ವಿಧಾನಪರಿಷತ್ ಚುನಾವಣೆ ಮತದಾರರಿಗೆ ಸೂಚನೆಗಳು.

ಕೊಪ್ಪಳ ಡಿ. ೨೬ (ಕ ವಾ) ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. ೨೭ ರಂದು ಮತದಾನ ನಡೆಯಲಿದ್ದು, ಮತ ಚಲಾವಣೆ ಸಂದರ್ಭದಲ್ಲಿ ಮತದಾರರು ಅನುಸರಿಸುವ ವಿಧಾನಗಳ ಬಗ್ಗೆ ಮತದಾರರಿಗೆ ಸೂಚನೆಗಳನ್ನು ನೀಡಲಾಗಿದೆ.
          ಮತ ಚಲಾಯಿಸುವ ಸಂದರ್ಭದಲ್ಲಿ ಮತದಾನ ಕೇಂದ್ರದಲ್ಲಿ ಮತಪತ್ರದೊಡನೆ ನೀಡಲಾಗುವ ನೇರಳೆ ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಿ ಮತ ಚಲಾಯಿಸಬೇಕು.  ಬೇರೆ ಯಾವುದೇ ಪೆನ್ನು, ಪೆನ್ಸಿಲ್, ಬಾಲ್ ಪಾಯಿಂಟ್ ಪೆನ್ ಅಥವಾ ಗುರುತು ಮಾಡುವ ಯಾವುದೇ ಇತರ ಸಾಧನವನ್ನು ಬಳಸಿ ಮತ ಚಲಾಯಿಸಿದಲ್ಲಿ, ಅಂತಹ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುವುದು.  ಮತದಾರರು ತಮ್ಮ ಮೊದಲನೆ ಪ್ರಾಶಸ್ತ್ಯವಾಗಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ಅಂತಹ ಅಭ್ಯರ್ಥಿಯ ಹೆಸರಿನ ಮುಂದೆ ಒದಗಿಸಲಾಗಿರುವ “ಪ್ರಾಶಸ್ತ್ಯಕ್ರಮ” ಎಂದು ಗುರುತು ಮಾಡಲಾಗಿರುವ ಅಂಕಣದಲ್ಲಿ ಅಂಕಿ “೧” ಅನ್ನು ಗುರುತು ಹಾಕುವ ಮೂಲಕ ಮತ ನೀಡಬೇಕು. ಈ ಅಂಕಿ “೧” ಅನ್ನು ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು.  ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಚುನಾಯಿಸಬೇಕಿದ್ದ ಪಕ್ಷದಲ್ಲಿ ಸಹ, ಅಂಕಿ “೧” ಅನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು. ಉಳಿದ ಅಭ್ಯರ್ಥಿಗಳಿಗೆ ತಮ್ಮ ಮುಂದಿನ ಪ್ರಾಶಸ್ತ್ಯಗಳನ್ನು ಗುರುತು ಹಾಕುವುದಕ್ಕಾಗಿ, ಅಂತಹ ಅಭ್ಯರ್ಥಿಗಳ ಹೆಸರುಗಳ ಮುಂದೆ ಒದಗಿಸಲಾಗಿರುವ ಪ್ರಾಶಸ್ತ್ಯಕ್ರಮ ಎಂಬ ಅಂಕಣದಲ್ಲಿ ತರುವಾಯದ ಅಂಕಿಗಳಾದ ೨, ೩, ೪ ಇತ್ಯಾದಿಗಳನ್ನು ಪ್ರಾಶಸ್ತ ಕ್ರಮದಲ್ಲಿ ಗುರುತು ಹಾಕುವ ಮೂಲಕ ತಮ್ಮ ಮತ ನೀಡಬೇಕು.  ಚುನಾಯಿಸಬೇಕಾಗಿರುವ ಅಭ್ಯರ್ಥಿಗಳ ಸಂಖ್ಯೆ ಎಷ್ಟೇ ಇದ್ದರೂ, ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆಯಷ್ಟೇ ಪ್ರಾಶಸ್ತ್ಯಗಳನ್ನು ಮತದಾರರು ಹೊಂದಿರುತ್ತಾರೆ.  ಉದಾಹರಣಗೆ: ಚುನಾಯಿಸಬೇಕಾಗಿರುವ ಸ್ಥಾನ ಒಂದು ಅಥವಾ ಎರಡು ಆಗಿದ್ದು, ಐದು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಲ್ಲಿ, ಪ್ರಾಶಸ್ತ್ಯದ ಕ್ರಮದಲ್ಲಿ ಐದು ಪ್ರಾಶಸ್ತ್ಯಗಳನ್ನು ಗುರುತು ಹಾಕಬಹುದು.  ಮತದಾರರು ಮತ ಚಲಾಯಿಸುವಾಗ ಅಭ್ಯರ್ಥಿಯ ಹೆಸರಿನ ಮುಂದೆ ಕೇವಲ ಒಂದು ಅಂಕಿಯನ್ನು ಮಾತ್ರ ತಾವು ಗುರುತು ಹಾಕಿರುವುದನ್ನು ಖಚಿತಪಡಿಸಿಕೊಳ್ಳಬೇಕು.  ಮತ್ತು ಅದೇ ಅಂಕಿಯನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳ ಮುಂದೆ ಗುರುತು ಹಾಕಿರುವುದಿಲ್ಲ ಎಂಬುದನ್ನು ಸಹ ಖಚಿತಪಡಿಸಿಕೊಳ್ಳಬೇಕು. 
