ಹುಲಿಗೆಮ್ಮ ದೇವಿ ಜಾತ್ರೆ : ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ :

ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್
ಕೊಪ್ಪಳ ಮೇ.೦೭ ಉತ್ತರ ಕರ್ನಾಟಕದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆಯು ವಿಜೃಂಭಣೆಯಿಂದ ನಡೆಯಲಿದ್ದು, ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ನೀರಿನ ಸಮಸ್ಯೆಯಾಗದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಹುಲಿಗೆಮ್ಮ ದೇವಿ ಜಾತ್ರೆ ಕುರಿತು ಪೂರ್ವಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ,  ಹುಲಿಗೆಮ್ಮಾ ದೇವಿಯ ಜಾತ್ರೆಯು ಅತಿ ವಿಜೃಂಭಣೆಯಿಂದ ಪ್ರತಿ ವರ್ಷ ಜರುಗುತ್ತಿದ್ದು, ಈ ಬಾರಿಯ ಜಾತ್ರಾ ಮಹೋತ್ಸವವು ಮೇ.೧೫ ರಿಂದ ೨೫ ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಈ ವರ್ಷ ಸುಮಾರು ೪ ಲಕ್ಷಕ್ಕೂ ಅಧಿಕ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಆಗಮಿಸುವ ನಿರೀಕ್ಷೆ ಇದೆ. ಬರುವ ಭಕ್ತರಿಗೆ ದೇವಸ್ಥಾನದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ,  ಹುಲಿಗಿ ಗ್ರಾಮದಲ್ಲಿ ಒಟ್ಟು ೦೫ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ೦೩ ಪಾರ್ಕಿಂಗ್‌ಗಳಲ್ಲಿ ಬೈಕ್ ಹಾಗೂ ತ್ರಿಚಕ್ರ ವಾಹನಗಳ ಬಿಡುವ ವ್ಯವಸ್ಥೆ, ೦೨ ಪಾರ್ಕಿಂಗ್ ಸ್ಥಳಗಳಲ್ಲಿ ಕಾರ್, ಟ್ರ್ಯಾಕ್ಸ್, ಬಸ್, ಲಾರಿ ಮೊದಲಾದವುಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಜಾತ್ರೆಗೆ ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಪ್ರತಿಯೊಂದು ಪಾರ್ಕಿಂಗ್ ಸ್ಥಳಗಳಲ್ಲಿ ೧೦ ಶೌಚಾಲಯ ಹಾಗೂ ೧೦ ಸ್ನಾನ ಗೃಹಗಳ ವ್ಯವಸ್ಥೆ ಮಾಡಲಾಗಿದೆ, ದೇವಸ್ಥಾನದ ಆವರಣದಲ್ಲಿ ೧೦ ಕ್ಕೂ ಅಧೀಕ ಸಿ.ಸಿ. ಕ್ಯಾಮೇರಾಗಳಿದ್ದು, ನಂದಿ ಸರ್ಕಲ್‌ನಿಂದ ದೇವಸ್ಥಾನದವರೆಗೆ ಜಿಲ್ಲಾಡಳಿತದಿಂದ ೧೦ ಸಿ.ಸಿ. ಟಿ.ವಿ. ಕ್ಯಾಮರಾಗಳನ್ನು ಅಳವಡಿಸಲಾಗುವುದು.  ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಮತ್ತು ಹೊಸಪೇಟೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು.  ಜಾತ್ರೆ ಸಂದರ್ಭದಲ್ಲಿ ಪ್ರಾಣಿಬಲಿ ಕೊಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಕಾರ್ಯವನ್ನು ದೇವಸ್ಥಾನ ಅಭಿವೃದ್ಧಿ ಸಮಿತಿಯ ಜೊತೆಗೆ ಜಿಲ್ಲಾಡಳಿತ ಕೈಜೋಡಿಸಲಿದ್ದು, ಜಾತ್ರೆಗೆ ಬರುವ ಭಕ್ತಾಧಿಗಳಿಗೆ ನೀರಿನ ಸಮಸ್ಯೆಯಾಗದಂತೆ ಸುಮಾರು ೧೦ ರಿಂದ ೧೫ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಭಕ್ತರಿಗೆ ಶುದ್ಧ ಕುಡಿಯುವ ನೀರು ಸಮಸ್ಯೆಯಾಗದಂತೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ. ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಹಿರಿಯರು ಹಾಗೂ ಪೊಲೀಸ್ ಅಧಿಕಾರಿಗಳು ಪ್ರಾಣಿಬಲಿ ನಿಷೇಧ ಕುರಿತು ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಕಳಕಳಿಯ ಮನವಿ ಮಾಡಿಕೊಂಡರು.  ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಮೂಲಭೂತ ಸೌಲಭ್ಯ ಒದಗಿಸಲು ಅಗತ್ಯ ಏರ್ಪಾಡುಗಳನ್ನು ಕೈಗೊಳ್ಳಲಾಗಿದೆ. ನಿರಂತರ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿಯ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ ಅವರು ಮನವಿ ಮಾಡಿಕೊಂಡರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸೆಪಟ್, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಹುಲಿಗೆಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ಹುಲಿಗಿ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು,  ಮುನಿರಾಬಾದ್ ಪೊಲೀಸ್ ಠಾಣೆಯ ಪಿ.ಎಸ್.ಐ. ಯರ್ರಿಸ್ವಾಮಿ ಇ, ವಿವಿಧ ಸಂಘಟಕರಾದ ಶಿವಾನಂದ ಹೊದ್ಲೂರು, ಮಂಜುನಾಥ ಗೊಂಡಬಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply