ಜಿಲ್ಲೆಯಲ್ಲಿ ಸಕಾಲ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಎಂ. ಮನೋಜ್ ಸೂಚನೆ

  ಸಕಾಲ ಯೋಜನೆಯಡಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ೩೭೫ ಸೇವೆಗಳು ಲಭ್ಯವಿದ್ದು, ಈ ಪೈಕಿ ೬೯ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ.  ಕೊಪ್ಪಳ ಜಿಲ್ಲೆಯಲ್ಲಿ ಸಕಾಲ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ರಾಜ್ಯ ಸಕಾಲ ಮಿಷನ್‌ನ ನಿರ್ದೇಶಕ ಎಂ. ಮನೋಜ್ ಅವರು ಸೂಚನೆ ನೀಡಿದರು.
     ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸಕಾಲ ಯೋಜನೆಯ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
     ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳು ಕಾಲಕ್ಕೆ ಸರಿಯಾಗಿ, ವಿಳಂಬಕ್ಕೆ ಆಸ್ಪದ ಇಲ್ಲದಂತೆ ಒದಗಿಸುವ ಉದ್ದೇಶದಿಂದ ಸಕಾಲ ನಾಗರಿಕ ಸೇವಾ ಖಾತ್ರಿ ಯೋಜನೆ ಜಾರಿಗೆ ಬಂದಿದೆ.  ಆಗಸ್ಟ್ ತಿಂಗಳ ಅಂತ್ಯದವರೆಗೆ ಕೊಪ್ಪಳ ಜಿಲ್ಲೆಯಲ್ಲಿ ೭೫೨೭೩೨ ಅರ್ಜಿಗಳು ಸಕಾಲ ಯೋಜನೆಯಡಿ ವಿವಿಧ ಇಲಾಖೆಯಲ್ಲಿ ಸ್ವೀಕೃತಗೊಂಡು, ೭೩೫೭೪೫ ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿಯಾಗಿವೆ.  ಆಗಸ್ಟ್ ತಿಂಗಳಿನಲ್ಲಿ ರಾಜ್ಯ ಮಟ್ಟದಲ್ಲಿ ೧೦ನೇ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆ ಸೆಪ್ಟಂಬರ್ ತಿಂಗಳಿನಲ್ಲಿ ೨೧ನೇ ಸ್ಥಾನಕ್ಕೆ ಕುಸಿದಿದೆ.  ಗಂಗಾವತಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಬಹಳಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ.  ಅಲ್ಲದೆ ವಿವಿಧ ಇಲಾಖೆಗಳು ಅರ್ಜಿಗಳನ್ನು ಸಕಾಲ ಯೋಜನೆಯಡಿ ಪಡೆಯದೆ ಬೈಪಾಸ್ ಮಾರ್ಗದಲ್ಲಿಯೇ ವಿಲೇವಾರಿ ಮಾಡುತ್ತಿರುವುದು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ, ಅಂತಹ ಅಧಿಕಾರಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ.  ಸೆಪ್ಟಂಬರ್‌ನಲ್ಲಿ ಜಿಲ್ಲೆಯ ೩೩ ಗ್ರಾಮ ಪಂಚಾಯತಿಗಳಲ್ಲಿ ಸಕಾಲ ದಡಿ ಒಂದೂ ಅರ್ಜಿಗಳು ಸ್ವೀಕೃತಗೊಂಡಿಲ್ಲ,  ೪೪ ಗ್ರಾಮ ಪಂಚಾಯತಿಗಳಲ್ಲಿ ೧೦ಕ್ಕೂ ಕಡಿಮೆ ಅರ್ಜಿಗಳು ಸ್ವೀಕೃತಗೊಂಡಿವೆ.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ಸಕಾಲ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.  ಸಕಾಲ ಯೋಜನೆಯಡಿ ಇರುವ ಸೇವೆಗಳಿಗೆ ಸಂಬಂಧಿಸಿದ ಎಲ್ಲ ಅರ್ಜಿಗಳೂ, ಸಕಾಲ ವ್ಯವಸ್ಥೆಯಡಿಯೇ ಕಚೇರಿಗಳಲ್ಲಿ ಸ್ವೀಕೃತಗೊಂಡು, ನಿಗದಿತ ಅವಧಿಯೊಳಗೆ ವಿಲೇವಾರಿಯಾಗಬೇಕು.  ಎಲ್ಲ ಇಲಾಖೆಗಳು ತಮ್ಮ ಇಲಾಖೆಯಲ್ಲಿ ಸಕಾಲ ಯೋಜನೆಯಡಿ ಲಭ್ಯವಿರುವ ಸೇವೆಗಳು ಹಾಗೂ ನಿಗದಿತ ಅವಧಿಯ ವಿವರವುಳ್ಳ ಫಲಕವನ್ನು ತಪ್ಪದೆ ಪ್ರದರ್ಶಿಸಬೇಕು.  ತಪ್ಪಿದಲ್ಲಿ ಅಂತಹ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುವುದು ಎಂದು ಸಕಾಲ ಮಿಷನ್‌ನ ನಿರ್ದೇಶಕ ಮನೋಜ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
     ಸಕಾಲ ಮಿಷನ್‌ನ ತರಬೇತುದಾರ ವರಪ್ರಸಾದ ರೆಡ್ಡಿ ಅವರು ಸಕಾಲ ಯೋಜನೆಯಡಿ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಮಂಜುನಾಥ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ವಿವಿಧ ತಾಲೂಕುಗಳ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply