ಕೋಳೂರು ಗ್ರಾಮದಲ್ಲಿ ಜ. ೨೧ ರಿಂದ ಎನ್‌ಎಸ್‌ಎಸ್ ಶಿಬಿರ

  ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ತಾಲೂಕಿನ ಕೋಳೂರು ಗ್ರಾಮದಲ್ಲಿ ಜ. ೨೧ ರಿಂದ ೨೭ ರವರೆಗೆ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ನಡೆಯಲಿದೆ.
  ಜ. ೨೧ ರಂದು ಸಂಜೆ ೪ ಗಂಟೆಗೆ ಎನ್‌ಎಸ್‌ಎಸ್ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆ ತಾಂತ್ರಿಕ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಂಯೋಜನಾಧಿಕಾರಿ ಉಮಾಪತಿ ಅವರು ಶಿಬಿರದ ಉದ್ಘಾಟನೆ ನೆರವೇರಿಸುವರು.  ಶಾಸಕ ಸಂಗಣ್ಣ ಕರಡಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್, ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ಜಿ.ಪಂ. ಸದಸ್ಯೆ ಭಾಗೀರಥಿ ಶಂಕರಗೌಡ ಪಾಟೀಲ್, ಕೋಳೂರು ಗ್ರಾ.ಪಂ. ಅಧ್ಯಕ್ಷೆ ದೇವಮ್ಮ, ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಎಂ. ವೆಂಕಟರಾಮಿ ರೆಡ್ಡಿ ಅವರು ಅತಿಥಿಗಳಾಗಿ ಭಾಗವಹಿಸುವರು.  ಜ. ೨೨ ರಂದು ಹಿರೇಸಿಂದೋಗಿ ಸರ್ಕಾರಿ ಪ.ಪೂ. ಕಾಲೇಜು ಪ್ರಭಾರಿ ಪ್ರಾಂಶುಪಾಲ ಹನುಮಂತಪ್ಪ ಅಂಡಗಿ ಅವರಿಂದ ಜನಪದ ಸಾಹಿತ್ಯದಲ್ಲಿ ಹಾಸ್ಯ ಕುರಿತು ಉಪನ್ಯಾಸ ಕಾರ್ಯಕ್ರಮ, ಜ. ೨೩ ರಂದು ಭಾಗ್ಯನಗರ ಸರ್ಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ಸಿ.ವಿ. ಜಡಿಯವರ್ ಅವರಿಂದ ಗ್ರಾಮೀಣ ಸಂಸ್ಕೃತಿ, ಜ. ೨೪ ರಂದು ದದೇಗಲ್‌ನ ಶ್ರೀ ಸಿದ್ದಾರೂಢ ಮಠದ ಶ್ರೀ ಆತ್ಮಾನಂದ ಭಾರತಿ ಮಹಾಸ್ವಾಮಿಗಳಿಂದ ಮಾನವ ಜನ್ಮ ದೊಡ್ಡದು, ಜ. ೨೫ ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ವೆಂಕಟಪ್ಪ ನಾಯಕ ಅವರಿಂದ ಸಾರ್ವಜನಿಕರೊಂದಿಗೆ ಆರಕ್ಷಕರ ಸಂಬಂಧ ಹಾಗೂ ಕಾನೂನಿನ ಅರಿವು, ಜ. ೨೬ ರಂದು ನಿವೃತ್ತ ಪ್ರಾಂಶುಪಾಲ ಅಲ್ಲಮಪ್ರಭು ಬೆಟ್ಟದೂರ ಅವರಿಂದ ವಚನ ಸಾಹಿತ್ಯ ಕುರಿತು ಉಪನ್ಯಾಸ ಕಾರ್ಯಕ್ರಮಗಳು ನೆರವೇರಲಿವೆ. ಜ. ೨೭ ರಂದು ಸಮಾರೋಪ ಸಮಾರಂಭ ಜರುಗಲಿದೆ. 
Please follow and like us:
error