೫೮೦೦ ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ಹರಿವು ಕಾಲುವೆಗೆ ಚಿಂತನೆ- ಸಿ.ಎಂ. ಸಿದ್ದರಾಮಯ್ಯ

  ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ಸಮಸ್ಯೆ ಪರಿಹರಿಸಲು ೫೮೦೦ ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ಹರಿವು ಕಾಲುವೆ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಈ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
     ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕನಕಗಿರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ರೈಸ್ ಟೆಕ್ನಾಲಜಿ ಪಾರ್ಕ್ ಶಂಕುಸ್ಥಾಪನೆ, ಕೆರೆಗಳಿಗೆ ತುಂಗಭದ್ರಾ ನೀರು ತುಂಬಿಸುವ ಯೋಜನೆಯೂ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ತುಂಬುತ್ತಿರುವುದರಿಂದ, ೧೫೦ ಟಿ.ಎಂ.ಸಿ. ಸಾಮರ್ಥ್ಯದ ನೀರಿನ ಸಂಗ್ರಹ ಮಟ್ಟ ೧೦೦ ಟಿ.ಎಂ.ಸಿ.ಗೆ ಕುಸಿದಿದೆ. ನೀರಿನ ಕೊರತೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.   ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರವಾಹ ಹರಿವು ಕಾಲುವೆ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಈಗಾಗಲೆ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ.  ಯೋಜನೆಗೆ ಅಂದಾಜು ೫೮೦೦ ಕೋಟಿ ರೂ. ವೆಚ್ಚವಾಗಲಿದ್ದು, ಈ ಕುರಿತಂತೆ ಸರ್ಕಾರ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ.  ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ೫ ವರ್ಷಗಳಲ್ಲಿ ನೀರಾವರಿಗಾಗಿ ೫೦ ರಿಂದ ೬೦ ಸಾವಿರ ಕೋಟಿ ರೂ. ಗಳನ್ನು ವೆಚ್ಚಗೊಳಿಸಿ, ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು.  ೨೦೧೩-೧೪ ನೇ ಸಾಲಿನಲ್ಲಿ ೧೦. ೮ ಸಾವಿರ ಕೋಟಿ ರೂ. ಗಳನ್ನು ಸರ್ಕಾರ ನೀರಾವರಿ ಯೋಜನೆಗಳಿಗೆ ಬಿಡುಗಡೆ ಮಾಡಿದ್ದು, ೨೦೧೪-೧೫ ರಲ್ಲಿ ೧೧. ೧೩ ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುವ ಗುರಿ ಹೊಂದಲಾಗಿದೆ.  ಸಿಂಗಟಾಲೂರು ಏತ ನೀರಾವರಿ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ವಿಳಂಬವಾಗಿದ್ದು, ಈ ಮೊದಲು ಯೋಜನೆಯಡಿ ೧. ೭೦ ಲಕ್ಷ ಎಕರೆ ಮಾತ್ರ ನೀರಾವರಿಗೊಳಿಸುವ ಯೋಜನೆ ರೂಪಿಸಲಾಗಿತ್ತು.  ಆದರೆ ಇದೀಗ ಸೂಕ್ಷ್ಮ ನೀರಾವರಿ ಯೋಜನೆಯನ್ನಾಗಿ ಪರಿವರ್ತಿಸಲಾಗಿದ್ದು, ಇದರಿಂದ ೨. ೬೫ ಲಕ್ಷ ಎಕರೆ ನೀರಾವರಿಗೆ ಒಳಪಡಲಿದೆ.  ಒಟ್ಟು ೯೫ ಸಾವಿರ ಎಕರೆ ಹೆಚ್ಚುವರಿಯಾಗಿ ಅಚ್ಚುಕಟ್ಟು ವ್ಯಾಪ್ತಿಗೆ ಬರಲಿದೆ.  ಆದಷ್ಟು ತ್ವರಿತವಾಗಿ ಈ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.    ಜಿಲ್ಲೆಯ ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ತಾಲುಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು, ದೇವಲಾಪುರ ಸೇರಿದಂತೆ ಒಟ್ಟು ೦೮ ಕೆರೆಗಳನ್ನು ತುಂಗಭದ್ರಾ ನದಿಯಿಂದ ೦. ೨೮೧ ಟಿ.ಎಂ.ಸಿ. ನೀರು ಬಳಸಿ ಭರ್ತಿ ಮಾಡುವ ೧೪೧ ಕೋಟಿ ರೂ. ವೆಚ್ಚದ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದ್ದು, ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಈರುಳ್ಳಿ, ಮೆಕ್ಕೆಜೋಳಕ್ಕೆ ಶೀಘ್ರ ಬೆಂಬಲ ಬೆಲೆ : ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆ ದರ ಕುಸಿತದಿಂದ ರೈತರು ಆತಂಕಕ್ಕೆ ಸಿಲುಕಿದ ಬಗ್ಗೆ ವರದಿಗಳು ಬಂದಿದ್ದು, ಈಗಾಗಲೆ ಈ ಕುರಿತು ಸರ್ಕಾರ ಕ್ರಮ ಕೈಗೊಂಡಿದೆ.  ಶೀಘ್ರದಲ್ಲೇ ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಮಾಡುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು.  ಕಳೆದ ವರ್ಷ ಬೆಂಬಲ ಬೆಲೆ ಯೋಜನೆಯಡಿ ಒಟ್ಟು ೧೩ ಲಕ್ಷ ಟನ್ ಮೆಕ್ಕೆಜೋಳವನ್ನು ಸರ್ಕಾರ ಖರೀದಿಸಿತ್ತು. ಯಾವುದೇ ಕಾರಣಕ್ಕೂ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ವಿಶ್ವಾಸದ ನುಡಿಗಳನ್ನಾಡಿದರು.
ರೈಸ್ ಟೆಕ್ನಾಲಜಿ ಪಾರ್ಕ್ : ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರೈತರು ಹೆಚ್ಚಾಗಿ ಭತ್ತವನ್ನು ಬೆಳೆಯುತ್ತಿದ್ದು ಈ ಭಾಗ ಅನ್ನದ ಬಟ್ಟಲು ಎನಿಸಿಕೊಂಡಿದೆ.  ಭತ್ತ ಬೆಳೆಯುವ ರೈತರನ್ನು ಇನ್ನಷ್ಟು ಆರ್ಥಿಕವಾಗಿ ಸದೃಢಗೊಳಿಸಲು ರೈಸ್ ಟೆಕ್ನಾಲಜಿ ಪಾರ್ಕ್ ನೆರವಾಗಲಿದೆ.  ಭತ್ತದ ಉಪ ಉತ್ಪನ್ನಗಳ ತಯಾರಿಕೆಯಿಂದ ಭತ್ತಕ್ಕೆ ಮೌಲ್ಯವರ್ಧಿತ ಬೆಲೆ ದೊರೆತು, ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆ ವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
     ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿದರು.  ಕಾರ್ಮಿಕ ಸಚಿವ ಪರಮೇಶ್ವರ ನಾಯಕ್, ಶಾಸಕರುಗಳಾದ ಇಕ್ಬಾಲ್ ಅನ್ಸಾರಿ, ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.  ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸ್ವಾಗತಿಸಿದರು.
Please follow and like us:
error

Related posts

Leave a Comment