‘ಮುತ್ತೈದೆ’ ಶಬ್ದ ನಿಷೇಧವಾಗಲಿ

ಇತ್ತೀಚೆಗೆ ಮಂಗಳೂರಿನಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಒಂದು ಘೋಷಣೆಯನ್ನು ಮಾಡಿದರು. ‘‘ಈ ಬಾರಿ ಮಂಗಳೂರು ದಸರಾ ಕಾರ್ಯಕ್ರಮದ ಮಂಗಳ ಕಾರ್ಯಗಳನ್ನು ವಿಧವೆಯರ ಕೈಯಲ್ಲೇ ಮಾಡಿಸಲಾಗುವುದು. ಅವರಿಗೆ ಶುಭ ಸಂಕೇತಗಳಾದ ಕುಂಕುಮ, ಹೂವು ಇತ್ಯಾದಿಗಳನ್ನೂ ನೀಡಲಾಗುವುದು’’ ಹೀಗೆಂದು ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಅವರು ಭಾರೀ ವಿರೋಧಗಳನ್ನು ಕಟ್ಟಿಕೊಳ್ಳಬೇಕಾಯಿತು. ಜನಾರ್ದನ ಪೂಜಾರಿಯವರು ತಮ್ಮ ವಿತಂಡ ಮಾತುಗಳಿಗಾಗಿ ಹಲವರ ನಿಷ್ಠುರ ಕಟ್ಟಿಕೊಂಡದ್ದಿದೆ. ಹಲವು ಬಾರಿ ಹಾಸ್ಯಾಸ್ಪದ ಹೇಳಿಕೆ ನೀಡಿ, ತಮ್ಮ ಕಾರ್ಯಕರ್ತರಿಗೇ ಮುಖ ಮುಚ್ಚಿ ಓಡಾಡುವ ಪರಿಸ್ಥಿತಿಯನ್ನು ತಂದೊಡ್ಡುತ್ತಾರೆ. ಆದರೆ ಸದ್ಯ ಮಂಗಳೂರಿ ನಲ್ಲಿರುವ ಕೆಲವೇ ಕೆಲವು ನೇರ, ನಿಷ್ಠುರ ನುಡಿಯ ರಾಜಕಾರಣಿಗಳಲ್ಲಿ ಜನಾರ್ದನ ಪೂಜಾರಿಯೂ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವೊಮ್ಮೆ ಸಮಾಜದ ಮುಂದೆ ಪ್ರಗತಿಪರರು, ಸ್ವಾಮೀಜಿಗಳು ಎಂದು ಕರೆಸಿಕೊಳ್ಳುವವರು ಹೇಳಬೇಕಾದ ಮಾತುಗಳನ್ನು ಜನಾರ್ದನ ಪೂಜಾರಿಯವರು ಆಡಿ, ಎಲ್ಲರನ್ನೂ ಬೆಕ್ಕಸಬೆರಗಾಗಿಸುವುದಿದೆ. ಅಂತಹದೊಂದು ಹೇಳಿಕೆಯು ಇತ್ತೀಚೆಗೆ ಅವರ ಬಾಯಿಯಿಂದ ಹೊರ ಬಿದ್ದಿದೆ.
‘‘ಮಂಗಳೂರು ದಸರಾವನ್ನು ವಿಧವೆಯ ಕೈಯಿಂದಲೇ ಉದ್ಘಾಟಿಸುತ್ತೇನೆ’’ ಎಂಬಂತಹ ಹೇಳಿಕೆಯನ್ನು ನೀಡಿರುವ ಜನಾರ್ದನ ಪೂಜಾರಿ, ಇಡೀ ಬಿಲ್ಲವ ಸಮುದಾಯಕ್ಕೆ ಮಾತ್ರವಲ್ಲ, ನಾರಾಯಣ ಗುರುವನ್ನು ಗೌರವಿಸುವ ಸಕಲರೂ ಹೆಮ್ಮೆ ಪಡುವಂತಹ ಹೇಳಿಕೆಯನ್ನು ನೀಡಿದ್ದಾರೆ. ವಿಧವೆಯರ ಕೈಯಲ್ಲಿ ದಸರಾವನ್ನು ಉದ್ಘಾಟಿಸಲು ಸಾಧ್ಯವಾಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಇಂತಹದೊಂದು ಹೇಳಿಕೆಯನ್ನು ನೀಡಿ, ನಮ್ಮ ಸಮಾಜದೊಳಗೆ ಇನ್ನೂ ಕಂದಾಚಾರ, ಮೌಢ್ಯಗಳನ್ನು ಪೋಷಿಸಿಕೊಂಡು ಬರುತ್ತಿರುವ ವೈದಿಕಶಾಹಿಯ ವಿರುದ್ಧ ಅವರು ಚಾಟಿ ಬೀಸಿರುವುದು ಶ್ಲಾಘನಾರ್ಹವೇ ಸರಿ.
