ಹಿಂದುತ್ವ ಹೇರಿಕೆಗೆ ಹೊಸ ಹುನ್ನಾರ

 ಸ್ವಾತಂತ್ರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಿ ಅನೇಕರು ರೋಮಾಂಚಿತ ರಾಗಿದ್ದಾರೆ. ‘‘ದೇಶದ ಪ್ರಗತಿಗೆ ಜಾತಿವಾದ- ಕೋಮುವಾದ ಅಡ್ಡಿಯಾಗಿವೆ’’ ಎಂಬ ಮೋದಿ ಮಾತು ಕೇಳಿ ಕೆಲ ಪ್ರಗತಿಪರರೂ ದಿಗ್ಮೂಢರಾಗಿ ದ್ದಾರೆ. ಈ ರೀತಿ ಜನರನ್ನು ಮೈಮರೆಸಿ, ಯಾಮಾರಿಸಿ ತನ್ನ ಫ್ಯಾಸಿಸ್ಟ್ ಅಜೆಂಡಾ ಜಾರಿಗೆ ತರುವುದು ಆರೆಸ್ಸೆಸ್ ತಂತ್ರ. ನಾಗಪುರದ ಸೂತ್ರಧಾರರೆ ಹೀಗೆ ಮಾತಾಡುವಂತೆ ಮೋದಿಗೆ ಹೇಳಿಕೊಟ್ಟಿರುತ್ತಾರೆ. ಅವರು ಹೇಳಿಕೊಟ್ಟಿದ್ದನ್ನೆ ಪಾತ್ರಧಾರಿ ಮೋದಿ ಪುನರುಚ್ಚರಿಸುತ್ತಾರೆ. ಹಿಂದೆ ವಾಜಪೇಯಿ ಕೂಡ ಇದೇ ಪಾತ್ರ ನಿರ್ವಹಿಸಿದ್ದರು. ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂಥ ಮಾತನ್ನಾಡಿಸಿ ತನ್ನ ಗುರಿ ಸಾಧಿಸುವುದು ಸಂಘಪರಿವಾರದ ರಣನೀತಿಯಾಗಿದೆ.
ಮೂರು ತಿಂಗಳ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿ ಕೊಂಡಾಗ ಅವರ ಮಾತುಗಳನ್ನು ಕೇಳಿ ಕೆಲ ಪ್ರಗತಿಪರರೂ ರೋಮಾಂಚಿತರಾಗಿದ್ದರು. ಬಿಜೆಪಿ ಬದಲಾಗಿದೆ ಎಂದು ಸಂಭ್ರಮಪಟ್ಟಿದ್ದರು. ‘ಲಂಕೇಶ್ ಪತ್ರಿಕೆ’ಯಲ್ಲಿ ಹಿಂದೆಲ್ಲ ಅಂಕಣ ಬರೆಯುತ್ತಿದ್ದ ನಿವೃತ್ತ ಅಧ್ಯಾಪಕರೊಬ್ಬರು ಪದೇ ಪದೇ ಇಂಥ ಮಾತುಗಳನ್ನು ಟಿ.ವಿ.ಚಾನಲ್‌ಗಳಲ್ಲಿ ಆಡುತ್ತಿದ್ದರು. ಆದರೆ ಮೋದಿ ಅಧಿಕಾರಕ್ಕೆ ಬಂದು ಮೂರು ತಿಂಗಳ ನಂತರದ ವಿದ್ಯಮಾನ ಗಳನ್ನು ಗಮನಿಸಿದರೆ ಬದಲಾಗಿದ್ದು ಬಿಜೆಪಿ ಅಲ್ಲ, ಅದಕ್ಕೆ ಸರ್ಟಿಫಿಕೇಟ್ ನೀಡಿದ, ನೀಡುತ್ತಿರುವ ಆರೋಪಿತ ಪ್ರಜ್ಞಾವಂತರು ಎಂಬುದು ಸ್ಪಷ್ಟ ವಾಗುತ್ತದೆ.
