You are here
Home > Koppal News > ಡಾ: ರಾಜ್‌ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ – ಮುಖ್ಯಮಂತ್ರಿ ಸಿದ್ದರಾಮಯ್ಯ

ಡಾ: ರಾಜ್‌ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ – ಮುಖ್ಯಮಂತ್ರಿ ಸಿದ್ದರಾಮಯ್ಯ

  ಡಾ: ರಾಜ್‌ಕುಮಾರ್ ಅವರಿಗೆ ಅವರೇ ಸಾಟಿ. ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು.
ನಗರದ ಶ್ರೀ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಿರ್ಮಿಸಲಾಗಿರುವ ಡಾ. ರಾಜ್‌ಕುಮಾರ್ ಸ್ಮಾರಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಡಾ. ರಾಜ್‌ಕುಮಾರ್ ಅವರು ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಕಾಳಜಿ, ಗೌರವ ಹೊಂದಿದ್ದರು. ಅವರ ಬದುಕು, ನಡೆ, ನುಡಿ, ಜೀವನ ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ. ರಾಜ್‌ಕುಮಾರ್ ಅವರ ನೇತ್ರದಾನದಿಂದ ಪ್ರೇರಿತರಾಗಿ ತಾವೂ ನೇತ್ರದಾನ ಮಾಡುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದರು. ಅಲ್ಲದೆ ಘೋಷಣಾ ಪತ್ರಕ್ಕೂ ಈ ಸಂದರ್ಭದಲ್ಲಿ ಸಹಿ ಮಾಡಿದರು.
ಹಿರಿಯ ನಟಿ ಡಾ. ಬಿ. ಸರೋಜಾದೇವಿ ಅವರು ಮಾತನಾಡಿ ನಾನು ಬಹಳ ನಟರೊಂದಿಗೆ ನಟಿಸಿದ್ದೇನೆ. ಆದರೆ ರಾಜ್ ಅವರಂತಹ ಸರಳ ಜೀವಿಯನ್ನು ನೋಡಿಲ್ಲ.  ರಾಜ್ ಅಣ್ಣಾವ್ರು ಇಷ್ಟು ಎತ್ತರಕ್ಕೆ ಬೆಳೆಯಲು ಅವರ ಪತ್ನಿ ಪಾರ್ವತಮ್ಮ ಅವರೇ ಕಾರಣ.  ಅವರ ಅಗತ್ಯವನ್ನು ತುಂಬ ಮುತುವರ್ಜಿ ವಹಿಸಿ ಪೂರೈಸುತ್ತಿದ್ದರು ಎಂದು ತಿಳಿಸಿದರು.  ಹಾಗೆಯೇ ತಾವು ರಾಜ್ ಅವರೊಂದಿಗೆ ನಟಿಸಿದ ಭಾಗ್ಯವಂತರು, ಅಣ್ಣತಂಗಿ, ನ್ಯಾಯವೇ ದೇವರು ಮುಂತಾದ ಚಿತ್ರಗಳ ಬಗ್ಗೆ ಸ್ಮರಿಸಿದರು.
