೆ.ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಎಲ್ಲೋ ಒಂದು ಕಡೆ ರೈಲು ಅಪಘಾತ ಸಂಭವಿಸಿದಾಗ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ರಾಜ್ಯ ಸರ್ಕಾರದ ಮೂವರು ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ. ಅವರನ್ನು ಸಚಿವರಾಗಿ ಒಪ್ಪಿಕೊಂಡು, ಅವರಿಂದ ಉತ್ತರ,ಪ್ರತಿಕ್ರಿಯೆ ಪಡೆಯಲು ನಮ್ಮ ಮನಸ್ಸು ಒಪ್ಪುತ್ತಿಲ್ಲ`ಎಂದು ಮೂವರು ಸಚಿವರ ರಾಜೀನಾಮೆಗೆ ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕಿ ಮೋಟಮ್ಮ,ಕಾಂಗ್ರೆಸ್‌ನ ವಿ.ಆರ್.ಸುದರ್ಶನ್,ಎಸ್.ಆರ್.ಪಾಟೀಲ್ ಮತ್ತಿತರರು ನಾಣಯ್ಯ ಅವರ ಬೇಡಿಕೆಯನ್ನು ಬೆಂಬಲಿಸಿದರು.ಗೃಹ ಸಚಿವರೇ ಲೋಕಾಯುಕ್ತ ಪೊಲೀಸರಿಂದ ವಿಚಾರಣೆಗೆ ಒಳಗಾಗಿದ್ದಾರೆ.ಇಂತಹವರಿಂದ ಸದನದಲ್ಲಿ ಉತ್ತರ ಪಡೆಯುವುದು ಮೌಲ್ಯಾಧಾರಿತ ರಾಜಕಾರಣಕ್ಕೆ ವಿರುದ್ಧವಾದುದು ಎಂದು ವಾಗ್ದಾಳಿ ನಡೆಸಿದರು.
ಆಗ ಪ್ರತಿಕ್ರಿಯಿಸಿದ ಗೃಹ ಸಚಿವ ಅಶೋಕ,`ಮೊಕದ್ದಮೆ ದಾಖಲಾದ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂವಿಧಾನ ಅಥವಾ ಯಾವುದೇ ಕಾನೂನು ಹೇಳಿಲ್ಲ.ಕೇಂದ್ರ ಸರ್ಕಾರ ಕೂಡ ಹಿಂದೆ ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.ನಮ್ಮನ್ನು ತೇಜೋವಧೆ ಮಾಡಲು ಸುಳ್ಳು ದೂರು ನೀಡಲಾಗಿದೆ.ನಾವು ಅಪರಾಧಿಗಳಲ್ಲ,ಯಾವುದೇ ತಪ್ಪನ್ನೂ ಮಾಡಿಲ್ಲ`ಎಂದು ಸಮರ್ಥನೆ ನೀಡಲು ಪ್ರಯತ್ನಿಸಿದರು.
ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಅಶೋಕ ಹೇಳಿಕೆಯನ್ನು ವಿರೋಧಿಸಿ ಘೋಷಣೆ ಕೂಗಿದರು.ಒಂದು ಹಂತದಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಪ್ರಕರಣಗಳನ್ನೂ ಪ್ರಸ್ತಾಪಿಸಿದ ಅಶೋಕ,`ಆಗ ಏಕೆ ನೈತಿಕತೆ ಪ್ರಶ್ನೆ ಎತ್ತಿರಲಿಲ್ಲ. ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ವಿರುದ್ಧ 150ಕೋಟಿ ರೂಪಾಯಿ ಲಂಚದ ಆರೋಪವೂ ಬಂದಿರಲಿಲ್ಲವೇ`ಎಂದು ನಾಣಯ್ಯ ಅವರನ್ನೇ ಪ್ರಶ್ನಿಸಿದರು.ಇದು ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವಣ ಮಾತಿನ ಚಕಮಕಿಗೆ ಕಾರಣವಾಯಿತು.
ಬೇಡಿಕೆ ಒಪ್ಪದ ಸಿ.ಎಂ:ಈ ಚರ್ಚೆ ಮುಂದುವರಿದಿರುವಾಗಲೇ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸದನಕ್ಕೆ ಬಂದರು.ಮೊದಲ ಬಾರಿಗೆ ಸದನಕ್ಕೆ ಬಂದ ಅವರನ್ನು ಪರಿಚಯಿಸಿ,ಸ್ವಾಗತಿಸುವ ಪ್ರಕ್ರಿಯೆ ಮುಗಿದ ಬಳಿಕ ಮತ್ತೆ ನಾಣಯ್ಯ ಈ ವಿಷಯ ಪ್ರಸ್ತಾಪಿಸಿದರು.
