ಮಿತಿಮೀರಿದ ಬಡ್ಡಿ ವ್ಯವಹಾರ ತಡೆಗೆ ಗ್ರಾ.ಪಂ. ಮಟ್ಟದಲ್ಲಿ ಸಮಿತಿ ರಚನೆ- ಎಂ. ಕನಗವಲ್ಲಿ ಸೂಚನೆ.

ಕೊಪ್ಪಳ ಜ. ೨೭ (ಕ ವಾ)  ಜಿಲ್ಲೆಯ ಗ್ರಾಮೀಣ ಮಟ್ಟದಲ್ಲಿ ಮಿತಿ ಮೀರಿದ ಬಡ್ಡಿ ವ್ಯವಹಾರ, ಅನಧಿಕೃತವಾಗಿ ಲೇವಾದೇವಿ ಹಾಗೂ ಚೀಟಿ ವ್ಯವಹಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಹಕಾರ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚಿಸಲು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕರ್ನಾಟಕ ಮನಿ ಲೆಂಡರ್‍ಸ್ ಕಾಯ್ದೆ, ಪಾನ್ ಬ್ರೋಕರ್‍ಸ್ ಕಾಯ್ದೆ, ಚಿಟ್ ಫಂಡ್ ಕಾಯ್ದೆ ಹಾಗೂ ಮಿತಿ ಮೀರಿದ ಬಡ್ಡಿ ನಿಷೇಧ ಕಾಯ್ದೆಗಳ ಪಾಲನೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಈಗಾಗಲೆ ರಾಜ್ಯದಲ್ಲಿ ಕರ್ನಾಟಕ ಮನಿ ಲೆಂಡರ್‍ಸ್ ಕಾಯ್ದೆ, ಪಾನ್ ಬ್ರೋಕರ್‍ಸ್ ಕಾಯ್ದೆ, ಚಿಟ್ ಫಂಡ್ ಕಾಯ್ದೆ ಹಾಗೂ ಮಿತಿ ಮೀರಿದ ಬಡ್ಡಿ ನಿಷೇಧ ಕಾಯ್ದೆಗಳ ಪಾಲನೆ ಕುರಿತು ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ಮತ್ತು ವಿಭಾಗೀಯ ಮಟ್ಟದ ಸಮಿತಿಗಳು ರಚನೆಯಾಗಿರುತ್ತವೆ.  ಸಹಕಾರ ಇಲಾಖೆಯು ಈಗಾಗಲೆ ಗ್ರಾಮ ಪಂಚಾಯತಿಮಟ್ಟದಲ್ಲಿಯೂ ಸಹಕಾರ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳನ್ನು ಒಳಗೊಂಡ ತ್ರಿಸದಸ್ಯ
ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಿದೆ.  ಇದರನ್ವಯ ಪ್ರತಿ ಗ್ರಾಮ ಪಂಚಾಯತಿ
ಮಟ್ಟದಲ್ಲಿ ಆಯಾ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ, ಆಯಾ ವ್ಯಾಪ್ತಿಯ ಪೊಲೀಸ್ ಸಬ್
ಇನ್ಸ್‌ಪೆಕ್ಟರ್ ಹಾಘೂ ಪಂಚಾಯತಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡ
ತ್ರಿ ಸದಸ್ಯ ಸಮಿತಿಯನ್ನು ಕೂಡಲೆ ರಚಿಸಬೇಕು.  ಮಿತಿ ಮೀರಿದ ಬಡ್ಡಿ ವ್ಯವಹಾರ,
ಅನಧಿಕೃತವಾಗಿ ಲೇವಾದೇವಿ ಹಾಗೂ ಚೀಟಿ ವ್ಯವಹಾರ ನಡೆಸಲಾಗುತ್ತಿರುವ ಬಗ್ಗೆ ಸಾರ್ವಜನಿಕರು
ತ್ರಿ ಸದಸ್ಯ ಸಮಿತಿಯ ಸದಸ್ಯರ ಗಮನಕ್ಕೆ ತರಬೇಕಾಗುತ್ತದೆ.  ಪ್ರತಿ ಗ್ರಾಮ
ಪಂಚಾಯತಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ದೂರು ಪೆಟ್ಟಿಗೆ ಇಡಲು ಅಗತ್ಯ ಕ್ರಮ
ಜರುಗಿಸಬೇಕು.  ಪ್ರತಿ ಏಳು ದಿನಕ್ಕೊಮ್ಮೆ ದೂರು ಪೆಟ್ಟಿಗೆಯನ್ನು ತೆರೆದು, ಮಿತಿ ಮೀರಿದ
ಬಡ್ಡಿ ವ್ಯವಹಾರ, ಅನಧಿಕೃತ ಲೇವಾದೇವಿ ಹಾಗೂ ಚೀಟಿ ವ್ಯವಹಾರ ನಡೆಸುತ್ತಿರುವುದಕ್ಕೆ
ಸಂಬಂಧಿಸಿದಂತೆ ಬರುವ ದೂರುಗಳನ್ನು ತ್ರಿ ಸದಸ್ಯ ಸಮಿತಿಯ ಸದಸ್ಯರ ಗಮನಕ್ಕೆ ತರಬೇಕು.  ಈ
ಸಮಿತಿಯು ಅಂತಹ ದೂರುಗಳ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಉಪಸ್ಥಿತರಿದ್ದ ಸಹಕಾರ ಸಂಘಗಳ ಉಪನಿಬಂಧಕ ಡಾ. ಉಮೇಶ್ ಅವರು ಮಾತನಾಡಿ, ಈಗಾಗಲೆ ತಮ್ಮ ಕಚೇರಿ ಹಾಗೂ ಸಹಾಯಕ ನಿಬಂಧಕರ ಕಚೇರಿಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಡಲಾಗಿದ್ದು, ಈವರೆಗೆ ಒಟ್ಟು ೬೮ ದೂರುಗಳು ಬಂದಿವೆ.  ಈ ಪೈಕಿ ೦೪ ದೂರುಗಳಿಗೆ ಎಫ್.ಐ.ಆರ್. ದಾಖಲಾಗಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ದೂರು ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ, ಎಪ್.ಐ.ಆರ್. ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ಪಶುಸಂಗೋಪನೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error