ಸಂಘ ಪರಿವಾರದ ಅಂತರಾಳದಿಂದ ಮತ್ತೆ ಹಿಂದುತ್ವದ ಅಪಸ್ವರ ಕೇಳಿ ಬರತೊಡಗಿದೆ. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಇತ್ತೀಚೆಗೆ ‘‘ಎಲ್ಲ ಭಾರತೀಯರು ಹಿಂದೂಗಳು, ಭಾರತೀಯರ ಸಾಂಸ್ಕೃತಿಕ ಆಸ್ಮಿತೆ ಹಿಂದುತ್ವ’’ ಎಂದು ಸಾರಿಬಿಟ್ಟರು. ಭಾಗವತ್ ಬಾಯಿಯಿಂದ ಈ ಮಾತು ಬಂದ ತಕ್ಷಣ ಗೋವಾದ ಮಂತ್ರಿಯೊಬ್ಬರು ‘‘ಭಾರತ ಆಗಲೇ ಹಿಂದೂ ರಾಷ್ಟ್ರವಾಗಿದೆ’’ ಎಂದು ಘೋಷಿಸಿ ಬಿಟ್ಟರು. ಇದಾದ ನಂತರ ಅದೇ ಗೋವಾ ರಾಜ್ಯದ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಕೊಲ್ಲಿ ರಾಷ್ಟ್ರ ಗಳಲ್ಲಿರುವ ಭಾರತೀಯ ಮೂಲದ ಮುಸಲ್ಮಾನರು, ಕ್ರೈಸ್ತರು ಕೂಡ ಹಿಂದೂ ಗಳೆಂದು ಸದನದಲ್ಲೇ ಹೇಳಿಬಿಟ್ಟರು.
  ಭಾರತದಲ್ಲಿ ನೆಲೆಸಿದ ಯಾರೇ ಆಗಿರಲಿ ಅವರೆಲ್ಲ ಭಾರತೀಯರೆಂಬುದು ವಿವಾದಾತೀತ. ಇಲ್ಲಿನ ಅಲ್ಪಸಂಖ್ಯಾತರು ಕೂಡ ತಮ್ಮನ್ನು ಭಾರತೀಯ ರೆಂದೇ ಕರೆದುಕೊಳ್ಳುತ್ತಾರೆ. ಅದಕ್ಕಾಗಿ ಹೆಮ್ಮೆ ಪಡುತ್ತಾರೆ. ನಾನು ಕಳೆದ ಐದಾರು ದಶಕದ ಹಿಂದಿ ನಿಂದಲೇ ಗಮನಿಸುತ್ತಿದ್ದೇನೆ. ಹಿಂದೂ ವ್ಯಾಪಾರ ಸ್ಥರು ತಮ್ಮ ಅಂಗಡಿಗಳ ಬೋರ್ಡುಗಳ ಮೇಲೆ ತಮ್ಮ ತಮ್ಮ ಜಾತಿಯ ದೇವರ ಹೆಸರನ್ನು ಹಾಕಿಕೊಂಡಿರುತ್ತಾರೆ. ವೆಂಕಟೇಶ್ವರ ಬೇಕರಿ ಗಳಿರುವಂತೆ, ಬಾಲಾಜಿ ಬಾರ್‌ಗಳು ಇಲ್ಲಿವೆ. ಆದರೆ ಮುಸಲ್ಮಾನ ವ್ಯಾಪಾರಸ್ಥರು ತಮ್ಮ ಅಂಗಡಿ ಗಳಿಗೆ ‘ಭಾರತ್ ಸ್ಟೋರ್ಸ್‌’, ‘ನ್ಯಾಷನಲ್ ಗ್ಯಾರೇಜ್’, ‘ಕರ್ನಾಟಕ ಲಾಡ್ಜ್’ ಎಂದು ಬೋರ್ಡು ಹಾಕಿರುತ್ತಾರೆ. ಅವರೆಂದು ತಮ್ಮ ಧಾರ್ಮಿಕ ಸಂಕೇತಗಳನ್ನು ಬಳಸಿ ಕೊಳ್ಳುವುದಿಲ್ಲ.
