ಕೊಪ್ಪಳಕ್ಕೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಿ- ಎಂ. ಕನಗವಲ್ಲಿ ಸೂಚನೆ.

ಕೊಪ್ಪಳ ಫೆ. ೦೫ (ಕ ವಾ) ಕೊಪ್ಪಳ ನಗರಕ್ಕೆ ಬರುವ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕೊಪ್ಪಳ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕೊಪ್ಪಳ ನಗರಕ್ಕೆ ಕುಡಿಯುವ ನೀರಿನ ತೊಂದರೆಯಾಗಲಿರುವುದಾಗಿ ಮಾಧ್ಯಮಗಳಲ್ಲಿ ಇತ್ತೀಚೆಗೆ ವರದಿ ಪ್ರಕಟಗೊಂಡಿತ್ತು.  ಈ ಹಿನ್ನೆಲೆಯಲಿ ಕಾತರಕಿ ಬಳಿ ನಿರ್ಮಿಸಲಾಗಿರುವ ಜಾಕ್‌ವೆಲ್‌ನಿಂದ  ಕೊಪ್ಪಳ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ತುಂಗಭದ್ರಾ ಹಿನ್ನೀರಿನ ಸ್ಥಳಕ್ಕೆ ಶುಕ್ರವಾರದಂದು ಖುದ್ದು ಭೇಟಿ ನೀಡಿ, ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು.  ಮಳೆಯ ಕೊರತೆಯ ಕಾರಣ ಈ ವರ್ಷ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ತೀವ್ರ ಕುಸಿದಿದ್ದು, ಇದರಿಂದಾಗಿ ನದಿಯಲ್ಲಿಯೂ ಸಹ ನೀರಿನ ಹರಿವು ಇಲ್ಲವಾಗಿದೆ.  ಬೇಸಿಗೆಯಲ್ಲಿ ಕೊಪ್ಪಳ ನಗರಕ್ಕೆ ನೀರಿನ ಕೊರತೆ ಉಂಟಾಗುವ ಸಂಭವವಿದ್ದು, ಪರಿಸ್ಥಿತಿ ನಿರ್ವಹಣೆಗೆ, ಮುಂಜಾಗ್ರತಾ ಕ್ರಮವಾಗಿ ನದಿ ನೀರು ತಡೆಗೆ ರಿಂಗ್ ಬಂಡ್ (ತಡೆಗೋಡೆ) ನಿರ್ಮಿಸಲು ಕೂಡಲೆ ಕ್ರಮ ವಹಿಸಬೇಕು.  ಆದಾಗ್ಯೂ ನೀರಿನ ತೀವ್ರ ಅಭಾವವಾದಲ್ಲಿ, ಕುಡಿಯುವ ನೀರಿನ ಸಲುವಾಗಿ ಸಿಂಗಟಾಲೂರು ಬ್ಯಾರೇಜ್‌ನಿಂದ ನೀರು ಬಿಡುಗಡೆಗೊಳಿಸಲು ಜಿಲ್ಲಾಡಳಿತದ ವತಿಯಿಂದ ಯತ್ನಿಸಲಾಗುವುದು.  ಸದ್ಯ ರಿಂಗ್‌ಬಂಡ್ ನಿರ್ಮಾಣ
ಕಾರ್ಯವನ್ನು ಯದ್ಧೋಪಾದಿಯಲ್ಲಿ ಜಲಮಂಡಳಿ ಅಥವಾ ನಗರಸಭೆ ವತಿಯಿಂದ ನಿರ್ವಹಿಸಲು
ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು. 
     ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಶೇಖರ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಾಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error