ಗ್ರಾಮಗಳಲ್ಲೂ ಕಸ ವಿಲೇವಾರಿಗೆ ಆದ್ಯತೆ ನೀಡಬೇಕಿದೆ- ರಾಘವೇಂದ್ರ ಹಿಟ್ನಾಳ್

  ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಕಸ ವಿಲೇವಾರಿಗೆ ಆದ್ಯತೆ ನೀಡುವಂತೆ, ಪ್ರಮುಖ ಗ್ರಾಮಗಳಲ್ಲೂ ಸಮರ್ಪಕ ಕಸ ವಿಲೇವಾರಿಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
  ತಾಲೂಕಿನ ಹುಲಿಗಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಘನ ತ್ಯಾಜ್ಯ ವಿಲೇವಾರಿ ಉದ್ಘಾಟನಾ ಸಮಾರಂಭದ ಉ

ದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

  ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ದಿನನಿತ್ಯ ಕಸ ವಿಲೇವಾರಿ ಮಾಡುವುದೇ ಒಂದು ಸವಾಲಿನ ಕಾರ್ಯವಾಗಿದ್ದು, ಕೊಪ್ಪಳ ನಗರದಲ್ಲಿ ಈಗಾಗಲೆ ಘನ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.  ಇದೇ ರೀತಿ ದಿನನಿತ್ಯ ಸಾವಿರಾರು ಭಕ್ತಾದಿಗಳು ಬಂದು ಹೋಗುವಂತಹ ಪವಿತ್ರ ಧಾರ್ಮಿಕ ಕ್ಷೇತ್ರ, ಹುಲಿಗಿಯಂತಹ ಪ್ರಮುಖ ಗ್ರಾಮದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ.  ಜಿಲ್ಲೆಯ ಎಲ್ಲ ಪ್ರಮುಖ ಗ್ರಾಮಗಳಲ್ಲೂ ಸಹ ಘನ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕೈಗೊಳ್ಳುವುದು ಅಗತ್ಯವಾಗಿದೆ.  ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಸ, ತಿಪ್ಪೆಗುಂಡಿಗಳನ್ನು ಮಾಡುವುದರಿಂದ, ಗ್ರಾಮದ ನೈರ್ಮಲ್ಯ ಹಾಳಾಗಿ, ಅನೇಕ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತದೆ.  ಗ್ರಾಮೀಣ ಪ್ರದೇಶಗಳಲ್ಲೂ ಘನ ತ್ಯಾಜ್ಯ ವಿಲೇವಾರಿ ಸಮರ್ಪಕಗೊಂಡಲ್ಲಿ, ಡೆಂಗ್ಯುನಂತಹ ಮಾರಕ ರೋಗ ಹರಡುವುದನ್ನು ನಿಯಂತ್ರಿಸಬಹುದಾಗಿದೆ.  ಹುಲಿಗಿ ಗ್ರಾಮದ ಅಭಿವೃದ್ಧಿಗೆ ಈಗಾಗಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಹುಲಿಗಿ ಗ್ರಾಮದ ಪ್ರಮುಖ ರಸ್ತೆಯನ್ನು ಸಿ.ಸಿ. ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.  ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ತಿಳಿಸಿದರು.
  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಮಾತನಾಡಿ, ಜಿಲ್ಲೆಯ ಪ್ರಮುಖ ಗ್ರಾಮಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗಾಗಿ ಮನೆ, ಮನೆಯಿಂದ ಕಸ ಸಂಗ್ರಹಿಸಿ, ನಂತರ ಅದನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿಸಿ, ಉಪಯುಕ್ತಗೊಳಿಸಲು ಯೋಜನೆ ರೂಪಿಸಲಾಗಿದ್ದು, ಸದ್ಯ ಹುಲಿಗಿ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.  ಹುಲಿಗೆಮ್ಮ ದೇವಸ್ಥಾನದ ಒಂದು ವಾಹನ ಮತ್ತು ತಮ್ಮ ಒಂದು ಸ್ವಂತ ವಾಹನವನ್ನು ಈ ಕಾರ್ಯಕ್ಕೆ ಬಳಸಲಾಗುವುದು.  ಅದೇ ರೀತಿ ಭಾಗ್ಯನಗರ, ಕುಕನೂರು, ಶ್ರೀರಾಮನಗರ, ತಾವರಗೇರಾ, ಮಂಗಳೂರು, ಕಾರಟಗಿ, ಇರಕಲ್ಲಗಡ, ಕನಕಗಿರಿ, ಹನುಮಸಾಗರ, ಆನೆಗೊಂದಿ, ಬಸಾಪಟ್ಟಣ, ಬೂದಗುಂಪಾ ಮತ್ತು ಕಿನ್ನಾಳ ಸೇರಿದಂತೆ ಒಟ್ಟು ೧೪ ಗ್ರಾಮಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ.  ಇದಕ್ಕಾಗಿ ಅಗತ್ಯ ವಾಹನ, ಇತ್ಯಾದಿ ವ್ಯವಸ್ಥೆ ಕೈಗೊಳ್ಳಲು ನಿರ್ಧರಿಸಲಾಗಿದೆ.  ಯೋಜನೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕದೆ, ಗ್ರಾಮ ಪಂಚಾಯತಿಯಿಂದ ಎರಡು ದಿನಕ್ಕೊಮ್ಮೆ ಕಸ ಸಂಗ್ರಹಕಾರರಿಗೆ ನೀಡಬೇಕು.  ಈ ಮೂಲಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರವೆನಿಸಿರುವ ಹುಲಿಗಿ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸಲು ಸಹಕರಿಸಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
  ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಸಮಾರಂಭದಲ್ಲಿ ಭಾಗವಹಿಸಿ, ಗ್ರಾ.ಪಂ.ನ ಶೇ. ೨೨. ೫ ರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಚೆಕ್ ವಿತರಿಸಿದರು ಅಲ್ಲದೆ, ಕಸ ಸಂಗ್ರಹಣೆ ವಾಹನಕ್ಕೆ ಅಳವಡಿಸಿರುವ ಗಂಟೆ ಬಾರಿಸುವ ಮೂಲಕ ವಾಹನಕ್ಕೆ ಚಾಲನೆ ನೀಡಿದರು.  ಗ್ರಾ.ಪಂ. ಅಧ್ಯಕ್ಷ ಪಾಲಾಕ್ಷಪ್ಪ ಗುಂಗಾಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಜಿ.ಪಂ. ಸದಸ್ಯರುಗಳಾದ ನಾಗನಗೌಡ ಪಾಟೀಲ್, ಈರಪ್ಪ ಕುಡಗುಂಟಿ, ಪಿಡಿಓ ಸಿದ್ದರಾಮಪ್ಪ, ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ಗಣ್ಯರಾದ ಪ್ರಭುರಾಜ್ ಪಾಟೀಲ್, ಡಿ.ಬಿ. ದೇಸಾಯಿ, ಪ್ರಸನ್ನ ಗಡಾದ್, ಮುತ್ತು ಕುಷ್ಟಗಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Please follow and like us:
error

Related posts

Leave a Comment