ಆದರೆ ಭಾರತೀಯರೆಂದರೆ ಸಾಲದು ಈ ದೇಶದ ಮುಸಲ್ಮಾನರು, ಕ್ರೈಸ್ತರು, ತಮ್ಮನ್ನು ತಾವು ಹಿಂದುಗಳೆಂದು ಕರೆದುಕೊಳ್ಳಬೇಕೆಂಬುದು ಆರೆಸ್ಸೆಸ್ ಹಠ. ನಿಮ್ಮ ಆಚರಣೆ ಯಾವುದೇ ಆಗಿರಲಿ, ಯಾವುದೇ ದೇವರನ್ನು ಪ್ರಾರ್ಥಿಸಿ, ಆದರೆ ಮೊದಲು ನೀವು ಹಿಂದು ಎಂದು ಒಪ್ಪಿಕೊಳ್ಳಿ ಎಂಬುದು ಇವರ ಅಭಿಪ್ರಾಯ. ಹಿಂದು ಎಂದು ಒಪ್ಪಿಕೊಳ್ಳದಿದ್ದರೆ ನಿಮ್ಮ ರಾಷ್ಟ್ರನಿಷ್ಠೆಯನ್ನು ಪ್ರಶ್ನಿಸುವುದು ಅನಿವಾರ್ಯ ವಾಗುತ್ತದೆ ಎಂಬ ಬೆದರಿಕೆ ಬೇರೆ. ಅಂದರೆ ಇಲ್ಲಿರುವ ಮುಸಲ್ಮಾನರು ತಮ್ಮನ್ನು ಹಿಂದೂ ಮುಸಲ್ಮಾನರೆಂದು, ಕ್ರೈಸ್ತರು ತಮ್ಮನ್ನು ಹಿಂದೂ ಕ್ರೈಸ್ತರೆಂದು ಕರೆದುಕೊಳ್ಳಬಹುದಂತೆ. ಈ ರೀತಿ ಈ ದೇಶದ ನಾಗರಿಕರನ್ನೆಲ್ಲ ಹಿಂದೂ ಎಂದು ಕರೆಯುವುದೇ ಬಿಜೆಪಿಯ ‘ಸಾಂಸ್ಕೃತಿಕ ರಾಷ್ಟ್ರೀಯವಾದ’ ಸಿದ್ಧಾಂತ. ಈ ಸಿದ್ಧಾಂತದ ಮೂಲ ಇರುವುದು ಆರೆಸ್ಸೆಸ್‌ನ ಎರಡನೆ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಲಕರ್ ಅವರು ರೂಪಿಸಿದ ಹಿಂದುತ್ವ ಪ್ರಣಾಳಿಕೆಯಲ್ಲಿ ಅಂದರೆ ಐವತ್ತು ವರ್ಷದ ಹಿಂದೆ ತಮ್ಮ ಗುರು ಹೇಳಿಕೊಟ್ಟ ಮಾತನ್ನೇ ಭಾಗವತ್, ಪಾರಿಕ್ಕರ್ ಸೇರಿ ಸಂಘಪರಿವಾರದ ಪ್ರಭೃತಿಗಳೆಲ್ಲ ಪಠಿಸುತ್ತಾರೆ. ಪ್ರಧಾನಿ ಸ್ಥಾನ ದಲ್ಲಿರುವುದರಿಂದ ಮೋದಿ ಸದ್ಯಕ್ಕೆ ಆ ರೀತಿ ಮಾತಾಡುವುದಿಲ್ಲ. ಯಾಕೆಂದರೆ ಅವರೀಗ ಅಟಲ್ ವೇಷಧಾರಿ.
ಆರೆಸ್ಸೆಸ್‌ನವರು ಪ್ರತಿನಿತ್ಯ ಸ್ವಾಮಿ ವಿವೇಕಾನಂದ, ಚಂದ್ರಶೇಖರ ಆಝಾದ್, ಶಿವಾಜಿ, ರಾಣಾ ಪ್ರತಾಪ, ರಾಮಕೃಷ್ಣ ಪರಮಹಂಸರ ಹೆಸರು ಹೇಳುತ್ತಾರೆ. ಆದರೆ ಈ ಮಹನೀಯರ ಸಾಹಿತ್ಯದಲ್ಲಿ ಎಷ್ಟೇ ಹುಡುಕಾಡಿ ದರು ಆರೆಸ್ಸೆಸ್ ಕಲ್ಪನೆಯ ಹಿಂದುತ್ವವನ್ನು ಅವರು ಪ್ರತಿಪಾದಿಸಿಲ್ಲ. ಸ್ವಾಮಿ ವಿವೇಕಾ ನಂದರು ಸೇರಿದಂತೆ ಯಾರೂ ಮುಸಲ್ಮಾನರು, ಕ್ರೈಸ್ತರು ಹಿಂದುಗಳೆಂದು ತಮ್ಮನ್ನು ಕರೆದು ಕೊಳ್ಳಬೇಕು, ಹಿಂದುತ್ವ ಭಾರತದ ಆಸ್ಮಿತೆ ಎಂದು ಹೇಳಿಲ್ಲ. ಹಾಗಿದ್ದರೆ ಭಾರತೀಯರೆಲ್ಲ ಹಿಂದುಗಳು ಎಂಬ ಸಿದ್ಧಾಂತ ಹುಟ್ಟಿಸಿದವರು ಯಾರು? ಅದು ಎಲ್ಲಿಂದ ಬಂತು?
