You are here
Home > Koppal News > ಹಲಗೇರಿಯಲ್ಲಿ ಅದ್ದೂರಿ ಕನಕದಾಸರ ಜಯಂತಿ ಆಚರಣೆ

ಹಲಗೇರಿಯಲ್ಲಿ ಅದ್ದೂರಿ ಕನಕದಾಸರ ಜಯಂತಿ ಆಚರಣೆ

ಕೊಪ್ಪಳ: ಸಮೀಪದ ಹಲಗೇರಿಯಲ್ಲಿ ಕನಕದಾಸ ಯುವಕ ಸಂಘ, ಸಿರಿಗನ್ನಡ ಸಂಘದ ತಾಲೂಕಾ, ಜಿಲ್ಲಾ ಘಟಕ, ವರಸಿದ್ದಿ ವಿನಾಯಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕನಕದಾಸರ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ತಬಲಾ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾತ್ಯತೀತಿ ಜನತಾದಳದ ಮುಖಂಡ ಕೆ.ಎಂ.ಸೈಯ್ಯದ್ ಮಾತನಾಡಿ, ಸಮಾಜದಲ್ಲಿ ಮನೆ ಮಾಡಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಐಕ್ಯತೆಯನ್ನು ಮೂಡಿಸಿರುವ ಭಕ್ತ ಕನಕದಾಸರು, ನಾಡಿಗೆ ನೀಡಿದ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಸಮಾಜ ಏನು ಕೊಟ್ಟಿದೆ ಎನ್ನುವುದಕ್ಕಿಂತ, ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದನ್ನು ತಿಳಿಯಬೇಕು. ನಾವು ಉನ್ನತ ಸ್ಥಾನಕ್ಕೇರಬೇಕಾದರೆ, ಕನಕದಾಸರು ಸೇರಿದಂತೆ ಮಹಾತ್ಮರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿಯವರು ಮಾತನಾಡಿ, ಜಾತಿ, ಮತ, ಪಂಥಗಳನ್ನು ಹೊಡೆದೋಡಿಸಿ, ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಸಮಾಜದಲ್ಲಿ ಮೂಡಿಸಿದ ಭಕ್ತ ಕನಕದಾಸರು, ದಾಸಶ್ರೇಷ್ಠರಲ್ಲಿಯೇ ಮೊದಲಿಗರಾಗಿದ್ದಾರೆ ಎಂದು ಹೇಳಿದರು.
ಕನಕದಾಸರು ಅಂದು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ, ಸಮಾಜದಲ್ಲಿನ ಮೌಡ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. ಆದರೆ, ಇಂದು ಎಲ್ಲೆಡೆ ಮತ್ತೆ ಜಾತಿ ವ್ಯವಸ್ಥೆ ತಾಂಡವಾಡುತ್ತಿದೆ.  ಜಾತೀಯತೆ ಹೆಚ್ಚಾಗುತ್ತಿದೆ. ಇದನ್ನು ಹೋಗಲಾಡಿಸಲು ಶ್ರಮಿಸಬೇಕಾದ ಅವಶ್ಯಕತೆಯಿದೆ ಎಂದರು.