ವಿಷಾದನೀಯ ಸಂಗತಿಯೆಂದರೆ, ಬುದ್ಧಿವಂತರ ಜಿಲ್ಲೆಯೆಂದು ಕರೆಸಿಕೊಂಡ ಮಂಗಳೂರಿನಲ್ಲಿ ತಕ್ಷಣವೇ ಇದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಹಲವರು ತಕ್ಷಣ ಪೂಜಾರಿಯವರನ್ನು ಪರೋಕ್ಷವಾಗಿ ಸಂಪರ್ಕಿಸಿ, ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಡ ಹೇರಿದ್ದಾರೆ. ಆದರೆ ಇಲ್ಲಿ ನಾವು ಚರ್ಚಿಸಬೇಕಾದುದು, ಜನಾರ್ದನ ಪೂಜಾರಿಯವರು ದಸರಾವನ್ನು ಪತಿಯನ್ನು ಕಳೆದುಕೊಂಡ ಮಹಿಳೆಯರಿಂದ ಉದ್ಘಾಟಿಸುವ ಕುರಿತಂತಲ್ಲ. ಈಗಲೂ ನಮ್ಮ ಸಮಾಜದ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರು ಅಸ್ಪೃಶ್ಯರಾಗಿದ್ದಾರೆ. ಇದು ಕೇವಲ ಖಾಸಗಿ ಧಾರ್ಮಿಕ ಸಮಾರಂಭಗಳಲ್ಲಾಗಿದ್ದರೆ ಸಾರ್ವಜನಿಕವಾಗಿ ಚರ್ಚಿಸದೇ, ಆಯಾ ಧರ್ಮೀಯರ ನಡುವೆಯ ಚರ್ಚೆಗೆ ಬಿಟ್ಟು ಬಿಡಬಹುದಿತ್ತು.
ಆದರೆ ಇಂದು ಸಾರ್ವಜನಿಕವಾಗಿ ನಡೆಯುವ ಸರಕಾರಿ ಕಾರ್ಯಕ್ರಮಗಳಲ್ಲೂ ಈ ‘ವಿಧವೆ’ ‘ಮುತ್ತೈದೆ’ ಎನ್ನುವ ಭೇದಗಳನ್ನು ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ‘ಪೂರ್ಣಕುಂಭ ಸ್ವಾಗತ’ ಎಂಬ ಹೆಸರಿನಲ್ಲಿ ‘ಮುತ್ತೈದೆ’ ಎಂಬ ಹಣೆಪಟ್ಟಿ ಕಟ್ಟಿಕೊಂಡವರಿಗೆ ವಿಶೇಷ ಗೌರವ ನೀಡಿ, ಅವರ ಮೂಲಕವೇ ಆ ಕಾರ್ಯಕ್ರಮ ವನ್ನು ನೆರವೇರಿಸಿರುವುದು, ಪರೋಕ್ಷವಾಗಿ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಅವಮಾನಿಸಿದಂತೆ ತಾನೆ? ಪತಿಯನ್ನು ಕಳೆದುಕೊಂಡವರನ್ನು ಗೌರವದಿಂದ ಕಾಣಬೇಕು ಎನ್ನುವುದು ಒಂದು ದೃಷ್ಟಿಕೋನವಾದರೆ, ಮುತ್ತೈದೆಯರಿಂದಲೇ ನಡೆಸುವ ಮಂಗಳ ಕಾರ್ಯಕ್ರಮ ಪರೋಕ್ಷವಾಗಿ, ಪತಿಯಿಲ್ಲದವರನ್ನು ಅಮಂಗಳೆಯರು ಎಂದು ಕರೆದಂತೆಯೇ ತಾನೆ?