ಈ ಹಿಂದುತ್ವದ ಮೂಲಕ್ಕೆ ಹೋದರೆ ಅದೇ ಸಾವರ್ಕರ್ ಮತ್ತು ಗೋಳ್ವಲಕರ್ ಸಿಗುತ್ತಾರೆ. ಯಾಕೆಂದರೆ ವೇದಗಳಲ್ಲಂತೂ ಹಿಂದು ಎಂಬ ಶಬ್ದ ಎಲ್ಲೂ ಕಾಣುವುದಿಲ್ಲ. ರಾಮಾಯಣ, ಮಹಾಭಾರತಗಳಲ್ಲೂ ಹಿಂದು ಶಬ್ದದ ಸುಳಿವಿಲ್ಲ. ಆದರೂ ಭಾರತದ ಪರಂಪರೆಗೆ ಸಂಬಂಧವೇ ಇಲ್ಲದ ‘ಹಿಂದೂ’ ಶಬ್ದವೊಂದನ್ನು ಹಿಡಿದು ಎಲ್ಲರೂ ಹಿಂದೂಗಳಾಬೇಕೆಂಬ ಹಠವೇಕೆ? ‘‘ಹಿಂದುತ್ವವೇ ರಾಷ್ಟ್ರೀಯತ್ವ, ಹಿಂದೂವಲ್ಲದ್ದು ಅರಾಷ್ಟ್ರೀಯ’’ ಎಂಬ ವಿತಂಡವಾದವೇಕೆ? ವಾಸ್ತವವಾಗಿ ಭಾರತೀಯರನ್ನು ‘ಹಿಂದು’ಗಳೆಂದು ಕರೆದಿರು ವುದು ಕೂಡ ತೀರ ಇತ್ತೀಚೆಗೆ. ವಿದೇಶಿಯರೇ ಭಾರತೀಯರನ್ನು ಹಿಂದುಗಳೆಂದು ಕರೆದರು.
 ವಿದೇಶದಿಂದ ಇಲ್ಲಿ ಬಂದವರು ‘ಸ’ ಎಂಬ ಅಕ್ಷರವನ್ನು ‘ಹ’ ಎಂದು ಉಚ್ಚರಿಸುತ್ತಿದ್ದರು. ಅದಕ್ಕೆ ಸಿಂಧೂ ಜನರು ಎನ್ನುವ ಬದಲಾಗಿ ಹಿಂದೂ ಜನರು ಎಂದು ಕರೆದರೆಂದು ಇತಿಹಾಸಕಾರರು ಹೇಳುತ್ತಾರೆ. ಯುರೋಪಿನ ಭಾಷೆಯಲ್ಲಿ ‘ಸ’ ಎಂಬ ಅಕ್ಷರವು ‘ಹ’ ಎಂದು ಉಚ್ಚರಿಸಲ್ಪಡು ವುದನ್ನು ಗೋಳ್ವಲಕರರೂ ಕೂಡ ಒಪ್ಪುತ್ತಾರೆ. ಹಿಂದೂ ಎಂಬ ಶಬ್ದ ಸಂಪೂರ್ಣ ಪ್ರಾದೇಶಿಕ ವಾಗಿದೆ. ಸಿಂಧೂ ನದಿ ತೀರದಲ್ಲಿ ವಾಸಿಸು ವವರನ್ನು ವಿದೇಶಿಯರು ‘ಹಿಂದು’ ಗಳೆಂದು ತಪ್ಪಾಗಿ ಉಚ್ಚರಿಸಿದರು. ಇದು ಈ ನೆಲದ ಎಲ್ಲರಿಗೂ ಅನ್ವಯಿಸುವುದಿಲ್ಲ. ಇದಕ್ಕೆ ಗೋಳ್ವಲಕರ್ ತಮ್ಮ ಪುಸ್ತಕವೊಂದರಲ್ಲಿ ಉತ್ತರಿಸುತ್ತಾರೆ. ‘‘ಭಾರತೀಯ ಎಂಬ ಶಬ್ದ ಗೊಂದಲಕಾರಿಯಾಗಿದೆ. ‘ಹಿಂದೂ’ ಶಬ್ದವೊಂದೇ ತಮಗೆ ಸೂಕ್ತವಾದ ಅರ್ಥವನ್ನು ಸುಷ್ಪಷ್ಟವಾಗಿ ನೇರವಾಗಿ ಕೊಡುತ್ತದೆ’’ ಎಂದು ಅವರು ಹೇಳು ತ್ತಾರೆ. ಇದರ ಅರ್ಥವಿಷ್ಟೇ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣತ್ವವನ್ನು ಈ ದೇಶದ ಮೇಲೆ ಹೇರುವುದು ಇವರ ಹುನ್ನಾರವಾಗಿದೆ. ‘ಭಾರತೀಯ’ ಶಬ್ದದ ಅರ್ಥವು ಶಾಸನ ಪೂರ್ವ ವರ್ಗರಹಿತ ಸಮಾಜಕ್ಕೆ ಪೂರಕವಾಗಿದೆ. ಅದರಲ್ಲಿ ‘ಬ್ರಾಹ್ಮಣ’ ವರ್ಚಸ್ಸಿಗೆ ಜಾಗವಿಲ್ಲ. ‘ಹಿಂದೂ’ ಶಬ್ದವು ಬ್ರಾಹ್ಮಣ ವರ್ಚಸ್ಸಿಗೆ, ಸಂಸ್ಕೃತಿಗೆ ಪೂರಕವಾಗಿದೆ. ಅದಕ್ಕಾಗಿ ಅದಕ್ಕೆ ಇವರು ಇನ್ನಿಲ್ಲದ ಆದ್ಯತೆ ನೀಡುತ್ತಾರೆ.
ಹಿಂದುತ್ವ ಅಂದರೆ ಶ್ರೇಣೀಕೃತ ಜಾತಿ ವ್ಯವಸ್ಥೆ ಕಣ್ಣ ಮುಂದೆ ಬರುತ್ತದೆ. ಅದನ್ನು ಒಪ್ಪಿ ತಲೆಬಾಗಿ ನಡೆದರೆ ಅವರು ಭಾರತದ ರಾಷ್ಟ್ರೀಯವಾದಿ ಗಳಾಗುತ್ತಾರೆ. ಇಲ್ಲವಾದರೆ ರಾಷ್ಟ್ರ ವಿರೋಧಿ ಗಳಾಗುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಮುಂಬೈಯಲ್ಲಿ ನಡೆದ ಘಟನೆ. ಮುಂಬೈನ ಸೈಂಟ್ ಝೇವಿಯರ್ ಕಾಲೇಜಿನವರು ತಮ್ಮ ಕಾಲೇಜಿನ ವಾರ್ಷಿಕ ‘ಮಲ್ಹಾರ್’ ಉತ್ಸವಕ್ಕೆ ಪುಣೆಯ ದಲಿತ ಸಂಘಟನೆ ಕಾರ್ಯಕರ್ತೆ ಹಾಗೂ ಖ್ಯಾತ ಕ್ರಾಂತಿಕಾರಿ ಗಾಯಕಿ ಶೀತಲ್ ಸಾಠೆ ಅವರನ್ನು ಆಹ್ವಾನಿಸಿದ್ದರು. ಇದರಿಂದ ರೊಚ್ಚಿಗೆದ್ದ ಎಬಿವಿಪಿ ಸಂಘಟನೆ ‘ಶೀತಲ್ ಸಾಠೆ ನಕ್ಸಲೈಟ್. ಆಕೆ ರಾಷ್ಟ್ರದ್ರೋಹಿ’ ಎಂದು ಕರೆದು ಆಕೆಯನ್ನು ಭಾಷಣಕ್ಕೆ ಕರೆಸಿದರೆ ಕಾರ್ಯಕ್ರಮವನ್ನು ಹಾಳುಗೆಡಹುವುದಾಗಿ ಬೆದರಿಕೆ ಹಾಕಿತು.