ಡಾ: ರಾಜ್‌ಕುಮಾರ್ ಅವರ ಅಭಿಮಾನಿಗಳಲ್ಲಿ ನಾನು ಒಬ್ಬ ಅಭಿಮಾನಿಯಾಗಿ ಅವರ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದೇನೆ ಎಂದು ತಿಳಿಸಿದ ತಮಿಳು ಮೇರು ನಟ ರಜನೀಕಾಂತ್ ಅವರು, 1927 ರಲ್ಲಿ ಬ್ರಹ್ಮನು ತೇಲಿಬಿಟ್ಟ ಮಳೆಹನಿಯು ಮೋಡದಲ್ಲಿ ಚಲಿಸುತ್ತಾ ಬಂದು ಕನ್ನಡ ನಾಡಿನ ಗಾಜನೂರಿನಲ್ಲಿ ಬಿದ್ದ ಕಾರಣ ಜನಿಸಿದ ಅಪರೂಪದ ಅಶ್ವ ಅವರು. ಹಲವಾರು ಸಾಧು-ಸಂತರು ,  ಅಸುರರಾದ ಹಿರಣ್ಯ ಕಷ್ಯಪು, ಮಹಿಷಾಸುರ ಹಾಗೂ ಜೇಮ್ಸ್‌ಬಾಂಡ್‌ಗಳೂ ಈ ಅಶ್ವದ ಸವಾರಿ ಮಾಡಿದ್ದಾರೆ. ಇಷ್ಟು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವ ಸಾಮರ್ಥ್ಯ ಅವರೊಬ್ಬರಿಗೇ ಇದೆ.  ಅದು ನನ್ನಿಂದಲೂ ಕೂಡ ಸಾಧ್ಯವಿಲ್ಲ.  ಭಕ್ತ ಅಂಬರೀಷ್ ಪಾತ್ರವೊಂದರಲ್ಲಿ ಮಾಡಬೇಕೆಂಬ ಅವರ ಆಸೆ ಮಾತ್ರ ಹಾಗೆಯೇ ಉಳಿಯಿತು ಎಂದು ಡಾ. ರಾಜ್‌ಕುಮಾರ್ ಅವರ ಬಾಳ ಹಾದಿಯನ್ನು ತೆರೆದಿಟ್ಟರು. ಶಾಲಾದಿನಗಳಲ್ಲಿ ಡಾ. ರಾಜ್ ಅವರ ಆಟೋಗ್ರಾಫ್ ಪಡೆದುಕೊಂಡಿದ್ದನ್ನು ನೆನೆಪಿಸಿಕೊಂಡ ಅವರು, ನಾನು ಬೇರೆ ಯಾರ ಆಟೋಗ್ರಾಫ್ ಕೂಡ ಪಡೆದಿಲ್ಲ ಎಂದರು.
’ರಾಜ್‌ಕುಮಾರ್ ಸ್ಫೂರ್ತಿ’:  ನಟನಾಗಿ ನನಗೆ ಡಾ. ರಾಜ್‌ಕುಮಾರ್ ಅವರೇ ಸ್ಫೂರ್ತಿ ಎಂದ ಖ್ಯಾತ ತೆಲುಗು ನಟ,  ಚಿರಂಜೀವಿ ಅವರು, ರಾಜ್‌ಕುಮಾರ್ ಅವರ ಸರಳತೆ, ಸಜ್ಜನಿಕೆ, ಹೃದಯ ವೈಶಾಲ್ಯವನ್ನು ತುಂಬು ಹೃದಯದಿಂದ ಸ್ಮರಿಸಿಕೊಂಡರು. ತಾವು ಫಿಲ್ಮ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಯಾಗಿ ಡಾ. ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದಾಗ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಬಗೆಯನ್ನು ವಿವರಿಸಿದ   ಚಿರಂಜೀವಿ, ಸರಳತೆಯಿಂದಲೇ ಶ್ರೇಷ್ಠರಾಗುತ್ತೇವೆ ಎಂಬ ಮಾತಿಗೆ ಡಾ. ರಾಜ್ ಉತ್ತಮ ನಿದರ್ಶನ ಎಂದು ಬಣ್ಣಿಸಿದರು.
ಡಾ. ರಾಜ್‌ಕುಮಾರ್ ಅವರ ಕೊನೆಯ ದಿನಗಳನ್ನು ನೆನಪಿಸಿಕೊಂಡ ಅವರ ಪುತ್ರ ಹಾಗೂ  ಡಾ. ರಾಜ್‌ಕುಮಾರ್ ಪ್ರತಿಷ್ಠಾನದ ಸದಸ್ಯ   ರಾಘವೇಂದ್ರ ರಾಜ್‌ಕುಮಾರ್ ಅವರು, ’ಅಪ್ಪಾಜಿ ಇಂದು ನಮ್ಮ ನಡುವೆ ಇಲ್ಲದಿದ್ದರೂ, ದಾನ ಮಾಡಿದ ಅವರ ಕಣ್ಣುಗಳು ಇಂದಿಗೂ ನಮ್ಮನ್ನೆಲ್ಲ ನೋಡುತ್ತಿವೆ’ ಎಂದು ಮಾರ್ಮಿಕವಾಗಿ ನುಡಿದರು. ನೇತ್ರದಾನ ಹಾಗೂ ರಕ್ತದಾನ ಮಾಡುವಂತೆ ಅಭಿಮಾನಿಗಳಲ್ಲಿ ವಿನಂತಿಸಿದರು.