ಇದೀಗ ಮೈಸೂರು ದಸರಾ ಆರಂಭವಾಗಿದೆ. ಅಲ್ಲಿಯೂ ಮಂಗಳ ಕಾರ್ಯಕ್ರಮದಲ್ಲಿ ‘ಮುತ್ತೈದೆ’ಯರಿಗೇ ಆದ್ಯತೆ. ಪೂರ್ಣ ಕುಂಭ ಸ್ವಾಗತದಿಂದ ಹಿಡಿದು, ಎಲ್ಲ ಶುಭ ಕಾರ್ಯಕ್ರಮಗಳ ನೇತೃತ್ವವನ್ನು ಈ ‘ಮುತ್ತೈದೆ’ಯರು ನೆರವೇರಿಸುತ್ತಾರೆ. ಮೈಸೂರು ದಸರಾವನ್ನು ನಾವು ನಾಡಹಬ್ಬ ಎಂದು ಕರೆಯುತ್ತೇವೆ. ನಾಡ ಹಬ್ಬದ ಹೆಸರಿನಲ್ಲಿ ನಡೆಯುತ್ತಿರುವುದು ರಾಜಪ್ರಭುತ್ವ ಮತ್ತು ವೈದಿಕರ ವಿಜೃಂಭಣೆಯೇ ಆಗಿದ್ದರೂ ಸರಕಾರ ಇದರ ಆಚರಣೆಗೆ ಕೋಟಿ ಕೋಟಿ ಹಣವನ್ನು ಸುರಿಯುತ್ತದೆ. ಸರಕಾರದ ಹಣದಿಂದ ನಡೆಯುತ್ತಿರುವ ಕಾರ್ಯಕ್ರಮ ಎನ್ನುವ ದೃಷ್ಟಿಯಿಂದಲಾದರೂ ಮುತ್ತೈದೆಯರನ್ನಷ್ಟೇ ಶುಭಕಾರ್ಯಕ್ರಮಗಳಿಗೆ ಆಯ್ಕೆ ಮಾಡುವ ಪದ್ಧತಿಯನ್ನು ಇಲ್ಲವಾಗಿಸಬಹುದಲ್ಲವೆ? ಕೆಲವು ಸರಕಾರಿ ಕಾರ್ಯಕ್ರಮಗಳಲ್ಲೂ ಈ ಮುತ್ತೈದೆಯರನ್ನು ವೈಭವೀಕರಿಸುವ ಪ್ರಯತ್ನ ನಡೆಯುತ್ತದೆ. ಈ ಕಂಪ್ಯೂಟರ್ ಯುಗದಲ್ಲಿರುವ ನಾವು ಇನ್ನೂ ಮಾನಸಿಕವಾಗಿ ಮನುವಿನ ಕಾಲದಲ್ಲೇ ಇದ್ದೇವೆ ಎಂದ ಮೇಲೆ ನಮ್ಮ ಅಭಿವೃದ್ಧಿಗೆ, ಪ್ರಗತಿಗೆ ಅರ್ಥವಾದರೂ ಏನು?
ವಿಧವೆಯರನ್ನು ಬರ್ಬರವಾಗಿ ನಡೆಸಿಕೊಳ್ಳುವ ಸಂಸ್ಕೃತಿ ಭಾರತದಲ್ಲಿ ಬಿಟ್ಟರೆ ಇನ್ನೆಲ್ಲೂ ಕಂಡು ಬರುವುದಿಲ್ಲ. ಇದು ಅಪ್ಪಟ ವೈದಿಕ ಸಂಸ್ಕೃತಿ. ಯಾವ ಕಾರಣಕ್ಕೂ ಭಾರತೀಯ ಸಂಸ್ಕೃತಿ ಹೆಣ್ಣನ್ನು ಹೀನಾಯವಾಗಿ ನಡೆಸಲು ಆಸ್ಪದ ಕೊಡುವುದಿಲ್ಲ. ಗಂಡ ಸತ್ತ ಹೆಣ್ಣಿನ ಕುರಿತಂತೆ ಹೀನಾಯ ಶಬ್ದಗಳಿರುವುದು ಭಾರತದಲ್ಲಿ ಮಾತ್ರ. ಅವನ್ನು ತೊಲಗಿಸಬೇಕಾಗಿದೆ. ಮಾತ್ರವಲ್ಲ, ‘ಮುತ್ತೈದೆ’ ಎನ್ನುವ ಶಬ್ದದ ಹಿರಿತನವನ್ನೂ ನಾವು ಇಲ್ಲವಾಗಿಸಬೇಕಾಗಿದೆ. ಈ ಹಿಂದೆ ಹೇಗೆ ಹರಿಜನ, ಹೊಲೆಯ ಎಂಬ ಶಬ್ದಗಳು ನಿಷೇಧಿಸಲ್ಪಟ್ಟಿತೋ ಹಾಗೆಯೇ ನಾವು ಮುತ್ತೈದೆ ಎನ್ನುವ ಶಬ್ದವನ್ನೂ ನಿಷೇಧಿಸಬೇಕಾಗಿದೆ.
