You are here
Home > Koppal News > ಸಾಮಾಜಿಕ ಸಮಾನತೆಗಾಗಿ ಸಮೀಕ್ಷೆ ಸಹಕಾರಿ- ಆರ್.ಆರ್. ಜನ್ನು

ಸಾಮಾಜಿಕ ಸಮಾನತೆಗಾಗಿ ಸಮೀಕ್ಷೆ ಸಹಕಾರಿ- ಆರ್.ಆರ್. ಜನ್ನು

ಕೊಪ್ಪಳ ಏ. ೦೬: ಸಮಾನತೆ ಎಂಬುದು ಸಂವಿಧಾನ ನಮಗೆ ನೀಡಿರುವ ಹಕ್ಕಾಗಿದ್ದು, ಸಾಮಾಜಿಕ ಸಮಾನತೆಯ ನಿಟ್ಟಿನಲ್ಲಿ ಏ. ೧೧ ರಿಂದ ಪ್ರಾರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.
  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರದಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
  ಸಮಾನತೆ ಎಂಬುದು ಎಲ್ಲ ಜಾತಿ, ವರ್ಗದವರಿಗೆ ನಮ್ಮ ಸಂವಿಧಾನ ನೀಡಿರುವ ಹಕ್ಕಾಗಿದೆ.  ಸರ್ಕಾರದ ಯಾವುದೇ ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕಾದರೆ, ಮೀಸಲಾತಿ ಬಹುಮುಖ್ಯ ಪಾತ್ರ ವಹಿಸಲಿದೆ.  ಇಂತಹ ಮಹತ್ವದ ಪಾತ್ರ ವಹಿಸಲಿರುವ ಮೀಸಲಾತಿಯನ್ನು ಜಾರಿಗೊಳಿಸಲು, ನಿಖರ ಅಂಕಿ-ಅಂಶಗಳು ಬೇಕಾಗುತ್ತವೆ.  ಇಲ್ಲದಿದ್ದಲ್ಲಿ ಸೌಲಭ್ಯಗಳ ಪಡೆಯುವಿಕೆಯಲ್ಲಿ ಅಸಮಾನತೆ ಉಂಟಾಗುತ್ತದೆ.  ಅಸಮಾನತೆ ಅಥವಾ ಅಸಮತೋಲನದ ನಿವಾರಣೆಯ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏ. ೧೧ ರಿಂದ ಪ್ರತಿಯೊಂದು ವರ್ಗಗಳ, ಕುಟುಂಬಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳನ್ನು ಸಂಗ್ರಹಿಸುವ ಸಮೀಕ್ಷೆಯನ್ನು ಪ್ರಾರಂಭಿಸಲಿದ್ದು, ಈ ಸಮೀಕ್ಷೆಯಿಂದ ಸಂಗ್ರಹವಾಗುವ ಅಂಕಿ-ಅಂಶಗಳ ಆಧಾರದ ಮೇಲೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ, ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಎನ್ನುವ ಸದುದ್ದೇಶ ಈಡೇರಿದಂತಾಗುತ್ತದೆ.  ಸಮೀಕ್ಷೆಯ ಯಶಸ್ವಿಯಲ್ಲಿ ಸಾರ್ವಜನಿಕರ, ಸಂಘ ಸಂಸ್ಥೆಗಳ ಹಾಗೂ ಎಲ್ಲ ಸಮುದಾಯಗಳ ಮುಖಂಡರ ಪಾತ್ರ ಬಹು ಮುಖ್ಯವಾಗಿದ್ದು, ಸಮೀಕ್ಷೆಯ ಅಗತ್ಯತೆಯ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ.  ಈಗಾಗಲೆ ಕೊಪ್ಪಳ ಜಿಲ್ಲೆಯಲ್ಲಿ ನಡೆಸಿದ ಪ್ರಾಯೋಗಿಕ ಸಮೀಕ್ಷೆಯಲ್ಲಿ ಒಂದು ಕುಟುಂಬದ ಸಮಗ್ರ ಮಾಹಿತಿ ಸಂಗ್ರಹಿಸಲು ಕನಿಷ್ಟ ೪೦ ನಿಮಿಷಗಳು ಅಗತ್ಯ ಇರುವುದನ್ನು ಕಂಡುಕೊಳ್ಳಲಾಗಿದ್ದು, ಸಾರ್ವಜನಿಕರು, ತಮ್ಮ ಮನೆಗೆ ಬರುವ ಗಣತಿದಾರರಿಗೆ ತಾಳ್ಮೆಯಿಂದ ಸಮರ್ಪಕ ಮತ್ತು ನಿಖರವಾದ ಎಲ್ಲ ಮಾಹಿತಿಯನ್ನು ನೀಡಿ, ಸಮೀಕ್ಷೆಯ ಯಶಸ್ವಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ, ಹಲವು ಭಾಷೆ, ಸಂಸ್ಕೃತಿಗಳನ್ನು ಒಂದಕ್ಕೊಂದು ಪೂರಕವಾಗಿ ಬೆಸೆದಿರುವ ರಾಷ್ಟ್ರವಾಗಿದೆ.  ೧೯೩೧ ರ ನಂತರ ಇದುವರೆಗೂ ಹಿಂದುಳಿದ ವರ್ಗವಾರು, ಜಾತಿವಾರು ಸಮೀಕ್ಷಾ ಕಾರ್ಯ ವೈಜ್ಞಾನಿಕವಾಗಿ ರಾಷ್ಟ್ರ ಅಥವಾ ರಾಜ್ಯ ಮಟ್ಟದಲ್ಲಿ ನಡೆದಿಲ್ಲ.  ಇದರಿಂದಾಗಿ ಯಾವುದೇ ಹಿಂದುಳಿದ ವರ್ಗಗಳ ಸಂಖ್ಯೆ ಹಾಗೂ ಸ್ಥಿತಿ-ಗತಿಗಳು ಅಂದಾಜು ಆಧಾರದಲ್ಲಿಯೇ ಮಾಡಲಾಗುತ್ತಿದೆ.  ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ವಾಸ್ತವಿಕ ಮತ್ತು ಬಹಳಷ್ಟು ಸಂಕೀರ್ಣವಾಗಿದೆ.  ಈ ನಿಟ್ಟಿನಲ್ಲಿ ಎಲ್ಲ ಸಮಾಜದ ಹಿತಕಾಯಲು ಪೂರಕವಾದ ಯೋಜನೆಗಳ ಮೂಲಕ ಅಭಿವೃದ್ಧಿ ಪಡಿಸಲು ಸರ್ಕಾರ ಶ್ರಮಿಸುತ್ತಿದೆ.  ಈ ಅಭಿವೃದ್ಧಿ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಬೇಕಾಗಿದೆ.  ಆದರೆ ಯೋಜನೆಗಳನ್ನು ತಲುಪಿಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲ ಸಮಾಜ, ಜಾತಿ, ವರ್ಗದವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ನಿಖರ ಮತ್ತು ವೈಜ್ಞಾನಿಕವಾಗಿ ಸಂಗ್ರಹಿಸುವುದು ಅಗತ್ಯವಾಗಿದೆ.  ನಿಖರ ಅಂಕಿ-ಅಂಶಗಳ ಆಧಾರದ ಮೇಲೆ ಎಲ್ಲ ಸಮುದಾಯದ, ವರ್ಗದವರ ಅಭಿವೃದ್ಧಿಗೆ ವೇಗ ನೀಡಬಹುದಾಗಿದೆ ಅಲ್ಲದೆ ಪ್ರಸ್ತುತ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ನಿವಾರಿಸಬಹುದಾಗಿದೆ ಎಂದರು.
  ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಗತ್ಯತೆ ಮತ್ತು ಉದ್ದೇಶ ಕುರಿತು ಹಾಗು ಸಮೀಕ್ಷೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿ.ವಿ. ಜಡಿಯವರ್ ಅವರು ಸಮೀಕ್ಷೆಯ ಯಶಸ್ವಿಯಲ್ಲಿ ಸಾರ್ವಜನಿಕರು ಮತ್ತು ವಿವಿಧ ಸಮುದಾಯಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ವೇದಿಕೆ ಮೇಲೆ ಉಪಸ್ಥಿತರಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ನಾನಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಹಲವು ಸಮುದಾಯಗಳ ಮುಖಂಡರು, ಸ್ವ-ಸಹಾಯ ಗುಂಪುಗಳ ಸದಸ್ಯರು ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದರು.

Leave a Reply

Top