ಇನ್ನೋರ್ವ ಅತಿಥಿ ತಾಲೂಕಾ ಪಂಚಾಯ್ತಿ ಅಧ್ಯಕ್ಷ ಅಮರೇಶ ಉಪಲಾಪುರ ಮಾತನಾಡಿ, ಕನಕದಾಸರ ಜೀವನ ಚರಿತ್ರೆಯನ್ನು ಸಂಕ್ಪಿಪ್ತವಾಗಿ ಹೇಳಿದರಲ್ಲದೇ, ಸಹಬಾಳ್ವೆ ಮಾಡಲು ಇದು ಸೂಕ್ತ ಕಾಲ. ಮಹಾತ್ಮರ ತತ್ವಾದರ್ಶಗಳನ್ನು ಯುವಕರು, ವಿದ್ಯಾರ್ಥಿಗಳು ತಿಳಿದುಕೊಳ್ಳುವ ಮೂಲಕ ಅವುಗಳನ್ನು ಆಚರಣೆಗೆ ತರಬೇಕಾಗಿದೆ. ಮಹಾತ್ಮರ ತತ್ವಾದರ್ಶಗಳು, ಮೌಲ್ಯಗಳೇ ಮುಂದೆ ದಾರಿದೀಪವಾಗಲಿವೆ ಎಂದು ಅಭಿಪ್ರಾಯಪಟ್ಟರು.
ಕಸಾಪ ತಾಲೂಕಾಧ್ಯಕ್ಷ ಜಿ.ಎಸ್.ಗೋನಾಳ, ಹೋರಾಟಗಾರ ಶಿವಾನಂದ ಹೊದ್ಲೂರು ಮತ್ತಿತರರು ಮಾತನಾಡಿದರು. ಜಾನಪದ ಹಾಡುಗಾರ ಶರಣಪ್ಪ ವಡಗೇರಿ ಜಾನಪದ ಗೀತೆಗಳನ್ನು ಹಾಡಿದರು. ಹಾಸ್ಯ ಕಲಾವಿದ ವಂಶಂಪಾಯನ ನೆರೆದಿದ್ದ ಗ್ರಾಮಸ್ಥರ ಮನರಂಜಿಸಿದರು.
ಹಿರಯರಾದ ಬಸವರಾಜ ಆಕಳವಾಡಿ, ಯುವ ಮುಖಂಡ ಕೆ.ಎಂ.ಸೈಯ್ಯದ್, ಹಾಸ್ಯ ಕಲಾವಿದ ವಂಶಂಪಾಯನ, ಹೋರಾಟಗಾರ ಶಿವಾನಂದ ಹೊದ್ಲೂರು, ತಾ.ಪಂ ಅಧ್ಯಕ್ಷ ಅಮರೇಶ ಉಪಲಾಪುರ, ಜಾನಪದ ಕಲಾವಿದ ಶರಣಪ್ಪ ವಡಗೇರಿ, ಪತ್ರಕರ್ತರಾದ ನಾಗರಾಜ ಸುಣಗಾರ, ಆರ್.ಬಿ.ಸುಣಗಾರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತಾಲೂಕಾ ಪಂಚಾಯ್ತಿ ಸದಸ್ಯ ದೇವಪ್ಪ ಗುಡ್ಲಾನೂರ, ಗ್ರಾ.ಪಂ ಸದಸ್ಯರಾದ ಯಮನೂರಪ್ಪ ಬಾರಕೇರ, ಭೀಮಣ್ಣ ಓಲಾನೂರ, ಶರಣಪ್ಪ ಚಿಂತಾಮಣಿ, ಶ್ರೀಮತಿ ರೇಣುಕಾ ಪಾಟೀಲ, ಶ್ರೀಮತಿ ರೇಣುಕಾ ಮಡಿವಾಳರ, ಜಗ್ಗೇಶ ಓಜನಹಳ್ಳಿ, ಕುಬೇರಪ್ಪ ಗೊರವರ, ದೇವಪ್ಪ ಹಳ್ಳಿಕೇರಿ, ದೇವಪ್ಪ ಪೂಜಾರ, ಮುದಕಪ್ಪ ಒಲಾನೂರು, ಹನಮಂತಪ್ಪ ಅಬ್ಬಿಗೇರಿ, ದೇವಪ್ಪ ವದ್ಗನಾಳ, ಗುಡದಪ್ಪ ಬಣಪ್ಪನವರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಿರಗನ್ನಡ ಸಂಘದ ತಾಲೂಕಾಧ್ಯಕ್ಷ ಕರಿಯಪ್ಪ ಹಳ್ಳಿಕೇರಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಹನಮಂತ ಹಳ್ಳಿಕೇರಿ ವಂದಿಸಿದರು.
ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮೊದಲು ಗ್ರಾಮದಲ್ಲಿ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಎಲ್ಲ ಸಮಾಜದ ಮಹಾಪುರಷರ ಭಾವಚಿತ್ರಗಳಿಗೂ ಗೌರವ ನೀಡಿದ್ದು ವಿಶೇಷವಾಗಿತ್ತು. ಎತ್ತಿನ ಜೋಡಿ, ಸುಮಂಗಲೆಯರು ಆರತಿ, ಡೊಳ್ಳು ಕುಣಿತ, ಝಾಂಜ್ ಮೇಳದವರು ಮೆರವಣಿಗೆಗೆ ಮೆರಗು ತಂದರು.

Leave a Reply

Top