೯೪ ಅತಿಸೂಕ್ಷ್ಮ, ೬೫ ಸೂಕ್ಷ್ಮ, ೫೧ ಸಾಮಾನ್ಯ ಮತಗಟ್ಟೆಗಳು

ಕೊಪ್ಪಳ ಸೆ. ೧೩ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಸೆ. ೨೬ ರಂದು ನಡೆಯಲಿರುವ ಮತದಾನ ಪ್ರಕ್ರಿಯೆಗಾಗಿ ೨೧೦ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ ೯೪ ಮತಗಟ್ಟೆಗಳನ್ನು ಅತಿಸೂಕ್ಷ್ಮ, ೬೫ ಸೂಕ್ಷ್ಮ ಹಾಗೂ ೫೧ ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
  ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಯನ್ನು ನಿಷ್ಪಕ್ಷಪಾತದಿಂದ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ತೀವ್ರ ನಿಗಾ ವಹಿಸಲಾಗಿದೆ. ಕೊಪ್ಪಳ ಕ್ಷೇತ್ರದಲ್ಲಿ ೯೫೪೬೭ ಪುರುಷ ಹಾಗೂ ೯೨೭೨೯ ಮಹಿಳಾ ಮತದಾರರೂ ಸೇರಿದಂತೆ ಒಟ್ಟು ೧೮೮೧೯೬ ಮತದಾರರಿದ್ದಾರೆ.  ಪ್ರತಿ ಮತಗಟ್ಟೆಗೆ ಒಬ್ಬರಂತೆ ಒಟ್ಟು ೨೧೦ ಮತಗಟ್ಟೆ ಅಧಿಕಾರಿ, ಸೇರಿದಂತೆ ೮೪೦ ಸಿಬ್ಬಂದಿಗಳು ಹಾಗೂ ಶೇ. ೧೦ ರಷ್ಟು  ಅಂದರೆ ೮೪ ಹೆಚ್ಚುವರಿ ಸಿಬ್ಬಂದಿಗಳು ಸೇರಿದಂತೆ ಒಟ್ಟು ೯೨೪ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.  ಚುನಾವಣೆಗಾಗಿ ಕೆ.ಎಸ್.ಆರ್.ಟಿ.ಸಿ.ಯ ೨೫ ಬಸ್‌ಗಳು, ೧೬ ಮ್ಯಾಕ್ಸಿಕ್ಯಾಬ್‌ಗಳು, ೭೨ ಜೀಪುಗಳು ಹಾಗೂ ೦೧ ಲಾರಿ ಸೇರಿದಂತೆ ಒಟ್ಟು ೧೧೪ ವಾಹನಗಳನ್ನು ಬಳಸಲಾಗುವುದು.  ಮತದಾನ ಪ್ರಕ್ರಿಯೆಗಾಗಿ ಒಟ್ಟು ೨೧೦ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸಲು ಕ್ರಮ ಕೈಗೊಳ್ಳಲಾಗಿದ್ದು ೨೧ ಹೆಚ್ಚುವರಿ ಮತಯಂತ್ರಗಳನ್ನು ಕಾಯ್ದಿರಿಸಲಾಗುವುದು.  ಸಿಬ್ಬಂದಿಗಳಿಗೆ ತರಬೇತಿಗಾಗಿ ೧೦೦ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಒಟ್ಟಾರೆ ಉಪಚುನಾವಣೆಗಾಗಿ ೩೩೧ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.  ಮತದಾನ ದಿನವಾದ ಸೆ. ೨೬ ರಂದು ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವನ್ನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಆವರಣದಲ್ಲಿ ನಡೆಸಲಾಗುವುದು.  ಅಲ್ಲದೆ ಮತ ಎಣಿಕೆ ಕಾರ್ಯವನ್ನೂ ಸಹ ಇದೇ ಕಾಲೇಜಿನಲ್ಲಿ ನಡೆಸಲಾಗುವುದು.  ಈ ಕಾಲೇಜಿನಲ್ಲಿ ಎರಡು ಎಣಿಕಾ ಕೊಠಡಿಗಳನ್ನು ಸಿದ್ಧಗೊಳಿಸಲಾಗುತ್ತಿದ್ದು, ಪ್ರತಿ ಕೊಠಡಿಗೆ ೭ ಟೇಬಲ್‌ಗಳಂತೆ ಒಟ್ಟು ೧೪ ಟೇಬಲ್‌ಗಳನ್ನು ಸಿದ್ಧಪಡಿಸಲಾಗುವುದು.  ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಬಕಾರಿ- ೭, ಇತರೆ- ೩ ಸೇರಿದಂತೆ ಒಟ್ಟು ೧೦ ಪ್ರಕರಣಗಳು ದಾಖಲಾಗಿವೆ.  ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಇದು ದಿನದ ೨೪ ಗಂಟೆಗಳೂ ಕಾರ್ಯ ನಿರ್ವಹಿಸಲಿದೆ.  ಈ ಕೇಂದ್ರದ ದೂರವಾಣಿ ಸಂಖ್ಯೆ- ೨೨೫೦೦೨ ಆಗಿದ್ದು, ಈ ದೂರವಾಣಿಗೆ ಐ.ವಿ.ಆರ್.ಎಸ್. ತಂತ್ರಜ್ಞಾನ ಅಳವಡಿಸಲಾಗಿದೆ.  ಇದರಲ್ಲಿ ದೂರುಗಳ ಧ್ವನಿ ಕಂಪ್ಯೂಟರ್‌ನಲ್ಲಿ ದಾಖಲಿತವಾಗಿ ಸಂಗ್ರಹವಾಗಲಿದೆ.  ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನೂ ಈ ಕಂಟ್ರೋಲ್‌ರೂಂ.ಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದರು.
  ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ಮಾತನಾಡಿ,  ಪ್ರತಿ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಬಂದೋಬಸ್ತ್‌ಗಾಗಿ ಒಬ್ಬರು ಹೆಡ್‌ಕಾನ್ಸ್ಟೆಬಲ್, ೦೪ ಪೊಲೀಸ್ ಪೇದೆಗಳು ಹಾಗೂ ೨ ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗುವುದು.  ಅದೇ ರೀತಿ ಪ್ರತಿ ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬರು ಹೆಡ್‌ಕಾನ್ಸ್ಟೇಬಲ್, ೩ ಪೊಲೀಸ್ ಪೇದೆ ಹಾಗೂ ೨ ಹೋಂಗಾರ್ಡ್‌ಗಳನ್ನು, ಮತ್ತು ಪ್ರತಿ ಸಾಮಾನ್ಯ ಮತಗಟ್ಟೆಗಳಿಗೆ ಒಬ್ಬರು ಹೆಡ್‌ಕಾನ್ಸ್ಟೇಬಲ್, ೨ ಪೊಲೀಸ್ ಪೇದೆ ಹಾಗೂ ೨ ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗುವುದು.  ಚುನಾವಣೆ ವ್ಯಾಪ್ತಿಯಲ್ಲಿ ಒಟ್ಟು ೦೪ ಪೊಲೀಸ್ ಠಾಣೆಗಳಿದ್ದು, ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ೫೪, ಕೊಪ್ಪಳ ಗ್ರಾಮೀಣ ವ್ಯಾಪ್ತಿಗೆ ೪೫, ಮುನಿರಾಬಾದ್- ೫೧ ಹಾಗೂ ಕೊಪ್ಪಳ ನಗರ ಠಾಣೆ ವ್ಯಾಪ್ತಿಗೆ ೬೦ ಮತಗಟ್ಟೆಗಳು ಬರಲಿವೆ.  ಬಂದೋಬಸ್ತ್ ಕಾರ್ಯಕ್ಕಾಗಿ ಕೊಪ್ಪಳ ಜಿಲ್ಲೆಯಲ್ಲಿ ೫ ಡಿಎಸ್‌ಪಿ, ೮ ಸಿಪಿಐ, ೧೪ ಪಿಎಸ್‌ಐ, ೩೦ ಎಎಸ್‌ಐ, ೪೪ ಹೆಡ್‌ಕಾನ್ಸ್ಟೇಬಲ್ಸ್ ಹಾಗೂ ೧೨೧ ಪೊಲೀಸ್ ಪೇದೆಗಳು ಲಭ್ಯವಿದ್ದು, ಉಳಿದಂತೆ ಇತರೆ ಜಿಲ್ಲೆಗಳಿಂದ ೨ ಡಿಎಸ್‌ಪಿ, ೮ ಸಿಪಿಐ, ೨೧ ಪಿಎಸ್‌ಐ, ೩೬ ಎಎಸ್‌ಐ, ೧೭೮ ಹೆಡ್‌ಕಾನ್ಸ್ಟೇಬಲ್ಸ್, ೭೪೧ ಪೊಲೀಸ್‌ಪೇದೆಗಳು, ೫೦೦ ಹೋಂಗಾರ್ಡ್‌ಗಳನ್ನು ಕರೆಯಿಸಲಾಗುವುದು.  ಅಕ್ರಮ ಹಣ, ಮದ್ಯ, ಇನ್ನಿತರೆ ಸಾಮಗ್ರಿಗಳ ಸಾಗಾಣಿಕೆ ತಡೆಗಾಗಿ ಮುನಿರಾಬಾದ್, ಹೊಸೂರು ಕ್ರಾಸ್, ಅಗಳಕೇರಾ, ಬೆಳಗಟ್ಟೆ ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ೪೮ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಚೆಕ್‌ಪೋಸ್ಟ್‌ಗಳು ದಿನದ ೨೪ ಗಂಟೆಗಳೂ ಕಾರ್ಯ ನಿರ್ವಹಿಸಿ ತೀವ್ರ ತಪಾಸಣೆ ನಡೆಸಲಿವೆ ಎಂದು ವಿವರಿಸಿದರು.
  ಈ ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆ ನಿಗಾ ತಂಡದ ನೇತೃತ್ವ ವಹಿಸಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಆನಂದ್ ಅವರು ಉಪಸ್ಥಿತರಿದ್ದರು.
Please follow and like us:
error