ವಿಧವೆ ಶಬ್ದವನ್ನು ನಿಷೇಧಿಸಿದರೆ, ಅದಕ್ಕೆ ಪರ್ಯಾಯವಾಗಿ ಈ ದೇಶದಲ್ಲಿ ನೂರಾರು ಶಬ್ದಗಳನ್ನು ವೈದಿಕ ಕಂದಾಚಾರಿಗಳು ಹುಟ್ಟಿಸಿ ಹಾಕಿದ್ದಾರೆ. ಆದುದರಿಂದ, ನಾವು ‘ವಿಧವೆ’ಯ ಕಳಂಕವನ್ನು ಹೋಗಲಾಡಿಸುವುದಕ್ಕಿಂತ ‘ಮುತ್ತೈದೆ’ಯ ಹಿರಿತನವನ್ನು ಹೋಗಲಾಡಿಸ ಬೇಕಾಗಿದೆ. ಅದಕ್ಕೆ ಸರಕಾರ ಮುಂದೆ ಬರಬೇಕು. ಮುಖ್ಯವಾಗಿ ‘ಮುತ್ತೈದೆ’ ಎನ್ನುವ ಶಬ್ದಕ್ಕೇ ನಿಷೇಧ ಹೇರಬೇಕು. ಗಂಡನನ್ನು ಕಳೆದುಕೊಂಡವರು ಮತ್ತು ಗಂಡ ಇದ್ದವಳು ಸಮಾನರು ಎಂದಾದಮೇಲೆ ವಿಧವೆ ಶಬ್ದದ ಅಗತ್ಯ ಹೇಗೆ ಇಲ್ಲವೋ, ಹಾಗೆಯೇ ಮುತ್ತೈದೆ ಎನ್ನುವ ಶಬ್ದದ ಅಗತ್ಯವೂ ಇಲ್ಲ. ತಕ್ಷಣ ನಮ್ಮ ಪ್ರಗತಿಪರ ಮಹಿಳೆಯರು, ಮಹಿಳಾ ಕಲ್ಯಾಣ ಇಲಾಖೆ, ಮಾನವ ಹಕ್ಕು ಆಯೋಗ ಮೊದಲಾದ ಸಂಸ್ಥೆಗಳು ಇದನ್ನು ಜಾರಿಗೊಳಿಸಲೋಸುಗ ಮೈದಾನಕ್ಕಿಳಿಯಬೇಕು.
ಯಾವುದೇ ಹೆಣ್ಣನ್ನು ವಿಧವೆ, ಮುತ್ತೈದೆ ಎಂದು ಸಾರ್ವಜನಿಕವಾಗಿ ಕರೆದರೆ ಅವರ ವಿರುದ್ಧ ಮೊಕದ್ದಮೆ ಹೂಡುವಂತಾಗಬೇಕು. ಗಂಡನನ್ನು ಕಳೆದು ಕೊಂಡರೂ ಇಂದಿರಾಗಾಂಧಿ, ಸೋನಿಯಾ ಗಾಂಧಿಯಂತಹ ಮಹಿಳೆಯರು ಈ ದೇಶವನ್ನು ಯಾವುದೇ ಗಂಡಿಗೆ ಸಮನಾಗುವಂತೆ ಮುನ್ನಡೆಸಿದ್ದಾರೆ. ಇಂತಹ ಮಹಿಳಾಮಣಿಗಳು ಈ ದೇಶಕ್ಕೆ ಮಾದರಿಯಾಗಬೇಕು. – ಸಂಪಾದಕೀಯ – ವಾರ್ತಾಭಾರತಿ
Please follow and like us:
error