ಕೇಂದ್ರ ಕಾನೂನು ಸಚಿವ   ಡಿ.ವಿ. ಸದಾನಂದ ಗೌಡ ಅವರು ಮಾತನಾಡಿ, ಗೋಕಾಕ ಚಳವಳಿಗೆ ಯಶಸ್ವಿ ಚಾಲನೆ ನೀಡಿದ್ದು ಡಾ. ರಾಜ್‌ಕುಮಾರ್ ಅವರೇ ಎಂದು ಸ್ಮರಿಸಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ  ಆರ್. ರೋಷನ್‌ಬೇಗ್ ಅವರು ಡಾ. ರಾಜ್‌ಕುಮಾರ್ ಅವರು ಕನ್ನಡದ ಆಸ್ತಿ. ಅವರ ನಟನಾ ಚಾತುರ್ಯದಿಂದ ಎಂತಹ ಪಾತ್ರವನ್ನೂ ನಿಭಾಯಿಸುತ್ತಿದ್ದರು. ಕನ್ನಡದ ಅಭಿಮಾನದಿಂದಾಗಿ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಅಭಿನಯಿಸಲಿಲ್ಲ. ಡಾ. ರಾಜ್‌ಕುಮಾರ್ ಮತ್ತು ಕನ್ನಡ ಚಿತ್ರರಂಗ ಜೊತೆಯಾಗಿಯೇ ಬೆಳೆದು ಬಂದಿವೆ ಎಂದು ತಿಳಿಸಿದರು. ಮಹಾಲಕ್ಷ್ಮಿಪುರಂ ಶಾಸಕ ಶ್ರೀ ಗೋಪಾಲಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಸ್ವಾಗತಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ  ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ವಂದಿಸಿದರು. ಸಮಾರಂಭದಲ್ಲಿ ಸಾರಿಗೆ ಸಚಿವ   ರಾಮಲಿಂಗಾರೆಡ್ಡಿ, ಗೃಹ ಸಚಿವ   ಕೆ.ಜೆ. ಜಾರ್ಜ್, ವಸತಿ ಸಚಿವ   ಅಂಬರೀಷ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ   ದಿನೇಶ್ ಗುಂಡೂರಾವ್, ಬೆಂಗಳೂರು ಮಹಾಪೌರರಾದ ಶ್ರೀಮತಿ ಶಾಂತಕುಮಾರಿ,   ಕಂಠೀರವ ಸ್ಟುಡಿಯೋ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಅರಸ್, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ತಾರಾ ಅನೂರಾಧ, ಶ್ರೀಮತಿ ಜಯಮಾಲ,   ಜಗ್ಗೇಶ್,   ಇ. ಕೃಷ್ಣಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶ್ರೀ ಗಂಗರಾಜು, ಡಾ. ರಾಜ್‌ಕುಮಾರ್ ಪ್ರತಿಷ್ಠಾನದ ಸದಸ್ಯ  ರಾಕ್‌ಲೈನ್ ವೆಂಕಟೇಶ್,  ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್,   ಶಿವರಾಜ್‌ಕುಮಾರ್,  ಪುನೀತ್ ರಾಜ್‌ಕುಮಾರ್, ಅವರ ಕುಟುಂಬದ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಚಿತ್ರೋದ್ಯಮದ ಗಣ್ಯರು ಉಪಸ್ಥಿತರಿದ್ದರು.

Leave a Reply

Top