 ಪಾರದರ್ಶಕತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ವಿಷಯದಲ್ಲಿ ಸದಾನಂದ ಗೌಡ ಅವರ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು,`ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಮೂವರು ಸಚಿವರನ್ನು ಸಂಪುಟದಿಂದ ಕೈಬಿಡಿ`ಎಂದು ಒತ್ತಾಯಿಸಿದರು.
ಆಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು,`ರಾಜಕೀಯ ದುರುದ್ದೇಶದಿಂದ ಖಾಸಗಿ ದೂರುಗಳನ್ನು ಸಲ್ಲಿಸಲಾಗಿದೆ.ನ್ಯಾಯಾಲಯ ಈ ಬಗ್ಗೆ ತನಿಖೆಗೆ ಆದೇಶಿಸಿದೆ.ಕಾನೂನಿನಂತೆ ಮೊಕದ್ದಮೆ ದಾಖಲು ಮಾಡಲಾಗಿದೆ.ಸಚಿವರು ತಪ್ಪು ಮಾಡಿರುವುದು ಸಾಬೀತಾದರೆ ಒಂದು ಕ್ಷಣವೂ ಅವರನ್ನು ಮುಂದುವರಿಸುವುದಿಲ್ಲ.ಆದರೆ,ಈಗ ಅವರನ್ನು ಕೈಬಿಡಲು ಸಾಧ್ಯವಿಲ್ಲ` ಎಂದು ಸಚಿವರ ಬೆಂಬಲಕ್ಕೆ ನಿಂತರು.
ಬಳಿಕ ಸಭಾಪತಿಯವರು ಪ್ರಶ್ನೋತ್ತರ ಆರಂಭಿಸಿದರು.ಆಗ, ಮೂವರು ಸಚಿವರಿಗೂ ಯಾವುದೇ ಪ್ರಶ್ನೆ ಕೇಳದಿರುವ ಮತ್ತು ಅವರ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸದಿರುವ ಮೂಲಕ ಅವರನ್ನು ಬಹಿಷ್ಕರಿಸುವುದಾಗಿ ಪ್ರತಿಪಕ್ಷಗಳ ಮುಖಂಡರು ಪ್ರಕಟಿಸಿದರು.ಅದರಂತೆ ಅಶೋಕ,ಸೋಮಣ್ಣ ಮತ್ತು ಮುರುಗೇಶ ನಿರಾಣಿ ಅವರಿಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಪ್ರಸ್ತಾಪಿಸದೇ ಬಹಿಷ್ಕರಿಸಿದರು.
ಕಲಾಪಪಟ್ಟಿಯ ಪ್ರಕಾರ ಜೆಡಿಎಸ್‌ನ ಸಂದೇಶ್ ನಾಗರಾಜ್,ಅಬ್ದುಲ್ ಅಜೀಂ,ಕಾಂಗ್ರೆಸ್‌ನ ಆರ್.ವಿ.ವೆಂಕಟೇಶ್,ಕೆ.ಪ್ರತಾಪಚಂದ್ರ ಶೆಟ್ಟಿ,ಅಲ್ಲಮಪ್ರಭು ಪಾಟೀಲ್ ಅವರು ಗೃಹ,ಸಾರಿಗೆ, ವಸತಿ ಇಲಾಖೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಕಿತ್ತು.ನಾಣಯ್ಯ ಅವರು `ಪೋಸ್ಕೊ` ಕಂಪೆನಿಗಾಗಿ ಗದಗ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆಯೂ ವಿಷಯ ಪ್ರಸ್ತಾಪಿಸಬೇಕಿತ್ತು. ಆದರೆ, ಬಹಿಷ್ಕಾರದ ಪರಿಣಾಮವಾಗಿ ಇದಾವುದೂ ನಡೆಯಲಿಲ್ಲ.
`ಸಾಬೀತಾದರೆ ನೇಣಿಗೇರುತ್ತೇನೆ`:ಪ್ರಶ್ನೋತ್ತರ ಕಲಾಪದ ನಡುವೆಯೇ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸೋಮಣ್ಣ,`ರಾಜಕೀಯವಾಗಿ ಚಾರಿತ್ರ್ಯಹನನ ಮಾಡಲು ಯಾರೋ ದಾರಿಹೋಕರು ನಮ್ಮ ವಿರುದ್ಧ ದೂರು ಸಲ್ಲಿಸಿದ್ದಾರೆ.ನಾನು ತಪ್ಪು ಮಾಡಿದ್ದೇನೆ ಎಂದು ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ.30ವರ್ಷದಿಂದ ರಾಜಕಾರಣದಲ್ಲಿದ್ದು, ಯಾವುದೇ ತಪ್ಪು ಮಾಡಿಲ್ಲ. ಇಂತಹ ಘಟನೆಗಳಿಂದ ನೋವಾಗುತ್ತಿದೆ` ಎಂದ
Please follow and like us:
error