           ಪ್ರಾಶಸ್ತ್ಯವನ್ನು ಅಂಕಿಗಳ ಮೂಲಕ ಮಾತ್ರ ಎಂದರೆ, ೧, ೨, ೩, ಇತ್ಯಾದಿ ಕ್ರಮದಲ್ಲಿ ಮಾತ್ರ ಗುರುತು ಹಾಕಬೇಕು.  ಇದರ ಬದಲಾಗಿ ಒಂದು, ಎರಡು, ಮೂರು, ಇತ್ಯಾದಿ ಅಕ್ಷರಗಳ ರೂಪದಲ್ಲಿ ಬರೆಯಬಾರದು.  ಅಂಕಿಗಳನ್ನು ೧, ೨, ೩ ಇತ್ಯಾದಿ ಅಂತಾರಾಷ್ಟ್ರೀಯ ರೂಪದ ಭಾರತೀಯ ಅಂಕಿಗಳಲ್ಲಿ ಅಥವಾ I, II, III ಇತ್ಯಾದಿ ರೋಮನ್ ಅಂಕಿಗಳ ರೂಪದಲ್ಲಿ ಅಥವಾ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಮಾನ್ಯ ಮಾಡಲಾಗಿರುವ ಭಾರತದ ಯಾವುದೇ ಭಾಷೆಯಲ್ಲಿ ಬಳಸಲಾಗುವ ಅಂಕಿಗಳ ರೂಪದಲ್ಲಿ ಗುರುತು ಹಾಕಬಹುದಾಗಿದೆ.  ಮತಪತ್ರದ ಮೇಲೆ ಮತದಾರರು ತಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬಾರದು ಮತ್ತು ತಮ್ಮ ಸಹಿ ಅಥವಾ ಇನ್ಷಿಯಲ್‌ಗಳನ್ನು ಅಥವಾ  ತಮ್ಮ ಹೆಬ್ಬೆಟ್ಟಿನ ಗುರುತನ್ನೂ ಹಾಕಬಾರದು.  ಒಂದು ವೇಳೆ ಈ ರೀತಿ ಮಾಡಿದಲ್ಲಿ, ಅಂತಹ ಮತಪತ್ರ ಅಸಿಂಧುವಾಗುತ್ತದೆ. ತಮ್ಮ ಪ್ರಾಶಸ್ತ್ಯವನ್ನು ಸೂಚಿಸುವುದಕ್ಕಾಗಿ, ತಮ್ಮ ಆಯ್ಕೆಯ ಅಭ್ಯರ್ಥಿಗಳ ಹೆಸರುಗಳ ಮುಂದೆ ಅಂಕಿಯನ್ನಲ್ಲದೇ ಇನ್ನಾವುದೇ ಚಿಹ್ನೆಅಥವಾ “ಘಿ” ಗುರುತನ್ನು ಹಾಕಬಾರದು.  ಅಂತಹ ಮತಪತ್ರವನ್ನು ತಿರಸ್ಕರಿಸಲಾಗುವುದು.  ಆದ್ದರಿಂದ, ತಮ್ಮ ಪ್ರಾಶಸ್ತ್ಯಗಳನ್ನು ಈ ಮೇಲೆ ವಿವರಿಸಿರುವಂತೆ ೧, ೨, ೩ ಇತ್ಯಾದಿ ಅಂಕಿಗಳಲ್ಲಿ ಮಾತ್ರ ಸೂಚಿಸಬೇಕು.  