ಚುನಾವಣೆ : ಅಮಾನತಿಗೆ ಶಿಫಾರಸು : ವಿವಿಧ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ :ಹಗಲು-ರಾತ್ರಿ ನಿಗಾ : ಕಚೇರಿ ಕರ್ತವ್ಯಕ್ಕೆ ಅಡ್ಡಿಯಿಲ್ಲ :ಡಿ.ಸಿ. ಕೆ.ಪಿ. ಮೋಹನ್‌ರಾಜ್

ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ನಿಗಾ ವಹಿಸುವುದು ಸೇರಿದಂತೆ, ಅದರ ಪಾಲನೆ, ಉಲ್ಲಂಘನೆ ಮುಂತಾದ ವಿಷಯಗಳ ಬಗ್ಗೆ ಅಧಿಕಾರಿಗಳು ನಿಸ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಬೇಕು.  ನಿಯಮಾನುಸಾರ ಅಧಿಕಾರಿಗಳು ಕೈಗೊಳ್ಳುವ ಯಾವುದೇ ಕ್ರಮಕ್ಕೆ ಬೆಂಬಲ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಹೇಳಿದರು.

  ಚುನಾವಣೆ ಸಂಬಂಧಿಸಿದಂತೆ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಚುನಾವಣಾ ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಸೇರಿದಂತೆ ವಿವಿಧ ತಂಡಗಳ ಅಧಿಕಾರಿ, ಸಿಬ್ಬಂದಿಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಈಗಾಗಲೆ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇವರು ದಿನನಿತ್ಯ ಬೆಳಿಗ್ಗೆ ೧೦ ಗಂಟೆಯೊಳಗೆ ಆಯಾ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.  ರಾಜ್ಯ ಚುನಾವಣಾಧಿಕಾರಿಗಳಿಂದ ನಿತ್ಯ ಬರುವ ಸುತ್ತೋಲೆ, ನಿರ್ದೇಶನಗಳನ್ನು ಇ-ಮೇಲ್ ಮೂಲಕ ಕೂಡಲೆ ಮಾಹಿತಿ ಒದಗಿಸಲಾಗುವುದು.  ಅಧಿಕಾರಿಗಳು ಯಾವುದೇ, ಯಾರದೇ ಪ್ರಭಾವಕ್ಕೆ ಒಳಗಾಗುವ ಅಗತ್ಯವಿಲ್ಲ. ನಿಯಮಾನುಸಾರ ಅಧಿಕಾರಿಗಳು ಕೈಗೊಳ್ಳುವ ಯಾವುದೇ ಕಾರ್ಯಗಳಿಗೆ ಜಿಲ್ಲಾಡಳಿತದ ಬೆಂಬಲ ಇರುತ್ತದೆ ಎಂದರು. 
ಅಮಾನತಿಗೆ ಶಿಫಾರಸು :  ಚುನಾವಣೆ ಕರ್ತವ್ಯಕ್ಕೆ ಈಗಾಗಲೆ ನೇಮಕ ಮಾಡಲಾಗಿರುವ ಅಧಿಕಾರಿಗಳು, ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದಲ್ಲಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಸ್ಪಕ್ಷಪಾತದಿಂದ ಕರ್ತವ್ಯವನ್ನು ನಿರ್ವಹಿಸಬೇಕು.  ಅಲ್ಲದೆ ತರಬೇತಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ಬೀಜ ನಿಗಮದ ಅಧಿಕಾರಿಯನ್ನು ಅಮಾನತುಗೊಳಿಸಲು, ಚುನಾವಣಾ ಆಯೋಗದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ : ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸಭೆ, ಸಮಾರಂಭ, ರ‍್ಯಾಲಿ, ಪ್ರಚಾರ ಸಭೆ, ಮೆರವಣಿಗೆ,ಮೈಕ್‌ಸೆಟ್ ಇತ್ಯಾದಿಗಳಿಗಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ನಗರಸಭೆ, ಪೊಲೀಸ್ ಇಲಾಖೆ ಇತ್ಯಾದಿಗಳಲ್ಲಿ ಅನುಮತಿಗಾಗಿ ಅಲೆದಾಡುವುದನ್ನು ತಪ್ಪಿಸಲು, ಏಕಗವಾಕ್ಷಿ ವ್ಯವಸ್ಥೆ ಅಂದರೆ ಒಂದೇ ಸೂರಿನಡಿ ಅನುಮತಿ ಪಡೆಯುವಂತಹ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.  ನಗರಸಭೆ/ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಇದಕ್ಕಾಗಿ ನಿಯೋಜಿಸಲಾಗುತ್ತಿದ್ದು, ಒಂದೆಡೆ ಅನುಮತಿಗಾಗಿ ಅರ್ಜಿ ಸಲ್ಲಿಸಿದಲ್ಲಿ, ಅಗತ್ಯವಿರುವ ಪ್ರಾಧಿಕಾರದಿಂದ ಅನುಮತಿ ದೊರಕಿಸುವ ವ್ಯವಸ್ಥೆ ಕಲ್ಪಿಸಲಾಗುವುದು.  ಆದರೆ ಅನುಮತಿಗಾಗಿ ೪೮ ಗಂಟೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.  ಸಿಂಧನೂರು, ಮಸ್ಕಿ ಹಾಗೂ ಶಿರಗುಪ್ಪ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಂಬಂಧಿತ ಅನುಮತಿಯನ್ನು ಆಯಾ ಭಾಗದ ಚುನಾವಣಾಧಿಕಾರಿಗಳಿಂದಲೇ ಪಡೆಯಬೇಕು ಎಂದರು.
