ಹಾಲುಮತ ಗುರುಪರಂಪರೆ : ವಿಧವೆಗೆ ಗುರುಮಾತೆ ಪಟ್ಟ-ಉದಾತ್ತತೆ

ಕೊಪ್ಪಳ, ಜೂ. ೧೨ : ಹಾಲುಮತ ಗುರುಪರಂಪರೆಯಲ್ಲಿ ವಡೆಯರ ಮನೆತನದಲ್ಲಿ ಗಂಡ ಸತ್ತ ನಂತರ ಆ ಹೆಣ್ಣುಮಗಳು ಬಳೆ, ಕುಂಕುಮ, ಮಾಂಗಲ್ಯ ಕಿತ್ತು ಹಾಕದೆ ಒಡೆಯರಮ್ಮನಾಗಿ ಗಂಡ ನಿರ್ವಹಿಸುತ್ತಿದ್ದ ಎಲ್ಲ ಧಾರ್ಮಿಕ ಮದುವೆ, ಮಂಗಲ ಕಾರ್ಯಗಳನ್ನು ಗುರುಸ್ಥಾನದಲ್ಲಿ ನಿಂತು ನೆರವೇರಿಸುತ್ತಾಳೆ. ಅವಳನ್ನು ವಿಧವೆಯನ್ನಾಗಿ ಮಾಡದೇ ಅವಳಿಗೆ ಗುರುಸ್ಥಾನ ನೀಡಿ ಹೆಣ್ಣನ್ನು ಗೌರವಿಸುವುದು ಹಾಲುಮತ ಸಮಾಜದಲ್ಲಿ ಮಾತ್ರ ಇರುವುದು ಕಂಡುಬರುತ್ತದೆ. ಇಂಥ ಉಚ್ಛ ಸಂಪ್ರದಾಯ ಮುಂದುವರಿದ ಜನಾಂಗದವರಿಗೆ ಅನುಕರಣೀಯವಾಗಿದೆ ಎಂದು ಕಾರಟಗಿ ಸಿ.ಎಂ.ಎನ್. ಮಹಾವಿದ್ಯಾಲಯದ ಉಪನ್ಯಾಸಕ ಡಾ. ಉಮೇಶ ಗುರಿಕಾರ ಹೇಳಿದ್ದಾರೆ.
ನಗರದ ಹುಡ್ಕೊ ಕಾಲೊನಿಯ ಮೊದಲನೇ ಕ್ರಾಸ್‌ನಲ್ಲಿರುವ ಮಾಜಿ ಸೈನಿಕ ಮಾರುತಿ ಗೊಂದಿಯವರ ಮನೆಯಲ್ಲಿ ಕನಕ ಸಾಂಸ್ಕೃತಿಕ ಪರಿಷತ್ತು ಏರ್ಪಡಿಸಿದ್ದ ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮದಲ್ಲಿ ಹಾಲುಮತ ಸಮಾಜದ ಗುರುಪರಂಪರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕುರುಬರಿಗೆ ವಡೆಯರು ಜಂಗಮರಿದ್ದಂತೆ. ವಡೆಯರ ಮನೆತನದವರೇ ಕುರುಬರ ಮನೆಗಳಲ್ಲಿ ನಡೆಯುವ ಎಲ್ಲ ಧಾರ್ಮಿಕ, ಮದುವೆ ಶುಭ ಕಾರ್ಯಗಳಲ್ಲಿ ಗುರುವಿನ ಸ್ಥಾನದಲ್ಲಿ ನಿಂತು ಕಾರ್ಯಗಳನ್ನು ನೆರವೇರಿಸಿಕೊಡುತ್ತಾರೆ. ಅಕಸ್ಮಾತ್ ವಡೆಯರ ಗುರು ತೀರಿಕೊಂಡರೆ ಆತನ ಹೆಂಡತಿ ಕುಂಕುಮ,ಬಳೆ, ಮಾಂಗಲ್ಯ ಸೂತ್ರ ಕಿತ್ತುಹಾಕದೆ ಸುಮಂಗಲೆಯಾಗಿ ಗುರುಪಟ್ಟಕ್ಕೇರುತ್ತಾಳೆ. ಆಗ ಗಂಡ ನಿರ್ವಹಿಸುತ್ತಿದ ಎಲ್ಲ ಶುಭ ಕಾರ್ಯಗಳನ್ನು ನೆರವೇರಿಸಿಕೊಡುತ್ತಾಳೆ. ಅವಳಿಗೆ ವೈಧವ್ಯದ ಪಟ್ಟಕಟ್ಟದೇ ಗುರುಮಾತೆ ಅಥವಾ ವಡೆಯರಮ್ಮನಾಗಿ ಪಟ್ಟಕ್ಕೇರುತ್ತಾಳೆ. ಇದು ಹಾಲುಮತ ಸಮಾಜ ಹೆಣ್ಣಿಗೆ ನೀಡಿದ ಉದಾತ್ತ ಕೊಡುಗೆಯಾಗಿದೆ. ಜಗಜ್ಯೋತಿ ಬಸವೇಶ್ವರರ ಕಾಲವಾದ ೧೨ನೇ ಶತಮಾನದಲ್ಲಿ ಹಾಲುಮತ ಗುರುಪರಂಪರೆ ಜಾರಿಗೆ ಬಂದಿದ್ದು ಕಂಡುಬರುತ್ತದೆ. ಮುಖ್ಯವಾಗಿ ರೇವಣಸಿದ್ಧೇಶ್ವರ, ಸಿದ್ಧರಾಮೇಶ್ವರ ಹಾಗೂ ಅಮೋಘಸಿದ್ಧೇಶ್ವರ ಪರಂಪರೆಗಳು ಅಸ್ಥಿತ್ವದಲ್ಲಿವೆ. ರೇವಣಸಿದ್ಧೇಶ್ವರರು ಕರ್ನಾಟಕ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿರುವ ಇವರು ಕುರುಬ ಮತ್ತು ವೀರಶೈವ ಸಮಾಜಗಳೆರಡಕ್ಕೂ ಪೂಜನೀಯ ವ್ಯಕ್ತಿಯಾಗಿದ್ದಾರೆ. ಹಾಲುಮತ ಮಠಗಳಿಗೆ ಭಕ್ತರ ಕೊಡುಗೆ ಕಡಿಮೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಗುರುಪರಂಪರೆಯ ಕೊಂಡಿ ಕಳಚುವ ಸಾಧ್ಯತೆ ಹೆಚ್ಚಾಗಿದೆ ಎಂದು ಡಾ. ಉಮೇಶ ಗುರಿಕಾರ್ ಅಭಿಪ್ರಾಯಪಟ್ಟರು.
ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹಾಲುಮತ ಸಮಾಜ ಬಾಂಧವರಿಗೆ ನಗರದಲ್ಲಿ ಸಮುದಾಯ ಭವನದ ಅಗತ್ತಯವಿದೆ. ಕೆಂಡದಮಠದ ಅಭಿವೃದ್ಧಿಗೆ ಅನುದಾನದೊರೆಯುವಂತಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ನೂತನ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ಧನಗೌಡ ಪಾಟೀಲ ಸೌಹಾರ್ಧ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಗವಿಸಿದ್ಧಪ್ಪ ಹಿಟ್ನಾಳ ನೆರವೇರಿಸಿದರು. ನಿವೃತ್ತ ಪ್ರಾಂಶುಪಾಲ ಬಿ.ಜಿ. ಕರಿಗಾರ, ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಜಮಾಜ ಸೇವಕ ರಾಮಣ್ಣ ಹಳ್ಳಿಗುಡಿ, ಕಾಳಿದಾಸ ನೌಕರರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಮಣ್ಣ ಬನ್ನಿಗೋಳ, ಡಾ. ಡಿ. ಆರ್. ಬೆಳ್ಳಟ್ಟಿ, ಉಪನ್ಯಾಸಕ ಹನುಮಂತಪ್ಪ ಅಂಡಗಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಜಿ ಸೈನಿಕ ಮಾರುತಿ ಗೊಂದಿ ಅಧ್ಯಕ್ಷತೆ ವಹಿಸಿದ್ದರು. ಕೆಂಡದ ಮಠದ ಸ್ವಾಮಿಜಿ ಪಂಚಯ್ಯ ಗುರುವಿನ ಸಾನಿಧ್ಯವಹಿಸಿದ್ದರು. ಪತ್ರಕರ್ತ ವೈ. ಬಿ. ಜೂಡಿ ಅವರು ಹಾಲುಮತ ಸಮಾಚಾರ ಘಟನಾವಳಿಗಳನ್ನು ಪ್ರಸ್ತುತಪಡಿಸಿದರು. ಕನಕ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಸವರಾಜ ಆಕಳವಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸವರಾಜ ಬಿಲ್ಲಾರ್ ಸ್ವಾಗತಿಸಿದರು. ನ್ಯಾಯವಾದಿ ಲಂಕೇಶ ಡೊಳ್ಳೀನ ನಿರ್ವಹಿಸಿದರು. 
Please follow and like us:
error