ಯುವ ಸಂಸತ್ ಸ್ಪರ್ಧೆ : ಕಲಾಪದಲ್ಲಿ ಸದ್ದು ಮಾಡಿದ ಕಂಪ್ಯೂಟರ್ ಶಿಕ್ಷಣ ನೀತಿ

ಎಲ್ಲ ನೇಮಕಾತಿಗಳಲ್ಲಿ ಕಂಪ್ಯೂಟರ್ ತರಬೇತಿ ಕಡ್ಡಾಯಗೊಳಿಸಲಾಗಿದ್ದರೂ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಂಪ್ಯೂಟರ್ ಕಲಿಕೆಗೆ ಸರ್ಕಾರ ಯಾವುದೇ ಸೂಕ್ತ ವ್ಯವಸ್ಥೆ ಕೈಗೊಳ್ಳದೇ ಇರುವ ಕ್ರಮಕ್ಕೆ ವಿಧಾನಮಂಡಲ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.     ಇದು, ನಿಜವಾಗಿಯೂ ವಿಧಾನಮಂಡಲ ಕಲಾಪದಲ್ಲಿ ಜರುಗಿದ ಘಟನೆಯಲ್ಲ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯ.     ಜಿಲ್ಲೆಯ ವಿವಿಧ ತಾಲೂಕುಗಳ ಪ್ರೌಢಶಾಲಾ ವಿದ್ಯಾರ್ಥಿಗಳು, ಅತ್ಯಂತ ಆಸಕ್ತಿಯಿಂದ ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.  ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯ ತೀರ್ಪುಗಾರರ ಸಮಿತಿ ಸದಸ್ಯರಾಗಿ ಭಾಗವಹಿಸಿದ್ದ ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್. ರಾಜ್‍ಕುಮಾರ್ ಅವರು ವಿಧಾನಮಂಡಲ ಕಲಾಪವನ್ನು ಆಯೋಜಿಸಿ, ಶಿಸ್ತು ಬದ್ಧವಾಗಿ ಕಲಾಪ ನಡೆಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.  ಸಂಗೀತ ಎಂಬ ವಿದ್ಯಾರ್ಥಿನಿ ಸಭಾಧ್ಯಕ್ಷರಾಗಿ ಆಯ್ಕೆಗೊಂಡರೆ, ಅಕ್ರಂ ವಿದ್ಯಾರ್ಥಿ ಮುಖ್ಯಮಂತ್ರಿಯಾಗಿ, ನಂತರ ವಿವಿಧ ವಿದ್ಯಾರ್ಥಿಗಳು ಗೃಹ, ಲೋಕೋಪಯೋಗಿ, ಅಬಕಾರಿ, ಆರೋಗ್ಯ ಸೇರಿದಂತೆ ಹಲವು ಸಚಿವ ಸ್ಥಾನದ ಖಾತೆಗಳನ್ನು ನಿರ್ವಹಿಸಿದರು.  ಯುವ ಸಂಸತ್ ಸ್ಪರ್ಧೆಯಲ್ಲಿ ಸಾಹಿತಿ ಅನಂತಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸುವ ಕಾರ್ಯಸೂಚಿಯಂತೆ ಕಲಾಪ ಆರಂಭಗೊಂಡು, ಎಲ್ಲರೂ ಎರಡು ನಿಮಿಷ ಮೌನ ಆಚರಿಸುವ ಮೂಲಕ ದಿವಂಗತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.  ನಂತರ ಆರಂಭಗೊಂಡ ಪ್ರಶ್ನೋತ್ತರ ಕಲಾಪ, ರಾಜಕೀಯ ಮುತ್ಸದ್ದಿಗಳನ್ನೂ ನಾಚಿಸುವಂತಿತ್ತು.  ಗ್ರಾಮೀಣ ಪ್ರದೇಶಗಳ ರಸ್ತೆ ದುರಸ್ತಿ, ಶಿಕ್ಷಕರ ವರ್ಗಾವಣೆ ನೀತಿ, ತಾಯಿ-ಶಿಶು ಮರಣ ಪ್ರಕರಣಗಳು, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಕಂಪ್ಯೂಟರ್ ಶಿಕ್ಷಣ ನೀತಿ, ಬಸ್ ಪ್ರಯಾಣದರ ಹೆಚ್ಚಳ, ಬಾಲ್ಯ ವಿವಾಹ ಪದ್ಧತಿ ಮುಂತಾದ ವಿಷಯಗಳ ಬಗ್ಗೆ ವಿರೋಧ ಪಕ್ಷ ವಹಿಸಿದ್ದ ವಿದ್ಯಾರ್ಥಿ ಸಮೂಹ ಆಡಳಿತ ಪಕ್ಷದ ವಿದ್ಯಾರ್ಥಿ ಸಮೂಹವನ್ನು ಪೇಚಿಗೆ ಸಿಲುಕಿಸಿ, ನಂತರ ಸಭಾಧ್ಯಕ್ಷರ ಮಧ್ಯಸ್ಥಿಕೆಯಲ್ಲಿ ಆಡಳಿತ ಪಕ್ಷದ ಉತ್ತರಕ್ಕೆ ತೃಪ್ತಿ ಪಡುವಂತಹ ಪ್ರಸಂಗಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಪ್ರಶಂಸೆಗೆ ಪಾತ್ರವಾಯಿತು.   ಸರ್ಕಾರ ಜನರ ನಂಬಿಕೆ ಮತ್ತು ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು ಎನ್ನುವ ನೀತಿ ಯುವ ಸಂಸತ್ ಸ್ಪರ್ಧೆಯಲ್ಲಿ ಬಿಂಬಿತವಾಯಿತು.      ಉಪನ್ಯಾಸಕರಾದ ಬಿ.ಎನ್. ತಳವಾರ, ಮಹೇಶ್ ಅವರು ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿದ್ದರು.    ಜಿಲ್ಲೆಯ ಎಲ್ಲ ತಾಲೂಕುಗಳ ಪ್ರೌಢಶಾಲಾ ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

Leave a Reply