ಮತಪತ್ರವನ್ನು ಸಿಂಧು ಎಂದು ಪರಿಗಣಿಸುವುದಕ್ಕಾಗಿ ಅಭ್ಯರ್ಥಿಗಳ ಪೈಕಿ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಅಂಕಿ “೧” ಅನ್ನು ಗುರುತು ಹಾಕುವ ಮೂಲಕ ಮತದಾರರು ತಮ್ಮ ಮೊದಲ ಪ್ರಾಶಸ್ತ್ಯವನ್ನು ಸೂಚಿಸುವುದು ಅವಶ್ಯಕವಾಗಿರುತ್ತದೆ. ಮತದಾರರು ತಮ್ಮ ಎರಡನೆಯ ಅಥವಾ ತರುವಾಯದ ಪ್ರಾಶಸ್ತ್ಯಗಳನ್ನು ಸೂಚಿಸಬಹುದಾಗಿದೆ ಅಥವಾ ಸೂಚಿಸದೇಯೂ ಇರಬಹುದಾಗಿದೆ.
ಅಸಿಂಧುಗೊಳ್ಳುವ ಮತಪತ್ರಗಳು : ಮತಪತ್ರವು, ಈ ಮುಂದೆ ವಿವರಿಸಿರುವ ಯಾವುದೇ ಒಂದು ಕಾರಣದಿಂದ ಅಸಿಂಧುವಾಗುತ್ತದೆ. ಮೊದಲನೆಯ ಪ್ರಾಶಸ್ತ್ಯವನ್ನುಅಂಕಿಯಲ್ಲಿಅಂದರೆ, ೧ ಅನ್ನು ಗುರುತು ಹಾಕದಿದ್ದರೆ.  ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಮುಂದೆ ಅಂಕಿ ೧ ಅನ್ನು ಗುರುತು ಹಾಕಿದರೆ.  ನಮೂದಿಸಿರುವ ಮೊದಲನೆ ಪ್ರಾಶಸ್ತ್ಯ ಯಾವ ಅಭ್ಯರ್ಥಿಗೆ ಅನ್ವಯವಾಗುತ್ತದೆ ಎಂಬುದನ್ನು ನಿರ್ಣಯಿಸುವುದು ಅನುಮಾನವಾದಾಗ. ಅಂಕಿ ೧ ಅನ್ನು ಮತ್ತು ೨, ೩, ಇತ್ಯಾದಿ ಇತರ ಅಂಕಿಗಳನ್ನು ಸಹ ಒಬ್ಬನೇ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಹಾಕಿದರೆ. ಪ್ರಾಶಸ್ತ್ಯಗಳನ್ನು ಅಂಕಿಗಳ ಬದಲಾಗಿ ಅಕ್ಷರಗಳಲ್ಲಿ ಬರೆದಿದ್ದರೆ. ಮತದಾರನನ್ನು ಗುರುತಿಸಬಹುದಾದ ಯಾವುದೇ ಚಿಹ್ನೆ ಅಥವಾ ಬರಹವುಳ್ಳ ಮತಪತ್ರ. ಅಂಕಿಗಳನ್ನು ಗುರುತು ಹಾಕುವ ಉದ್ದೇಶಕ್ಕಾಗಿ ಚುನಾವಣಾಧಿಕಾರಿಯು ಒದಗಿಸಿದ ನೇರಳೆ ಬಣ್ಣದ ಸ್ಕೆಚ್ ಪೆನ್ನಿನ ಬದಲಾಗಿ, ಬೇರೆ ಯಾವುದೇ ಬಣ್ಣದ ಪೆನ್ನು ಅಥವಾ ಇತರ ಸಾಧನದಿಂದ ಅಂಕಿಯನ್ನು ಗುರುತು ಹಾಕಿದರೆ ಅಂತಹ ಮತ ಅಸಿಂಧುಗೊಳ್ಳುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

Please follow and like us:
error