ಹಗಲು-ರಾತ್ರಿ ನಿಗಾ : ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಚುನಾವಣಾ ಅಧಿಕಾರಿಗಳ ನಂತರ, ಹೆಚ್ಚಿನ ಜವಾಬ್ದಾರಿಯನ್ನು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ವಹಿಸಿಕೊಡಲಾಗಿದೆ.  ಪ್ರತಿ ಹೋಬಳಿಗೆ ಒಂದರಂತೆ ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದ್ದು, ಈ ತಂಡದ ಮುಖ್ಯಸ್ಥರಿಗೆ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಚುನಾವಣಾ ಆಯೋಗವೇ ನೀಡಿದೆ.  ೮ ರಿಂದ ೧೦ ಮತಗಟ್ಟೆಗಳಿಗೆ ಒಬ್ಬರಂತೆ ಈಗಾಗಲೆ ಸೆಕ್ಟರ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ. ಪ್ರತಿ ಫ್ಲೈಯಿಂಗ್ ಸ್ಕ್ವಾಡ್ ತಂಡದಲ್ಲಿ ತಂಡದ ಮುಖ್ಯಸ್ಥರ ಜೊತೆಗೆ ಅಬಕಾರಿ, ಪೊಲೀಸ್ ಹಾಗೂ ಇತರೆ ಸಿಬ್ಬಂದಿಯನ್ನು  ವಿಡಿಯೋಕ್ಯಾಮೆರಾ ಸಹಿತ ಒದಗಿಸಲಾಗುವುದು.  ಈ ತಂಡವು ಹಗಲು-ರಾತ್ರಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಪಾಳಿಯಂತೆ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು.  ಸೆಕ್ಟರ್ ಅಧಿಕಾರಿಗಳು ತಮಗೆ ಸಂಬಂಧಪಟ್ಟ ಮತಗಟ್ಟೆಗಳಿಗೆ ಕೂಡಲೆ ಭೇಟಿ ನೀಡಿ, ಮತಗಟ್ಟೆಗಳ ಸ್ಥಿತಿ-ಗತಿಗಳ ಬಗ್ಗೆ ಭೌತಿಕ ಪರಿಶೀಲನೆ ನಡೆಸಬೇಕು.  ಮತದಾನಕ್ಕೆ ಬರುವ ಮತದಾರರಿಗೆ ಅಗತ್ಯ ನೆರಳಿನ ವ್ಯವಸ್ಥೆಗಾಗಿ ತಾತ್ಕಾಲಿಕ ಶೆಡ್ ಅಥವಾ ಶಾಮಿಯಾನ ಹಾಕಿಸುವ ಕುರಿತು ಕ್ರಮ ಕೈಗೊಳ್ಳಬೇಕು.  ರಸ್ತೆಯ ಅಕ್ಕ ಪಕ್ಕ, ಹಾಗೂ ಪ್ರಮುಖ ವೃತ್ತದಲ್ಲಿ ಯಾವುದೇ ಪಕ್ಷದ ಪೋಸ್ಟರ‍್ಸ್, ಬಂಟಿಂಗ್ ಹಾಕಿಸಲು ಅವಕಾಶವಿಲ್ಲ.  ಆಯಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಯುವ ಚುನಾವಣೆಯ ವಿವಿಧ ರಾಜಕೀಯ ಪಕ್ಷಗಳ, ಸಭೆ, ಸಮಾರಂಭ, ಕಾರ್ಯಕ್ರಮಗಳ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿಸಿ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಂಡುಬಂದಲ್ಲಿ ಲಿಖಿತ ವರದಿಯನ್ನು ದಾಖಲೆಯೊಂದಿಗೆ ಸಂಬಂಧಪಟ್ಟ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.  ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳ ಸ್ವೀಕೃತಿಗೆ ರಾಜ್ಯ ಮಟ್ಟದಲ್ಲಿ ೧೯೫೦ ದೂರವಾಣಿ ಸಂಖ್ಯೆ ಸಹಾಯವಾಣಿಯನ್ನು ಚುನಾವಣಾ ಆಯೋಗ ಪ್ರಾರಂಭಿಸಿದೆ.  ಇದೇ ರೀತಿ ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ೦೮೫೩೯-೨೨೫೦೦೨  ಸ್ಥಾಪಿಸಲಾಗಿದೆ ಎಂದರು.