ಈ ಎಬಿವಿಪಿ ಗೂಂಡಾಗಳ ಬೆದರಿಕೆಗೆ ಹೆದರಿದ ಸೈಂಟ್ ಝೇವಿಯರ್ ಕಾಲೇಜಿನ ಆಡಳಿತ
ವರ್ಗ ಶೀತಲ್ ಸಾಠೆ ಅವರಿಗೆ ನೀಡಿದ ಆಹ್ವಾನ ಪತ್ರವನ್ನು ವಾಪಸ್ಸು ಪಡೆದು ‘ಸಾರಿ’ ಕೇಳಿತು. ಆರೆಸ್ಸೆಸ್‌ನ ಈ ಪರಾಕ್ರಮಿ ವೀರರಿಗೆ ನೈತಿಕ ತಾಕತ್ತಿದ್ದರೆ ಶೀತಲ್ ಸಾಠೆಯನ್ನು ವೇದಿಕೆಯಲ್ಲಿ ಎದುರಿಸಿ, ಚರ್ಚಿಸಿ ಸೋಲಿಸಬಹುದಿತ್ತು. ಬೌದ್ಧಿಕ ಸಂವಾದದ ಮೂಲಕ ತಮ್ಮ ವಿಚಾರ ಪ್ರತಿಪಾದಿಸ ಬೇಕಿತ್ತು. ಅದನ್ನು ಬಿಟ್ಟು ಗೂಂಡಾಗಿರಿ ನಡೆಸುವ ಬೆದರಿಕೆ ಹಾಕಿ ಆಕೆಯ ಕಾರ್ಯಕ್ರಮ ರದ್ದು ಮಾಡಿದ್ದು ರಣಹೇಡಿತನವಲ್ಲದೆ ಬೇರೇನೂ ಅಲ್ಲ. ಅಸಹಾಯಕ ಆದಿವಾಸಿಗಳ ಪರವಾಗಿ, ದಲಿತರ ಪರವಾಗಿ, ಬಡವರ ಪರವಾಗಿ ಮಾತಾ ಡಿದರೆ, ಹಾಡಿದರೆ ಅದು ಈ ಹಿಂದುತ್ವ ಮುಖವಾಡದ ಬ್ರಾಹ್ಮಣಶಾಹಿಯ ಕಣ್ಣಿನಲ್ಲಿ ರಾಷ್ಟ್ರದ್ರೋಹವಾಗುತ್ತದೆ. ಆದರೆ ಗಾಂಧಿಯನ್ನು ಕೊಂದದ್ದು, ಬಾಬರಿ ಮಸೀದಿ ಕೆಡವಿ ಅಮಾಯಕರ ರಕ್ತ ಹರಿಸಿದ್ದು, ಭ್ರಷ್ಟ ಅಧಿಕಾರಿ ಗಳನ್ನು ಒಲೈಸುವುದು, ಗಣಿಗಾರಿಕೆ ಹೆಸರಿನಲ್ಲಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಕೆಲವರ ಖಜಾನೆ ತುಂಬುವುದು, ಅಂಬಾನಿ, ಅದಾನಿಗಳಿಗೆ ದೇಶದ ಸಂಪತ್ತು ಲೂಟಿ ಮಾಡಲು ಮುಕ್ತ ಅವಕಾಶ ನೀಡುವುದು ಇದ್ಯಾವುದೂ ಇವರ ದೃಷ್ಟಿಯಲ್ಲಿ ರಾಷ್ಟ್ರ ದ್ರೋಹವಲ್ಲ. ಯಾಕೆಂದರೆ ಅವರೆಲ್ಲ ಗುರುದಕ್ಷಿಣೆ ನೀಡುತ್ತಾರೆ. ಮೋಹನ್ ಭಾಗವತ್, ಮನೋಹರ ಪಾರಿಕ್ಕರ್, ಅಶೋಕ ಸಿಂಘಾಲ, ನರೇಂದ್ರ ಮೋದಿ, ಇವರೆಲ್ಲ ಕಟ್ಟ ಹೊರಟಿರುವ ಹಿಂದೂ ರಾಷ್ಟ್ರದಲ್ಲಿ ಶೀತಲ್ ಸಾಠೆ ಅವರಂಥ ಅಂಬೇಡ್ಕರ್ ವಾದಿ ಹೋರಾಟಗಾರ್ತಿಗೆ ಜಾಗವಿರುವುದಿಲ್ಲ. ಭಿನ್ನಮತವನ್ನು ಒಪ್ಪಿಕೊಳ್ಳದಿರುವುದೇ ಹಿಂದುತ್ವ. ಅಂತಲೆ ಅದು ಪ್ರಜಾಪ್ರಭುತ್ವದ ಪ್ರಥಮ ಶತ್ರು. ಬರಲಿರುವ ದಿನಗಳಲ್ಲಿ ಈ ಶತ್ರವಿನ ವಿರುದ್ಧ ಸಂಘರ್ಷಕ್ಕೆ ಮೊದಲ ಆದ್ಯತೆ ಸಿಗಬೇಕಾಗಿದೆ.
ಕೃಪೆ : ವಾರ್ತಾಭಾರತಿ

Leave a Reply