ಕಚೇರಿ ಕರ್ತವ್ಯಕ್ಕೆ ಅಡ್ಡಿಯಿಲ್ಲ : ಶಾಸಕರು ಹಾಗೂ ಸಂಸದರ ಕಚೇರಿ ನಿರ್ವಹಣೆ ಕುರಿತಂತೆ ಚುನಾವಣಾ ಆಯೋಗಕ್ಕೆ ಸ್ಪಷ್ಟನೆಯನ್ನು ಕೋರಲಾಗಿದ್ದು, ಸ್ಪಷ್ಟೀಕರಣ ಬರುವವರೆಗೂ ಶಾಸಕರು, ಸಂಸದರು ತಮ್ಮ ಕಚೇರಿಗೆ ಸಂಬಂಧಿತ ಕರ್ತವ್ಯ ನಿರ್ವಹಿಸಲು ಯಾವುದೇ ಅಡ್ಡಿಯಿಲ್ಲ.  ಆದರೆ ಪಕ್ಷಗಳಿಗೆ ಸಂಬಂಧಿಸಿದ ಹಾಗೂ ರಾಜಕೀಯ ಚಟುವಟಿಕೆ ಮತ್ತು ಚುನಾವಣಾ ಸಂಬಂಧಿತ ಪ್ರತ್ಯಕ್ಷ ಅಥವಾ ಪರೋಕ್ಷ ಚಟುವಟಿಕೆ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ತಿಳಿಸಿದರು.
ಮತದಾರರ ಜಾಗೃತಿ : ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ಮೈಕ್ ಸೆಟ್ ಹಾಗೂ ಧ್ವನಿವರ್ಧಕ ವ್ಯವಸ್ಥೆಯುಳ್ಳ ವಾಹನವನ್ನು ಒದಗಿಸಲಾಗುತ್ತಿದ್ದು, ಈ ವ್ಯವಸ್ಥೆಯನ್ನು ಬಳಸಿಕೊಂಡು, ಮತದಾರರ ಜಾಗೃತಿ ಗೀತೆಗಳು ಹಾಗೂ  ಮಾಹಿತಿಯನ್ನು ಪ್ರಚುರಪಡಿಸುವ ಮೂಲಕ ಮತದಾರರನ್ನು ಜಾಗೃತಿಗೊಳಿಸುವ ಕಾರ್ಯ ಕೈಗೊಳ್ಳಬೇಕು ಎಂದರು.
  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ನಿಯೋಜಿತ ಸಹಾಯಕ ಚುನಾವಣಾಧಿಕಾರಿಗಳಾದ ಸಹಾಯಕ ಆಯುಕ್ತ ಮಂಜುನಾಥ್, ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್, ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಬಿ.ಎಂ. ಗದಗ, ಸಹಕಾರ ಸಂಘಗಳ ಉಪನಿಬಂಧಕ ಮುನಿಯಪ್ಪ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
    ನಿಯೋಜಿತ ಫ್ಲೈಯಿಂಗ್ ಸ್ಕ್ವಾಡ್, ಸೆಕ್ಟರ್ ಅಧಿಕಾರಿಗಳು, ಚೆಕ್‌ಪೋಸ್ಟ್ ಅಧಿಕಾರಿಗಳು, ಪೊಲೀಸ್, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿತ ತಂಡಗಳ ಅಧಿಕಾರಿ, ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

Related posts

Leave a Comment